ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 19
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭ ವಿಳಂಬವಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಬಾಣಂತಿಯರು ಹಾಗೂ ಗರ್ಭಿಣಿಯರ ಜೀವಕ್ಕೆ ಆಪತ್ತು ಎದುರಾಗಿದೆ. ಆಸ್ಪತ್ರೆ ಆರಂಭಕ್ಕೆ ಯಾಕಿಷ್ಟು ನಿರ್ಲಕ್ಷö್ಯ ? ಎಂದು ಸಾರ್ವಜನಿಕ ಪ್ರಶ್ನಿಸಿದ್ದಾರೆ.
ಐದು ವರ್ಷಗಳಾದರೂ ಸಾರ್ವಜನಿಕರ ಸೇವೆಗಿಲ್ಲ !!
ಕಳೆದ 2020, ಏಪ್ರಿಲ್‌ನಲ್ಲಿ ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತ್ತು. ಕಟ್ಟಡ ನಿರ್ಮಾಣಕ್ಕೆ ಆಗ ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿತ್ತು. 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದ್ದು, ಮೂವರು ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ. ಆಸ್ಪತ್ರೆ ಮಂಜೂರಾಗಿ 5 ವರ್ಷಗಳು ಗತಿಸಿದರೂ ಇಲ್ಲಿಯವರೆಗೂ ಸಾರ್ವಜನಿಕರ ಸೇವೆಗೆ ದೊರೆಯದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲೂಕು ಆಸ್ಪತ್ರೆಗೆ ಹೆಚ್ಚಿದ ಒತ್ತಡ
ನಗರದ 100 ಹಾಸಿಗೆ ಸಾಮರ್ಥ್ಯದ ತಾಲೂಕಾ ಆಸ್ಪತ್ರೆಗೆ, ಒಳ ರೋಗಿಗಳು ಹಾಗೂ ಹೊರರೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಪ್ರಸೂತಿ ವಿಭಾಗದಲ್ಲಿ ಒತ್ತಡ ಜಾಸ್ತಿ. ರೋಗಿಗಳಿಗೆ ತಕ್ಕಂತೆ ವೈದ್ಯರು, ಸಿಬ್ಬಂದಿ ಕೊರತೆ ಚಿಕಿತ್ಸೆಗೆ ಬರುವವರನ್ನು ಕಾಡುತ್ತಿದೆ. ಆಸ್ಪತ್ರೆ ಕಟ್ಟಡ ಚಿಕ್ಕದಾಗಿರುವುದರಿಂದ ರೋಗಿಗಳಿಗೆ ಬೆಡ್ ಹೊಂದಿಸುವುದು, ವಿವಿಧ ವೈದ್ಯಕೀಯ ಪರೀಕ್ಷೆ ಒಳಪಡಿಸುವುದು ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಸವಾಲು ಎದುರಾಗಿದೆ. ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾದರೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪ್ರಸವಪೂರ್ವ ಮತ್ತು ಪ್ರಸವ ನಂತರದ ಚಿಕಿತ್ಸೆಗಳು, ಮಕ್ಕಳಿಗೆ ವಿಶೇಷ ಶುಶ್ರೂಷೆ-ಚಿಕಿತ್ಸೆ ಹಾಗೂ ಆರೈಕೆ ದೊರೆಯಲಿದೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಉಂಟಾಗುತ್ತಿರುವ ಜನದಟ್ಟಣೆಯೂ ಹತೋಟಿಗೆ ಬರಲಿದೆ.

ಆಸ್ಪತ್ರೆಗೆ ಬಂದ ಸಾಮಗ್ರಿ, ಸಲಕರಣೆ
ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಪೂರ್ಣಗೊಂಡು, ನೀರು, ತಾತ್ಕಾಲಿಕ ವಿದ್ಯುತ್ ಸಂಪರ್ಕ, ಜನರೇಟರ್ ಸೇರಿದಂತೆ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ವಿದ್ಯುತ್ ಪರಿವರ್ತಕ ಕೂಡಿಸುವುದು ಬಾಕಿ ಇದೆ. ಬೆಡ್, ಸ್ಟ್ರೆಚರ್, ಅಗತ್ಯ ವ್ಯದ್ಯಕೀಯ ಸಲಕರಣೆಗಳನ್ನು ಶನಿವಾರ ಕಾರ್ಮಿಕರು ಆಸ್ಪತ್ರೆಯ ಕೊಠಡಿಗೆ ಸಾಗಿಸಿದ್ದು ಕಂಡುಬಂತು. ಇನ್ನೂ ಶಸ್ತ್ರ ಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕದ ಪರಿಕರಗಳು, ನವಜಾತ ಶಿಶುಗಳಿಗೆ ಇನ್ಸುಲೇಟರ್, ಅಗತ್ಯ ಪೀಠೋಪಕರಣಗಳು ಹಾಗೂ ಇನ್ನಿತರೆ ಪೀಠೋಪಕರಣಗಳು ಬಂದಿಲ್ಲ.

ಆಕ್ಸಿಜನ್ ಘಟಕ ಅಳವಡಿಕೆ ಬಾಕಿ
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅತ್ಯವಶ್ಯವಾಗಿ ಆಕ್ಸಿಜನ್ ಘಟಕ ಅಳವಡಿಕೆ ಮಾಡಬೇಕಿದ್ದು, ಈ ಕೆಲಸ ಇಷ್ಟರಲ್ಲೇ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲ ಕಂಪನಿಗಳು ಆಸ್ಪತ್ರೆ ಕಟ್ಟಡ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆಂದು ತಿಳಿದುಬಂದಿದೆ.
‘ಅಗತ್ಯ ವೈದ್ಯರು, ಸಿಬ್ಬಂದಿ ನೇಮಕವಾಗಲಿ’
60 ಹಾಸಿಗೆಯ ಸೌಲಭ್ಯವುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಾಜಿಸ್ಟ್, ಹಿರಿಯ ಶುಶ್ರೂಷಕ, ಶುಶ್ರೂಷಕ, ಫಾರ್ಮಾಸಿಸ್ಟ್, ಎಫ್‌ಡಿಎ, ಎಸ್‌ಡಿಎ, ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್ ನೌಕರರು ಹೀಗೆ ಅಗತ್ಯ ಹುದ್ದೆಗಳಿಗೆ ಶೀಘ್ರ ನೇಮಕ ಮಾಡಿಕೊಂಡು ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಅತಿ ಶೀಘ್ರ ಒದಗಿಸಬೇಕೆಂಬುದು ಮಹಿಳಾ ಸಂಘಟನೆಗಳ ಒತ್ತಾಯವಾಗಿದೆ.
ಮುಂದಿನ ತಿಂಗಳು ಉದ್ಘಾಟನೆಯಾಗುತ್ತಾ ?
“ಈಗಾಗಲೇ ಕಟ್ಟಡದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಇಷ್ಟರಲ್ಲೇ ಕಟ್ಟಡವನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಲಾಗುವುದು. ಈಗಾಗಲೇ ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಂದಿನ ತಿಂಗಳು ಆಸ್ಪತ್ರೆಯನ್ನು ಉದ್ಘಾಟಿಸಲಾಗುತ್ತದೆ ಎಂಬ ಮಾಹಿತಿ ಇದೆ” ಎಂದು ಆಸ್ಪತ್ರೆಯ ಕಟ್ಟಡ ನಿರ್ವಹಣೆಯ ಜವಾಬ್ದಾರಿ ಹೊತ್ತ ಗುತ್ತಿಗೆದಾರರ ಕಡೆಯವರೊಬ್ಬರು ತಿಳಿಸಿದರು.