(ವಿಶ್ಲೇಷಣೆ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಆಗಸ್ಟ್ 13
ಹೊಟ್ಟೆ ತುಂಬ ಅನ್ನ, ಕೈತುಂಬ ಕೆಲಸ ಕೊಡುವ ತುಂಗಭದ್ರಾ ಜಲಾಶಯ ಈ ಬಾರಿ ಜಲ್ದಿ ತುಂಬಿ ತುಳುಕಿದ ಸುದ್ದಿ ಕೇಳಿಯೇ ಹಿರಿ ಹಿರಿ ಹಿಗ್ಗಿದ್ದ ನಾಲ್ಕು ಜಿಲ್ಲೆಯ ರೈತರಿಗೆ, ಡ್ಯಾಮಿನ ಗೇಟೊಂದು ನೀರಿಗೆ ಕೊಚ್ಚಿಹೋದ ಸುದ್ದಿ ತಿಳಿದು ದಡಾಲನೇ ಪ್ರಪಾತಕ್ಕೆ ಬಿದ್ದಂತಾಗಿದ್ದಾರೆ. ಕೆಲವರಿಗಂತೂ ಇದು ಕನಸೋ ನನಸೋ ಎಂದು ಮಾನಸಿಕವಾಗಿ ವಿಲಿವಿಲಿ ಒದ್ಡಾಡಿದ ಅನುಭವ ಉಂಟಾಗಿದೆ.
ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಆಗಸ್ಟ್ 10, 2024 ರ ಶನಿವಾರ ರಾತ್ರಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ಡ್ಯಾಮು ತುಂಬಿದ ಖುಷಿಯಲಿದ್ದವರಿಗೆ ಬರಸಿಡಿಲು ಬಡಿದಂತಾಗಿದೆ. ಏಳು ದಶಕಗಳ ಇತಿಹಾಸದಲ್ಲೇ ಇಂತಹದ್ದೊಂದು ದುರಂತ ಮೊದಲ ಬಾರಿಗೆ ಘಟಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜನರ ಬದುಕು-ಬವಣೆ ತುಂಗಭದ್ರಾ ನದಿ ಹಾಗೂ ಅಣೆಕಟ್ಟೆಯೊಂದಿಗೆ ಬೆಸೆದುಕೊಂಡಿರುವುದೇ ಇದಕ್ಕೆ ಕಾರಣ.
ಅಣೆಕಟ್ಟೆಯ ಕ್ರಸ್ಟ್ಗೇಟ್ ಕೊಚ್ಚಿಹೋದ ಪರಿಣಾಮ ನಾಲ್ಕು ಜಿಲ್ಲೆಯ ರೈತರು-ಜನರು ಆತಂಕದ ಮಡುವಿನಲ್ಲಿದ್ದರೆ, ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳ ರಾಜಕೀಯ ಕೆಸರೆರಚಾಟ ಸಾರ್ವಜನಿಕರಲ್ಲಿ ಬೇಸರ ತರಿಸಿದೆ. ಬರದಿಂದ ಬೇಸತ್ತವರಿಗೆ ಮಳೆ ಕೈಹಿಡಿಯಿತು ಎನ್ನುವಷ್ಟರಲ್ಲಿ, ಗೇಟ್ ಮುರಿದ ಆಘಾತ ಹೊಟ್ಟೆ-ಬಟ್ಟೆ-ಉದ್ಯೋಗಕ್ಕೆ ಮುಂದೇನು ? ಎನ್ನುವ ಪ್ರಶ್ನೆ ಕೃಷಿ ಕೂಲಿಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಎದುರಾಗಿದೆ. ಮುಂಬರುವ ದಿನಗಳಲ್ಲಿ ಹಿಂಗಾರು ಮಳೆ ಕೈ ಹಿಡಿಯದಿದ್ದರೆ, ನಾಲ್ಕು ಜಿಲ್ಲೆಗಳ ಜನರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವ ಜೊತೆಗೆ, ಕುಡಿಯವ ನೀರಿಗೂ ಪಡಿಪಾಟಲು ಅನುಭವಿಸಬೇಕಾಗಿ ಬರಬಹುದು ಎಂದು ಅಂದಾಜಿಸಲಾಗಿದೆ.
ನಿರ್ವಹಣೆಯ ಸುತ್ತ ಅನುಮಾನದ ಹುತ್ತ ?
ನೀರಿನ ರಭಸಕ್ಕೆ ತುಂಡರಿಸಿ ಹೋಗಿದೆ ಎಂದು ಹೇಳಲಾಗುವ ಕ್ರಸ್ಟ್ಗೇಟ್ ಚೈನು ಪ್ರಕರಣಕ್ಕೆ ಸಂಬAಧಿಸಿ, ಸಾರ್ವಜನಿಕ ವಲಯದಲ್ಲಿ ದಿನದಿಂದ ದಿನಕ್ಕೆ ಆಕ್ರೋಶ ಹೆಚ್ಚುತ್ತಿದ್ದು, ಡ್ಯಾಮಿನ ಗೇಟುಗಳ ನಿರ್ವಹಣೆಯ ಬಗ್ಗೆ ಅನುಮಾನಗಳು ಹೆಚ್ಚುತ್ತಿವೆ. ಮಾಜಿ ಕಾಡಾ ಅಧ್ಯಕ್ಷರು ಹಾಗೂ ಕೊಪ್ಪಳ ಲೋಕಸಭೆ ಮಾಜಿ ಸದಸ್ಯರೂ ಆದ, ಕೆ.ವಿರೂಪಾಕ್ಷಪ್ಪ ಅವರು “ಸಮರ್ಥ ಅಧಿಕಾರಿಗಳ ಕೊರತೆಯಿಂದ ಇಂತಹ ಅವಘಡ ಸಂಭವಿಸಿದೆ. ಜಲಾಶಯದ ನಿರ್ವಹಣೆಯಲ್ಲಿ ಶೇಕಡಾ ೭೫ರಷ್ಟು ಸಿಬ್ಬಂದಿ ಪ್ರಭಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರ ಬೇಜವಾಬ್ದಾರಿಯೇ ಇಂತಹ ಘಟನೆಗೆ ಕಾರಣ” ಎಂದು ವಿಶ್ಲೇಷಿಸಿದ್ದು, ತುಂಗಭದ್ರಾ ಕಾಡಾದ ಆಡಳಿತ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಮತ್ತಷ್ಟು ಅನುಮಾನ ವ್ಯಕ್ತಪಡಿಸುವಂತಾಗಿದೆ. ಗೇಟುಗಳ ನಿರ್ವಹಣೆಯಲ್ಲಿ ಅದಕ್ಷ, ನೈಪುಣ್ಯತೆ ಕೊರತೆಯ ಕಳಪೆ ಕಂಪನಿಗಳು ರಾಜಕೀಯ ಪ್ರಭಾವದ ಮೂಲಕ ಹಸ್ತಕ್ಷೇಪ ಮಾಡಿರುವುದು, ಕಾಡಾದ ಆಡಳಿತ ಮಂಡಳಿಯ ಬೇಜವಾಬ್ದಾರಿ, ಕಾಲ ಕಾಲಕ್ಕೆ ಮೇಲ್ವಿಚಾರಣೆಯ ಕೊರತೆ ಹೀಗೆ ಸಾರ್ವಜನಿಕರ ವಲಯದಿಂದ ಹಾಗೂ ಪ್ರಜ್ಞಾವಂತರಿಂದ ಹತ್ತು ಹಲವು ವಿಷಯಗಳು ವಿಮರ್ಶೆಗೊಳಪಡುತ್ತಿವೆ.
ಅಧಿಕಾರಿಗಳತ್ತ ಬೊಟ್ಟು ?
ಕಾರ್ಯಸ್ಥಗಿತಗೊಂಡ ಟಿಎಸ್‌ಪಿ (ತುಂಗಭದ್ರಾ ಸ್ಟೀಲ್ ಪ್ರೊಡಕ್ಟ್)ಯ ನೌಕರರೊಬ್ಬರು, ಅಧಿಕಾರಿಗಳು ಡ್ಯಾಮಿನ ಗೇಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಈ ಅವಘಡಕ್ಕೆ ಕಾರಣ ಎಂದು ಹೇಳುವ ಜೊತೆಗೆ, ಏನೇನೋ ಪ್ರಭಾವ ಬಳಸಿಕೊಂಡು ತುಂಗಭದ್ರಾ ಮಂಡಳಿಯಿAದ ಗೇಟ್ ನಿರ್ವಹಣೆಯ ಕೆಲಸವನ್ನು ಹೊಡೆದುಕೊಂಡಿರುವ ಕಂಪನಿಗಳ ಬೇಜವಾಬ್ದಾರಿಯಿಂದ ಡ್ಯಾಮಿನ ಗೇಟಿಗೆ ಇಂತಹ ದುಃಸ್ಥಿತಿ ಬಂದಿದೆ ಎಂದು ಮಾಧ್ಯಮವೊಂದರಲ್ಲಿ ಪ್ರಸ್ತಾಪಿಸಿದ್ದು, ಸಾರ್ವಜನಿಕ ವಲಯದಲ್ಲಿ ಮಂಡಳಿಯ ಬಗ್ಗೆ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಈ ನಡುವೆ ತುಂಗಭದ್ರಾ ಜಲಾಶಯದಲ್ಲಿ 1ರಿಂದ 16ರವರೆಗಿನ ಗೇಟುಗಳು ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ನಿರ್ವಹಣೆಯಲ್ಲಿದ್ದರೆ, ಇನ್ನುಳಿದ 17ರಿಂದ 33 ಗೇಟುಗಳು ಕರ್ನಾಟಕ ಸರ್ಕಾರದ ಜವಾಬ್ದಾರಿಯಲ್ಲಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಡ್ಯಾಮು ಒಂದೇ ಆದರೂ ಎರಡು ಜವಾಬ್ದಾರಿ ಏನಿದು ? ಎಂದು ಬಹಿರಂಗವಾಗಿ ಚರ್ಚಿಸುವಂತಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ‘ರಾಜಕಾರಣಿಗಳ ಪ್ರಚಾರದ ಆರ್ಭಟ’ ?
೧೯ನೇ ಕ್ರಸ್ಟ್ಗೇಟ್ ನೀರುಪಾಲಾಗಿದ್ದರಿಂದ ಎಲ್ಲ ಗೇಟುಗಳಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗಿದ್ದು, ತುಂಗಭದ್ರೆ ಎಲ್ಲೆ ಮೀರಿ ಬೋರ್ಗರೆಯುತ್ತಿದ್ದಾಳೆ. ವಿಪರ್ಯಾಸವೆನ್ನುವಂತೆ ಬಹುತೇಕ ರಾಜಕಾರಣಿಗಳು ಡ್ಯಾಮಿನ 19ನೇ ಗೇಟಿನ ಆಸುಪಾಸು ಸುಳಿದು ಅತ್ತಿಂದಿತ್ತ ಇತ್ತಿಂದತ್ತ ನಡೆದಾಡುತ್ತ ತರಹೇವಾರಿ ಫೋಟೋಗಳಿಗೆ ಪೋಸು ಕೊಡುತ್ತಿದ್ದಾರೆ. ಪೋಸು ನೀಡಿದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಅಬ್ಬರಿಸುತ್ತಿವೆ. ಶಾಸಕರು, ಸಂಸದರು, ಮಾಜಿ ಜನಪ್ರತಿನಿಧಿಗಳು, ನಾನಾ ಪಕ್ಷಗಳ ಮುಖಂಡರು ಹೀಗೆ ಹತ್ತು ಹಲವು ರಾಜಕಾರಣಿಗಳ ಫೋಟೋಗಳನ್ನು ಅವರ ಹಿಂಬಾಲಕರು, ಅಭಿಮಾನಿಗಳು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಝೇಂಕರಿಸುತ್ತಿದ್ದಾರೆ. ರಾಜಕಾರಣಿಗಳ ಈ ನಡೆಗೆ ರೈತಾಪಿ ವರ್ಗದಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
“ಡ್ಯಾಮಿನ ನೀರು ಹೊರಗೋಗೋದು ನೋಡಿ ಹೊಟ್ಟಿ ರುಮ್ ಅಂತೈತಿ ಯಪ್ಪಾ” ?
“ಡ್ಯಾಮಿನ ಗೇಟು ಮುರಿದು ಸುದ್ದಿ ಕೇಳಿ ಉಣ್ಣಾಕ ಮನಸು ಬರವಲ್ತು ರೀ ಯಪ್ಪಾ. ಸಾಲ-ಸೋಲಾ ಮಾಡಿ ಎರಡ್ಮೂರು ಎಕ್ರೆದಾಗ ಮೊನ್ನೆ ಮೊನ್ನೆನ ಸಸಿ ನಾಟಿ ಮಾಡೀವಿ. ಡ್ಯಾಮು ತುಂಬಿದಾಗನ ನೀರಿಂದು ತ್ರಾಸ ಐತಿ, ಇನ್ನೂ ಡ್ಯಾಮಿನಾಗ ಸ್ವಲ್ಪ ನೀರು ಉಳದ್ರ ನಮ್ಮ ಗದ್ದೀಗೆ ನೀರು ರ‍್ತಾವೋ ಇಲ್ಲೋ ಅಂತ ಅನುಮಾನ ಕಾಡಾಕ ಅತ್ತೈತಿ. ಹೋದ ವರ್ಷ ಬರಗಾಲ ಅಂತ ಒಂದಾ ಬೆಳಿ ಆತಿ. ಈ ವರ್ಷ ಮಳಿ ಇದ್ರೂ ಒಂದೇ ಬೆಳಿ ಅಂತಾರ” ಎಂದು ತಾಲೂಕಿನ ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
“ಎಲ್ಲಾ ಪಕ್ಷದ ರಾಜಕಾರಣಿಗಳು ಅಷ್ಟ ನಾಟ್ಕ ಮಾಡಾರ” ?
“ಗೇಟು ಮುರುದೋದಿದ್ದೇ ತಡ ದುಬು.. ದುಬು.. ಡ್ಯಾಮಿಗೆ ಬಂದು ಒಂದೇ ಸಮನೆ ಸರ್ಕಾರದ ವಿರುದ್ಧ, ಈ ಬಿಜೆಪಿಯವರು ಮಾತಾಡಕತ್ತಾö್ಯರ, ಐಸಿಸಿ ಮೀಟಿಂಗ ಕರಿಲಾರದಾಗ, ಚೀಫ್ ಎಂಜಿನಿಯರ್ ನೇಮಕ ಮಾಡ್ಲಾರದಾಗ, ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರಕ್ಕೆ ಎರಡ್ಮೂರು ಬಾರಿ ಪತ್ರ ರ‍್ದಾಗ ಯಾಕ ಇವ್ರು ಧ್ವನಿ ಎತ್ಲಿಲ್ಲ. ಇನ್ನೂ ಕಾಂಗ್ರೆಸ್ ಸರ್ಕಾರನೂ ಕೇಂದ್ರ ಸರ್ಕಾರ ನಿರ್ಲಕ್ಷö್ಯ ಮಾಡಿದೆ ಅಂತ ಈಗ ಹೇಳಾಕತ್ತಾö್ಯರ, ಹಂಗಾದ್ರೆ ಇಷ್ಟು ದಿನ ಯಾಕ ಈ ವಿಷಯ ಮುಚ್ಚಿಟ್ಟು. ಜನ್ರಿಗೆ ತಿಳಿಸಬೇಕಿತ್ತೋ ಇಲ್ವೋ. ಎರಡೂ ಪಕ್ಷದವರು ಕೆಸರೆರಚಾಟ ಮಾಡಿ ರೈತ್ರನ್ನ ದಾರಿ ತಪ್ಪಾಸಕ ಹತ್ತಾö್ಯರ. ಏನು ಮಾಡ್ತೀರೋ ಬಿಡ್ತಿರೋ, ನಮಗ ಗೊತ್ತಿಲ್ಲ, ಬಿಜೆಪಿ-ಕಾಂಗ್ರೆಸ್‌ನವರು ಎರಡು ಬೆಳಿಗೆ ನೀರು ಕೊಡ್ರಿ” ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಜನಪ್ರತಿನಿಧಿಗಳು ಇಷ್ಟು ದಿನ ಎಲ್ಲಿ ಹೋಗಿದ್ರು ?’
“ಗೇಟು ಮುರಿದು ಅಪಾರ ಪ್ರಮಾಣದ ನೀರು ನದಿಪಾಲಾಗುತ್ತಿರುವ ಸಂದರ್ಭದಲ್ಲಿ ಅತಿಥಿಗಳು ಬಂದಂತೆ ಅಚ್ಚಕಟ್ಟು ಪ್ರದೇಶದ ಜಿಲ್ಲೆಗಳ ವಿವಿಧ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು ಡ್ಯಾಮಿಗೆ ಎಡತಾಕುತ್ತಿದ್ದಾರೆ. ಇಷ್ಟು ದಿನ ಇವರು ಎಲ್ಲಿಗೆ ಹೋಗಿದ್ದರು ? ಡ್ಯಾಮಿನ ಸುರಕ್ಷತೆ, ಗೇಟುಗಳ ಕಾರ್ಯನಿರ್ವಹಣೆ, ಕಾಡಾದ ಆಡಳಿತ ವೈಖರಿಯ ಬಗ್ಗೆ ಈ ಮುಂಚೆ ಒಂದು ದಿನವಾದರೂ ಇಲ್ಲಿಗೆ ಬಂದು ಇವರು ವಿಚಾರಿಸಿದ್ದಾರೆಯೇ ? ಅಧಿಕಾರಿಗಳಿಗೆ ಸಲಹೆ-ಸೂಚನೆ ಕೊಟ್ಟಿದ್ದಾರೆಯೇ ? ಇಲ್ಲಿನ ಲೋಪಗಳ ಬಗ್ಗೆ, ಕೊರತೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರೆಯೇ ?. ಐಸಿಸಿ ಮೀಟಿಂಗ್ ಕರೆಯದೇ ನೀರು ಡ್ಯಾಮಿನಿಂದ ಹರಿಬಿಟ್ಟಾಗಲೂ ಇವರು ತುಟಿಪಿಟಕ್ ಎಂದಿಲ್ಲ. ರೈತರು ಎಲ್ಲಿ ಸಿಟ್ಟಿಗೆದ್ದು ಉಗುಳುತ್ತಾರೆ ಎಂದು ಈಗ ಡ್ಯಾಮಿಗೆ ಭೇಟಿ ಕೊಟ್ಟು ಮೊಸಳೆ ಕಣ್ಣೀರು ಸುರಿಸಲು ಬರುತ್ತಿದ್ದಾರೆ. ‘ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ’ ಎನ್ನುವ ಹಾಗೆ ಈಗ ಡ್ಯಾಮಿಗೆ ಬಂದು ರೌಂಡು ಹೊಡೆದರೆ ಏನು ಫಲ” ಎಂದು ಡ್ಯಾಮಿಗೆ ಭೇಟಿ ನೀಡಿದ ರೈತರೊಬ್ಬರು ಜನಪ್ರತಿನಿಧಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ.
“ಗೇಟಷ್ಟೇ ಮುರಿದಿಲ್ಲ, ನಮ್ಮ ಉದ್ಯೋಗದ ಕೈಗಳು ಮುರಿದಂತಾಗಿದೆ”
“ನಾಲ್ಕು ಜಿಲ್ಲೆಗಳ ಲಕ್ಷಾಂತರ ಕೃಷಿ ಕೂಲಿಕಾರ್ಮಿಕರಿಗೆ ತುಂಗಭದ್ರೆ ತಾಯಿ ಉದ್ಯೋಗದಾತೆಯಾಗಿದ್ದಾಳೆ. ಅವಘಡ ಸಂಭವಿಸಿ ಸುದ್ದಿ ಕೇಳಿಯೇ ಸಂಕಟವಾಗಿದೆ. ಅಪಾರ ನೀರು ನದಿಗೆ ಹರಿದು ಹೋಗುತ್ತಿರುವುದರಿಂದ ಈ ಬಾರಿ ಎರಡು ಬೆಳೆ ಇರಲಿ, ಒಂದೇ ಬೆಳೆಯೂ ತೂಗುಯ್ಯಾಲೆಯಲ್ಲಿದೆ. ಡ್ಯಾಮಿನ ಗೇಟಸ್ಟೇ ಮುರಿದಿಲ್ಲ. ನಮ್ಮ ಕೆಲಸದ ಕೈಗಳು ಮುರಿದಂತಾಗಿವೆ. ನೀರಿನ ಅಭಾವ ಉಂಟಾಗಿ ಇಲ್ಲಿ ಕೆಲಸ ಸಿಗದಿದ್ದರೆ ಬೆಂಗಳೂರು ಇಲ್ಲವೇ ಮುಂಬೈಗೆ ಕೆಲಸ ಅರಸಿ ಕುಟುಂಬ ಸಮೇತ ಗುಳೆ ಹೋಗಬೇಕಾದ ಅನಿವಾರ್ಯತೆ ಇದೆ” ಎಂದು ಕೃಷಿ ಕೂಲಿಕಾರ್ಮಿಕರೊಬ್ಬರು ನೊಂದು ಅಳಲು ತೋಡಿಕೊಂಡಿದ್ದಾರೆ.
‘ಕೇಂದ್ರ-ರಾಜ್ಯ ಸರ್ಕಾರಗಳ ಮುನಿಸಿನ ನಡುವೆ ರೈತರ ಹಿತ ಕಾಯುವವರು ಯಾರು’?
“ತುಂಗಭದ್ರಾ ಕಾಡಾ ಕೇಂದ್ರ ಸರ್ಕಾರದ ಕೈಯಲ್ಲಿದೆ. ಜಲಾಶಯಕ್ಕೆ ಸಂಬಂಧಿಸಿದಂತೆ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡ್ಮೂರು ಬಾರಿ ಪತ್ರ ಬರೆದು ವಿನಂತಿಸಲಾಗಿದೆ. ಸ್ಪಂದಿಸದೇ ಕೇಂದ್ರ ಸರ್ಕಾರ ಬೇಜವಾಬ್ದಾರಿ ವಹಿಸಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸಿದ್ದು, ಇನ್ನೂ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ ಹಲವು ಪ್ರಮುಖರು ರಾಜ್ಯ ಸರ್ಕಾರದ ವೈಫಲ್ಯವೇ ಈ ಅವಘಡಕ್ಕೆ ಕಾರಣ ಎಂದು ಆಪಾದಿಸಿದ್ದಾರೆ. ಎರಡು ಪಕ್ಷಗಳು ಸಮಸ್ಯೆಯನ್ನು ರಾಜಕೀಯಗೊಳಿಸುವ ಮೂಲಕ, ಮೂಲ ಸಮಸ್ಯೆಯನ್ನು ಮುಚ್ಚಿಟ್ಟು, ರೈತರಿಗೆ ದ್ರೋಹ ಮಾಡುತ್ತಿವೆ. ಅಂತಾರಾಜ್ಯ ವ್ಯಾಪ್ತಿಗೆ ಒಳಪಡುವ ಡ್ಯಾಮಿನ ಸುರಕ್ಷತೆ, ಭದ್ರತೆಯ ದೃಷ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಭಾಗಿಗಳು, ಈ ಅವಘಡಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಹೊಣೆ ಹೊತ್ತುಕೊಳ್ಳಬೇಕು. ಆದರೆ ತಮ್ಮ ಕಾರ್ಯವೈಫಲ್ಯವನ್ನು ಮರೆಮಾಚಲು ಪರಸ್ಪರ ಒಬ್ಬರಿಗೊಬ್ಬರು ಬೊಟ್ಟು ಮಾಡಿ ತೋರಿಸುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಕುತ್ತು ತಂದಿದ್ದಾರೆ. ಇವರಿಂದ ಡ್ಯಾಮಂತೂ ಸುಲಭವಾಗಿ ಕಟ್ಟಲು ಸಾಧ್ಯವಿಲ್ಲ, ಕನಿಷ್ಠ ಪಕ್ಷ ಕಟ್ಟಿದ ಡ್ಯಾಮಿನ ನೀರನ್ನಾದರೂ ಉಳಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಲಿ” ಎಂದು ರೈತ ಮುಖಂಡರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.