ಸಿಂಧನೂರು: ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ, ಚಕಾರವೆತ್ತದ ನಗರಸಭೆ ಸದಸ್ಯರು, ಶಾಸಕರ ಬಗ್ಗೆ ಜನರ ಅಸಮಾಧಾನ

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 1

ನಗರದಲ್ಲಿ ಕಳೆದ ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದ್ದು, ವಿವಿಧ ವಾರ್ಡ್ ಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದರೂ ಈ ಬಗ್ಗೆ ಚಕಾರವೆತ್ತದೇ ನಗರಸಭೆ ಚುನಾಯಿತ ಸದಸ್ಯರು ಹಾಗೂ ಶಾಸಕರು ಮೌನವಾಗಿದ್ದಾರೆಂದು ವಿವಿಧ ವಾರ್ಡ್‌ ಗಳ ಸಾರ್ವಜನಿಕರು ಹಾಗೂ ನಗರಾಭಿವೃದ್ಧಿ ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 5, 2024ರಂದು ಕುಡಿವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ಮಾರ್ಚ್‌ 16ರವರೆಗೂ ನೀರು ಹರಿಬಿಟ್ಟಾಗ ತುರ್ವಿಹಾಳ ಕೆರೆ ಹಾಗೂ ನಗರದ ಕುಷ್ಟಗಿ ಮಾರ್ಗದಲ್ಲಿರುವ ದೊಡ್ಡ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹಿಸಿದ್ದರೆ ನಗರದಲ್ಲಿ ನೀರಿನ ಸಮಸ್ಯೆ ಉದ್ಬವಿಸುತ್ತಿರಲಿಲ್ಲ, ಆ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದ ಪರಿಣಾಮವೇ, ಇಂದು ಕುಡಿಯುವ ನೀರಿಗಾಗಿ ಕೊಡ ಹಿಡಿದು ಅಲೆದಾಡುವಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಬ್ಬ ನಗರಸಭೆ ಸದಸ್ಯರೂ ನೀರಿನ ಬಗ್ಗೆ ಮಾತಾಡವಲ್ರಿ”
“ತಿಂಗ್ಳ ಮ್ಯಾಲ್ಯಾತಿ ನೀರಿನ ಸಮಸ್ಯೆ ಶುರುವಾಗಿ. ಅಲ್ಲಿಲ್ಲಿ ಕೊಡ ನೀರು ತರಬೇಕಂದ್ರ ಬೇಡಿಕೆಂದು ಬಂದಂಗ್ ಆಗ್ತೈತಿ . ಕುಡೇ ನೀರು ರೊಕ್ಕಾ ಕೊಟ್ಟು ತರ‍್ತೀವಿ. ಮೈ ತೊಳಕನಾಕ, ಬಟ್ಟಿ ಹೊಗ್ಯಾಕ ಎಲ್ಲಿಂದ ನೀರು ತರಬೇಕು. ಈ ನಗರಸಬೇರು ನೋಡಿದ್ರ, ಹತ್ತು ದಿನಕ್ಕೊಮ್ಮೆ ನೀರು ಬಿಡ್ತೀವಿ ಅಂತ ಹೇಳಿದ್ರು, ಈಗ ನೋಡಿದ್ರ ಹನ್ನೆರಡು ದಿನಕ್ಕೊಮ್ಮೆ ನೀರು ಬಿಡಾಕತ್ತ್ಯಾರ, ಹಿಂಗಾದ್ರ ಹೆಂಗ್ರಿ ನಮ್ ಕಥಿ” ಎಂದು
ಖದರಿಯಾ ಕಾಲೋನಿಯ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
“ಎರಡು ದಿನಕ್ಕೊಮ್ಮೆ ಮೈ ತೊಳಕನಾಕತ್ತೀವ್ರಿ”
“ನೀರಿಂದು ಪೂರಾ ಅಂದ್ರ ಪೂರಾ ತ್ರಾಸ್ ಅಗೈತಿ ನೋಡ್ರಿ. ಹತ್ತನ್ನಂದು ದಿನಕ್ಕೊಮ್ಮೆ ನೀರು ಬಿಟ್ರ ಹೆಂಗ್ರಿ. ಹಿಂಗಾಗಿ ಎಲ್ಡು ದಿನಕ್ಕೊಮ್ಮೆ ಮೈ ತೊಳಕನಕತ್ತೀವಿ ನೋಡ್ರಿ. ಇನ್ನ, ಬಟ್ಟಿ-ಬರಿ ತೊಳೇದು ಭಾಳ ಕಷ್ಟ ನೋಡ್ರಿ. ಮಾರ್ಚ್‌ನ್ಯಾಗ ಕಾಲೇವುಕ ನೀರು ಬಿಟ್ಟಿದ್ರು, ಅವಾಗ ಕೆರಿಗುಳನ ಫುಲ್ ತುಂಬಿಸರ‍್ತಾರಂತ ಮಾಡಿದ್ವಿ. ಆದ್ರ ನಗರಸಭೇರೂ ಹಿಂಗ ಮಾಡ್ಯಾರಂದ್ರ ನಮಗೇನು ಗೊತ್ರಿ. ಹೆಂಗಾನ ಮಾಡ್ರಿ ನಮಗ ನೀರು ಕೊಡ್ಲಿ, ವಾರಕ್ಕೊಮ್ಮಾನ ನೀರ ಬಂದ್ರ ಛಲೋ ಆತೈತಿ. ಟ್ಯಾಂಕರ್ ಮೂಲಕ ನೀರು ಕೊಡ್ಲಿ, ಇಲ್ಲಂದ್ರ ಓಣಿ ಓಣಿಗೆ ಸಿಂಟೆಕ್ಸ್ ಇಟ್ಟು, ಅದ್ಕ ಬೋರ್‌ವೆಲ್ ನೀರ ಬಿಟ್ರ ನಮ್ಮಂತೋರು ತಂದ್ಕಂತಾರ” ಎಂದು ಗಂಗಾನಗರದ ನಿವಾಸಿಯೊಬ್ಬರು ನಗರಸಭೆಗೆ ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *