(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 18
ಶಿವಮೊಗ್ಗ ಜಿಲ್ಲೆಯ ಮಲೆನಾಡ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಖುಷಿ ಇಮ್ಮಡಿಸಿದೆ. ದಿನದಿಂದ ದಿನಕ್ಕೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆತಿದೆ. ಈ ನಡುವೆ ಜುಲೈ 19ರಿಂದ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವ ಪ್ರಕ್ರಿಯೆಗಳು ಖಚಿತವಾಗುತ್ತಿದ್ದಂತೆ, ಭತ್ತದ ಸಸಿ ನಾಟಿಗೆ ಭರದ ಸಿದ್ಧತೆ ನಡೆಸಿದ್ದಾರೆ.
ಸಿಂಧನೂರು ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪಂಪ್‌ಸೆಟ್ ಮೂಲಕ ಸಸಿಮಡಿ ಹಾಕಿದ್ದರೆ, ಇನ್ನೂ ಕೆಲವು ಬೋರ್‌ವೆಲ್, ಕೆರೆಯ ನೀರಿನ ಸಹಾಯದಿಂದ ರೈತರು ಭತ್ತದ ಸಸಿ ಬೆಳೆದಿದ್ದಾರೆ. ಕಳೆದ ಬಾರಿ ಒಂದೇ ಬೆಳೆಯಾಗಿದ್ದರಿಂದ 6 ತಿಂಗಳು ಕೆಲಸವಿಲ್ಲದೇ ಕಾಲ ಕಳೆದಿರುವ ರೈತರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ಗದ್ದೆಗಳನ್ನು ಟ್ರ್ಯಾಕ್ಟರ್ ನಿಂದ ಹದ ಮಾಡಿ ಸಮತಟ್ಟುಗೊಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ತಾಲೂಕಿನಾದ್ಯಂತ ಹಸಿ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಬಂದರೆ, ಗದ್ದೆಗಳಿಗೆ ಅಷ್ಟೊಂದು ಪ್ರಮಾಣದ ನೀರು ಅವಶ್ಯವಿರುವುದಿಲ್ಲ. ಬೇಗನೆ ಗದ್ದೆ ತೊಯ್ದು ಸಸಿ ನಾಟಿ ಮಾಡಬಹುದು ಎನ್ನುವ ಉಮೇದಿನಲ್ಲಿದ್ದಾರೆ.
ಐಸಿಸಿ ಮೀಟಿಂಗ್ ನಡೆಸದೇ ಜುಲೈ 19 ರಂದು ಕಾಲುವೆಗೆ ನೀರು
ತುಂಗಭದ್ರಾ ಡ್ಯಾಮಿಗೆ ಒಳಹರಿವಿನ ಪ್ರಮಾಣ ಹೆಚ್ಚಿರುವುದರಿಂದ ಐಸಿಸಿ ಮೀಟಿಂಗ್ ನಡೆಸದೇ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಜಲಾಶಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಡ್ಯಾಂನಲ್ಲಿ ಇವತ್ತು ಎಷ್ಟಿದೆ ನೀರು ?
ತುಂಗಭದ್ರಾ ಜಲಾಶಯಕ್ಕೆ ದಿನಾಂಕ:18-07-2024 ಗುರುವಾರದಂದು 82,491 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು, ಜಲಾಶಯದಲ್ಲಿ ಸದ್ಯ 46.80 ಟಿಎಂಸಿ ನೀರು ಸಂಗ್ರಹವಿದೆ. 24 ಗಂಟೆಗಳಲ್ಲಿ 82,491 ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರಿದರೆ, 53 ಟಿಎಂಸಿಗೂ ಹೆಚ್ಚು ನೀರು ಶುಕ್ರವಾರ ಸಂಗ್ರಹವಾಗಲಿದೆ.
10 ವರ್ಷದ ದಾಖಲೆ ಮುರಿದ ನೀರಿನ ಸಂಗ್ರಹ
ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಭಾರಿ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಕಳೆದ 10 ವರ್ಷದ ದಾಖಲೆಯನ್ನು ಮುರಿದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಇದೇ ದಿನ ಜಲಾಶಯದಲ್ಲಿ 42.59 ಟಿಎಂಸಿ ನೀರು ಸಂಗ್ರಹವಾಗಿತ್ತು. . . 41,161 ಕ್ಯೂಸೆಕ್ ನೀರು ಒಳಹರಿವು ಇತ್ತು. 15,975 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು.