ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 10
ಹಾಸ್ಟೆಲ್ ಸೌಕರ್ಯಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿಯರು, ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ದಿನವೂ ಅಲೆದಾಡುತ್ತಿದ್ದು, ಹೊಸದಾಗಿ ಮಂಜೂರಾಗಿರುವ ಹಾಸ್ಟೆಲ್ ಆರಂಭ ಯಾವಾಗ ಎಂದು ವಿದ್ಯಾರ್ಥಿ ಪಾಲಕರು ಪ್ರಶ್ನಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಹಾಸ್ಟೆಲ್ ಮಂಜೂರು
2024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಸಿಂಧನೂರು ಟೌನ್‌ಗೆ 24-10-2024ರಂದು ಮಂಜೂರಾಗಿದ್ದು, ಸರ್ಕಾರದ ಅಧೀನ ಕಾರ್ಯದರ್ಶಿ-2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ. ಹಾಸ್ಟೆಲ್ ಮಂಜೂರಾಗಿ 46 ದಿನಗಳು ಕಳೆದರೂ ಇಲ್ಲಿಯವರೆಗೂ ಇಂದು, ನಾಳೆ, ನಾಡಿದ್ದು ಎನ್ನುತ್ತ ಕಾಲಹರಣ ಮಾಡಲಾಗುತ್ತಿದೆಯೇ ಹೊರತು, ಚುರುಕಾಗಿ ಪ್ರಕ್ರಿಯೆ ಕೈಗೊಂಡು ವಿದ್ಯಾರ್ಥಿನಿಯರಿಗೆ ಸೌಕರ್ಯ ಕಲ್ಪಿಸುವ ಕೆಲಸವಾಗುತ್ತಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.
ಹಾಸ್ಟೆಲ್‌ಗಳ ಕೊರತೆ, ಹೆಚ್ಚಿದ ಬೇಡಿಕೆ
ಪ್ರಸಕ್ತ ಸಾಲಿನಲ್ಲಿ 3ರಿಂದ 4 ಹಾಸ್ಟೆಲ್‌ಗಳು ಸಿಂಧನೂರು ತಾಲೂಕಿಗೆ ಮಂಜೂರಾಗಲಿದ್ದು, ಕನಿಷ್ಠ 400 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ದೊರೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಸಿಂಧನೂರು ತಾಲೂಕಿಗೆ ಕೇವಲ 1 ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರ್ವಿಹಾಳಗೆ 1 ಹಾಸ್ಟೆಲ್ ಮಂಜೂರಾಗಿದ್ದರಿಂದ ಹಾಸ್ಟೆಲ್‌ಗಳ ಕೊರತೆ ಹೆಚ್ಚಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿ ಪಾಲಕರು ದೂರುತ್ತಾರೆ.
ಬಾಡಿಗೆ ಕಟ್ಟಡದ ಹುಡುಕಾಟ
ಮಂಜೂರಾಗಿರುವ ಹೊಸ ಹಾಸ್ಟೆಲ್ ಆರಂಭಿಸಲು ಇಲಾಖೆಯವರು ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದ ಹುಡುಕಾಟ ನಡೆಸಿದ್ದು, ಕಟ್ಟಡ ಸಕಾಲಕ್ಕೆ ದೊರೆಯದ ಕಾರಣ ವಿಳಂಬವಾಗಿದೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಕಟ್ಟಡ ದೊರೆತಿದ್ದು, ಬುಧವಾರ ಇಲ್ಲವೇ ಗುರುವಾರದಷ್ಟೊತ್ತಿಗೆ ಹಾಸ್ಟೆಲ್ ಆರಂಭಿಸಲಾಗುತ್ತದೆಂಬ ಮಾತುಗಳು ಕೇಳಿಬರುತ್ತಿವೆ.
‘ವಿದ್ಯಾರ್ಥಿನಿಯರ ಹೊಸ ಹಾಸ್ಟೆಲ್ ಆರಂಭ ಯಾವಾಗ ?’
“ಕಳೆದ ಎರಡ್ಮೂರು ತಿಂಗಳಿನಿಂದ ಅರ್ಜಿಗಳನ್ನು ಹಾಕಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಇಲ್ಲಿಯವರೆಗೂ ಹೊಸ ಹಾಸ್ಟೆಲ್ ಮಂಜೂರಾಗಲಿದ್ದು, ಅಲ್ಲಿ ಪ್ರವೇಶಾವಕಾಶ ನೀಡಲಾಗುವುದು ಎಂದು ಹೇಳಿ ವಿದ್ಯಾರ್ಥಿಗಳನ್ನು ಸಾಗಹಾಕುತ್ತ ಬಂದಿದ್ದು, ಕಟ್ಟಡ ನೆಪ, ಚುನಾಯಿತ ಪ್ರತಿನಿಧಿಗಳು ಉದ್ಘಾಟನೆ ಸಿಗುತ್ತಿಲ್ಲ, ಮೇಲಧಿಕಾರಿಗಳು ಬ್ಯುಸಿ ಇದ್ದಾರೆ, ಈಗ ಬೆಳಗಾವಿಯಲ್ಲಿ ಸೆಷನ್ ನಡೆದಿದೆೆ, ಬಜೆಟ್ ಇಲ್ಲ ಇನ್ಯಾವ ಕಾರಣ ಹೇಳಿ, ಇನ್ನೆಷ್ಟು ದಿನ ಹೊಸ ಹಾಸ್ಟೆಲ್ ಆರಂಭಿಸಲು ಕುಂಟು ನೆಪ ಹುಡುಕಾತ್ತಾರೋ” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ವಾರದೊಳಗೆ ಹಾಸ್ಟೆಲ್ ಆರಂಭಿಸದಿದ್ದರೆ ಇಲಾಖೆ ಮುಂದೆ ಹೋರಾಟ?’
“ಈಗ ಮಂಜೂರಾಗಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ವಾರದೊಳಗೆ ಆರಂಭಿಸಿ, ಸೌಲಭ್ಯ ಕಲ್ಪಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ, ಅರ್ಜಿ ಹಾಕಿ, ಪ್ರವೇಶಾವಕಾಶಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿನಿಯರು, ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಬೇಕಾಗುತ್ತದೆ” ಎಂದು ಪಾಲಕರೊಬ್ಬರು ಎಚ್ಚರಿಸಿದ್ದಾರೆ.