(ವರದಿ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 1
ನಗರದ ಮಹೆಬೂಬಿಯಾ ಕಾಲೋನಿಯ ನೀರಿನ ಟ್ಯಾಂಕ್ ಬಳಿಯಿರುವ ನಗರದ ಏಕೈಕ ಉದ್ಯಾನದಲ್ಲಿ ಗಿಡಗಳು ನೀರಿನ ಕೊರತೆಯ ಕಾರಣಕ್ಕೆ ದಿನದಿಂದ ದಿನಕ್ಕೆ ಒಣಗುತ್ತಿವೆ. ಈ ಹಿಂದೆ ಹುಲುಸಾಗಿ ಕರ್ಕಿ ಬೆಳೆದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಪಾರ್ಕ್ ಕಳೆದ ಹಲವು ದಿನಗಳಿಂದ ಮೂಲ ಸ್ವರೂಪವನ್ನು ಕಳೆದುಕೊಂಡಿದೆ.
ಈ ಹಿಂದೆ ಅವ್ಯವಸ್ಥೆಯ ಆಗರವಾಗಿದ್ದ ಪ್ರದೇಶದಲ್ಲಿ ಸಾರ್ವಜನಿಕರ ಒತ್ತಾಸೆ ಮೇರೆಗೆ, ಈ ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದ ರಮೇಶ್ ವಟಗಲ್ ಅವರು ಉದ್ಯಾನ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿದ್ದರು. ಸುಸಜ್ಜಿತ ಪಾರ್ಕ್ ನಿರ್ಮಾಣಗೊಂಡು ಆರಂಭದಲ್ಲಿ ನಿರ್ವಹಣೆ ಚೆನ್ನಾಗಿತ್ತು, ತದನಂತರದ ದಿನಗಳಲ್ಲಿ ಪಾರ್ಕ್ನ ಬಗ್ಗೆ ಕಾಳಜಿ ಕೊರತೆಯಿಂದ ಗಿಡ-ಮರಗಳ ಪೋಷಣೆ, ಅಂದ-ಚೆAದ್ ಹೆಚ್ಚಿಸಲು ನಗರಸಭೆಯವರ ಆಸಕ್ತಿ ಕಡಿಮೆಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಸಿಟಿ ದೊಡ್ಡದು, ಅದಕ್ಕೆ ತಕ್ಕಂತೆ ಪಾರ್ಕ್‌ಗಳಿಲ್ಲ
ಯಾವುದೇ ಪಟ್ಟಣ, ನಗರಕ್ಕೆ ಹೋದರೆ ಕನಿಷ್ಠ ಒಂದೆರಡಾದರೂ ಪಾರ್ಕ್ಗಳು ಇರುತ್ತವೆ. ಆದರೆ ಸಿಂಧನೂರು ನಗರದ ಜನಸಂಖ್ಯೆ ಮತ್ತು ಪ್ರದೇಶ ವ್ಯಾಪ್ತಿಯಿಂದ ದೊಡ್ಡದಿದ್ದರೂ, ಜನಸಂಖ್ಯೆಗೆ ತಕ್ಕಂತೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಪ್ರತಿಯೊಂದು ಇಲಾಖೆಯವರ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಇರುವ ಒಂದೇ ಒಂದು ಪಾರ್ಕನ್ನಾದರೂ ಪೋಷಣೆ ಮಾಡುವಲ್ಲಿ ಸಂಬಂಧಿಸಿದ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದಾರೆ. ನಗರಗಳಲ್ಲಿ ಗಿಡಮರಗಳು, ವಿಶ್ರಾಂತಿ ತಾಣಗಳಿಲ್ಲದೇ ಹೋದರೆ ಹೇಗೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
ಗಿಡ-ಮರಗಳ ಸಂಖ್ಯೆ ಕಡಿಮೆಯಾದಷ್ಟು ಸಮಸ್ಯೆ
ಸಿಂಧನೂರು ನಗರ ವ್ಯಾಪ್ತಿಯ ಮುಖ್ಯ ರಸ್ತೆಯ ಹಲವು ಬದಿಗಳಲ್ಲಿ ಒಂದಿಷ್ಟು ಗಿಡಗಳನ್ನು ಹೊರತುಪಡಿಸಿದರೆ, ಉಳಿದಂತೆ ಗಿಡ-ಮರಗಳ ಸಂಖ್ಯೆ ಬಹಳಷ್ಟು ಕಡಿಮೆ. ಧೂಳಿನ ಕಾರಣಕ್ಕೆ ಈಗಾಗಲೇ ಅಪಖ್ಯಾತಿ ಒಳಗಾಗಿರುವ ಸಿಂಧನೂರು ನಗರದಲ್ಲಿ ಜನಸಂಖ್ಯೆಗೆ ತಕ್ಕಂತೆ ಉದ್ಯಾನಕ್ಕೆ ಮೀಸಲಿಟ್ಟ ಜಾಗಗಳಲ್ಲಿ ಪಾರ್ಕ್ಗಳು, ಗಿಡ-ಮರಗಳನ್ನು ಬೆಳೆಸದೇ ಹೋದಲ್ಲಿ ಪರಿಸರ ಇನ್ನಷ್ಟು ಕಲುಷಿತಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂಬುದು ಪರಿಸರ ಆಸಕ್ತರ ಅಭಿಪ್ರಾಯವಾಗಿದೆ.