ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 27
ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣ ಹಂತದಲ್ಲಿರುವ ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 4 ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಟೈಲ್ಸ್ ಅಳವಡಿಸಲಾಗಿದ್ದು, ಎಲೆಕ್ಟಿçಕಲ್, ಕುಡಿಯುವ ನೀರು ಪೈಪ್‌ಲೈನ್, ಫೈನಲ್ ಫಿನಿಶಿಂಗ್, ಕಿಟಕಿಗಳಿಗೆ ಗಾಜು ಅಳವಡಿಕೆ, ಶೌಚಾಲಯ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಬಾಕಿ ಉಳಿದಿವೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲು 2ರಿಂದ 3 ತಿಂಗಳು ಆಗಬಹುದು ಎಂದು ಹೇಳಲಾಗುತ್ತಿದೆ.
ನಿಧಾನಗತಿ
ಮೇಲ್ಮಡಿಯಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹಲವು ಕೆಲಸಗಳು ನಡೆಯಬೇಕಿದೆ. ಅಕ್ಟೋಬರ್‌ನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ನವೆಂಬರ್ ಮೊದಲ ವಾರದಿಂದಲೇ ಜನರ ಉಪಯೋಗಕ್ಕೆ ದೊರೆಯಲಿದೆ ಎಂಬ ಆಶಾಭಾವನೆ ಇತ್ತು. ಆದರೆ ಮತ್ತಷ್ಟು ವಿಳಂಬ ಆಗುತ್ತಿರುವುದರಿಂದ ಶೀಘ್ರ ಉದ್ಘಾಟನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪೆನಾಲ್ಟಿ ಮೇಲೆ ಕೆಲಸ ನಡೆದಿದೆ
“ಇಷ್ಟೊತ್ತಿಗಾಗಲೇ ಕಟ್ಟಡ ಕಾಮಗಾರಿ ಕೆಲಸ ಪೂರ್ಣಗೊಳ್ಳಬೇಕಿತ್ತು, ನಾನಾ ಕಾರಣಗಳಿಂದ ಕೆಲಸ ಬಾಕಿ ಉಳಿದಿದೆ. ಪೆನಾಲ್ಟಿ ಮೇಲೆ ಕೆಲಸ ನಡೆದಿದೆ. ಕಲಬುರಗಿ ಮೂಲದ ಗುತ್ತಿಗೆದಾರರೊಬ್ಬರು ನಿರ್ವಹಣೆಯ ಹೊಣೆ ಹೊತ್ತಿದ್ದು, ಇನ್ನೇನು ಒಂದೂವರೆ ಇಲ್ಲವೇ ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ” ಎಂದು ಕಟ್ಟಡ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಹೇಳುತ್ತಾರೆ.
60 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ
2020, ಏಪ್ರಿಲ್‌ನಲ್ಲಿ ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತ್ತು. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿತ್ತು. 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದ್ದು, 3 ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ. ಆಸ್ಪತ್ರೆ ಮಂಜೂರಾಗಿ 4 ವರ್ಷಗಳು ಗತಿಸಿದರೂ ಇನ್ನೂ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಆಸ್ಪತ್ರೆ ಆರಂಭವಾದರೆ ತಾಲೂಕು ಆಸ್ಪತ್ರೆಗೆ ತಗ್ಗಲಿದೆ ಒತ್ತಡ
ನಗರದ 100 ಹಾಸಿಗೆ ಸಾಮರ್ಥ್ಯದ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಯಾವಾಗಲೂ ಸಾರ್ವಜನಿಕರು ಹಾಗೂ ತಪಾಸಣೆಗೆ ಬರುವವರಿಂದ ಗಿಜಗುಡುತ್ತದೆ. ಹಲವು ವೈದ್ಯರು ಇಲ್ಲಿರುವುದರಿಂದ ದಿನವೂ ರೋಗಿಗಳ ಸಂಖ್ಯೆ ಜಾಸ್ತಿ. ಈ ನಡುವೆ ಹೆರಿಗೆ, ಬಾಣಂತಿಯರಿಗೆ ಚಿಕಿತ್ಸೆ, ಗರ್ಭಿಣಿಯರಿಗೆ ಹಲವು ತಪಾಸಣೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆ, ಆಸ್ಪತ್ರೆ ಚಿಕ್ಕದಾಗಿರುವುದರಿಂದ ನಾನಾ ಸಮಸ್ಯೆ ಎದುರಿಸಬೇಕಾಗುತ್ತದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾದರೆ ತಾಲೂಕು ಆಸ್ಪತ್ರೆ ಆರಂಭವಾದರೆ ಒಂದಿಷ್ಟು ಒತ್ತಡ ತಗ್ಗಲಿದ್ದು, ಜನಜಂಗುಳಿಯೂ ಕಡಿಮೆಯಾಗಲಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.