(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 10
ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಹಳ್ಳಕ್ಕೆ ಕೆಲ ದಿನಗಳ ಹಿಂದೆ ಹೊಸ ಬ್ರಿಡ್ಜ್ ನಿರ್ಮಿಸಿ, ಕೆಲಸ ಬಾಕಿ ಉಳಿಸಿ ಗುತ್ತಿಗೆದಾರರು ಕೈ ಎತ್ತಿದ್ದು, ಬ್ರಿಡ್ಜ್ ಮೇಲೆ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಮಾಡುವವರು ಯಾರು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಬ್ರಿಡ್ಜ್ ಮೇಲೆ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಕ್ಕಟ್ಟಾದ ಬ್ರಿಡ್ಜ್ ವಿಸ್ತರಣೆ ಮಾಡಿರುವುದರಿಂದ ಒಂದಿಷ್ಟು ವಾಹನ ದಟ್ಟಣೆ ಕಡಿಮೆಯಾಗಿದ್ದು, ಆದರೆ ಬ್ರಿಡ್ಜ್ ಕೆಲಸ ಅರೆಬರೆ ನಿರ್ವಹಿಸಿ ಹಾಗೆಯೇ ಬಿಟ್ಟಿರುವುದರಿಂದ ಕಂದಕಗಳು ಉಂಟಾಗಿ ವಾಹನಗಳು ಸ್ಕಿಡ್ ಆಗಿ ಅಪಘಾತಕ್ಕೀಡಾಗುತ್ತಿವೆ. ದಿನವೂ ಒಂದಿಲ್ಲೊಂದು ಅಪಘಾತಗಳು ಸಾಮಾನ್ಯವಾಗಿದ್ದು, ಕೂಡಲೇ ಸಂಬಂಧಿಸಿದ ಇಲಾಖೆಯವರು ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ಇನ್ನೊಂದು ಲೇಯರ್ ಡಾಂಬರ್ ಇಲ್ಲವೆ, ಸಿಸಿ ಹಾಕಲಿ”
ಬ್ರಿಡ್ಜ್ ಮೇಲೆ ಹಳೆ ಸೇತುವೆ ಮತ್ತು ಹೊಸ ಸೇತುವೆ ಸಂಪರ್ಕ ಬೆಸೆಯುವ ಕಾಮಗಾರಿ ಸಂದರ್ಭದಲ್ಲಿ ಕೊರಕಲು ಉಂಟಾಗಿದ್ದು, ಇದನ್ನು ಮುಚ್ಚಿಲ್ಲ. ಹಾಗಾಗಿ ದ್ವಿಚಕ್ರವಾಹನಗಳ ಚಕ್ರಗಳು ಈ ಕೊರಕಲಿನಲ್ಲಿ ಸಿಲುಕಿ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇನ್ನು ದೊಡ್ಡ ವಾಹನಗಳ ಸವಾರರಿಗೂ ಅಭದ್ರತೆ ಕಾಡುತ್ತಿದೆ. ಕೂಡಲೇ ಸಂಬಂಧಿಸಿದ ಇಲಾಖೆಯವರು ಇನ್ನೊಂದು ಲೇಯರ್ ಡಾಂಬರ್ ರಸ್ತೆ ಇಲ್ಲವೇ ಸಿಸಿ ಹಾಕಿ ಇಡೀ ಬ್ರಿಡ್ಜ್ ದಾರಿಯನ್ನು ಸಮತಟ್ಟುಗೊಳಿಸಬೇಕು ಎಂದು ಸವಾರರು ಒತ್ತಾಯಿಸಿದ್ದಾರೆ.
15 ದಿನದೊಳಗೆ ದುರಸ್ತಿಗೆ ಮುಂದಾಗದಿದ್ದರೆ ಹೋರಾಟ
ಈ ಕುರಿತು ಅಧಿಕಾರಿಗಳಿಗೆ ಮೌಖಿಕವಾಗಿ ಮಾತನಾಡಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಇಲ್ಲ. ಚುನಾವಣೆ ನೀತಿ ಸಂಹಿತೆ ಸೇರಿದಂತೆ ಹಲವು ಕಾರಣ ಹಾಗೂ ಸಬೂಬು ನೀಡಿದ್ದಾರೆ. ಆದರೆ ಈಗ ಚುನಾವಣೆ ನೀತಿ ಸಂಹಿತೆ ಮುಗಿದಿದ್ದು, ಬಾಕಿ ಕೆಲಸವನ್ನು ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಮುಂದಾಗಬೇಕು. 15 ದಿನದೊಳಗೆ ದುರಸ್ತಿಗೆ ಮುಂದಾಗದೇ ಇದ್ದರೆ, ವಾಹನ ಸವಾರರ ಹಿತರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಸಂಘಟಕರು ಎಚ್ಚರಿಸಿದ್ದಾರೆ.