ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 24
ನಗರದ ಶಹರ ಪೊಲೀಸ್ ಠಾಣೆ ಎದುರಿಗೆ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಂಡರೂ ಇನ್ನೂ ಉದ್ಘಾಟನೆಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ವಿದ್ಯಾರ್ಥಿ ಪಾಲಕರ ಆರೋಪಿಸಿದ್ದಾರೆ.
ಹಲವು ದಿನಗಳ ಹಿಂದೆಯೇ ಪೂರ್ಣಗೊಂಡು ವಿದ್ಯಾರ್ಥಿನಿಯರ ವಸತಿ ವ್ಯವಸ್ಥೆಗೆ ಮುಕ್ತವಾಗಬೇಕಿದ್ದ ನಿಲಯದ ಕಟ್ಟಡ ನಾನಾ ಕಾರಣಗಳಿಂದ ವಿಳಂಬವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಾದರೂ ವಿದ್ಯಾರ್ಥಿನಿಯರ ಅನುಕೂಲಕ್ಕೆ ದೊರೆಯಲಿ ಎಂಬುದು ಪಾಲಕರ ಒತ್ತಾಯವಾಗಿದೆ. ಪ್ರಸಕ್ತವಾಗಿ ಮಹೆಬೂಬಿಯಾ ಕಾಲೋನಿಯ ಖಾಸಗಿ ಕಟ್ಟಡವೊಂದರಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ತಾತ್ಕಾಲಿಕವಾಗಿ ನಡೆಯುತ್ತಿದ್ದು, ಆದರೆ ಈ ಕಟ್ಟಡ ಚಿಕ್ಕದಾಗಿರುವುದರಿಂದ ಅಭ್ಯಾಸಕ್ಕೆ ತೊಡಕಾಗಿದೆ. ಹೊಸ ಕಟ್ಟಡಕ್ಕೆ ಹಾಸ್ಟೆಲ್ ಸ್ಥಳಾಂತರಿಸುವುದರಿAದ ಅಭ್ಯಾಸ ಯೋಗ್ಯ ವಾತಾವರಣದ ಜೊತೆಗೆ ಇನ್ನಷ್ಟು ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯದ ಅವಕಾಶ ದೊರೆಯುತ್ತದೆ ಎಂಬುದು ವಿದ್ಯಾರ್ಥಿನಿಯರ ಅಭಿಪ್ರಾಯವಾಗಿದೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಈ ವಿದ್ಯಾರ್ಥಿ ನಿಲಯದಲ್ಲಿ ಶೇ.75ರಷ್ಟು ಎಸ್ಸಿ, ಎಸ್ಟಿ ವಿದ್ಯಾರ್ಥಿನಿಯರಿಗೆ ಹಾಗೂ ಶೇ.25ರಷ್ಟು ಇತರೆ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶವಿದೆ. ಹೊಸ ಹಾಸ್ಟೆಲ್ ಆರಂಭವಾದರೆ ಗ್ರಾಮೀಣ ಪ್ರದೇಶದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರಿಗೆ ಬಹಳಷ್ಟು ಅನುಕೂಲವಾಗಲಿದೆ.
ವಿದ್ಯುತ್ ಸಂಪರ್ಕ ಅಳವಡಿಕೆ ಬಾಕಿ
ಹೊಸ ವಿದ್ಯಾರ್ಥಿ ನಿಲಯದಲ್ಲಿ ಕೊನೆಯ ಹಂತದ ಸ್ವಚ್ಛತೆ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಕೆ ಕೆಲಸ ಬಾಕಿ ಉಳಿದಿದೆ ಎಂದು ತಿಳಿದುಬಂದಿದ್ದು, ಸಂಬAಧಿಸಿದ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಆದಷ್ಟು ಬೇಗ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಹೊಸ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿ ಪಾಲಕರ ಒತ್ತಾಯವಾಗಿದೆ.