ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 4
ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ಗಳನ್ನು ಅಳವಡಿಸುತ್ತಿರುವುದರಿಂದ, ಎರಡನೇ ಬೆಳೆಗೆ ನೀರು ಹರಿಸುವುದನ್ನು ಕೈಬಿಡಲಾಗಿದೆ. 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಇದೇ ಜನವರಿ 10, 2026 ರವರೆಗೆ ಮಾತ್ರ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸಲು ಈ ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಲುವೆಯಲ್ಲಿ ನೀರು ಸ್ಥಗಿತಗೊಳ್ಳಲು ಇನ್ನೂ 6 ದಿನ ಮಾತ್ರ ಬಾಕಿ ಉಳಿದಿವೆ.
125ನೇ ನೀರಾವರಿ ಸಲಹಾ ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರ
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಡಿ. 1ರಿಂದ 2026ರ ಜನವರಿ 10ರ ವರೆಗೆ 3000 ಕ್ಯೂಸೆಕ್, ಎಡದಂಡೆ ವಿಜಯನಗರ ಕಾಲುವೆಗೆ ಜನವರಿ 1ರಿಂದ ಮೇ 10ರ ತನಕ 150 ಕ್ಯೂಸೆಕ್ನಂತೆ 1ರಿಂದ 11ಎ ಕಾಲುವೆ ತನಕ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ ಜನವರಿ 10ರ ತನಕ 1300 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ ಜನವರಿ 10ರ ತನಕ 750 ಕ್ಯೂಸೆಕ್ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಮೇ 31ರ ತನಕ ಸರಾಸರಿ 250 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರು ಲಭ್ಯತೆ ಇರುವ ತನಕ ಇದರಲ್ಲಿ ಯಾವುದು ಮೊದಲು ಅನ್ವಯವಾಗುತ್ತದೆಯೊ ? ಅದರಂತೆ ನೀರು ಹರಿಸಲಾಗುತ್ತದೆ. ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 25 ಕ್ಯೂಸೆಕ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳತನಕ ಇದರಲ್ಲಿ ಯಾವುದು ಮೊದಲೋ ಅದಕ್ಕೆ ಅನುಗುಣವಾಗಿ ನೀರು ಮತ್ತು 150 ಕ್ಯೂಸೆಕ್ನಂತೆ ನದಿ ಪೂರಕ ಕಾರ್ಖಾನೆಗಳಿಗೆ ನೀರು ಹರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆ
ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕುಡಿಯುವ ನೀರಿನ ಕೆರೆಗಳಲ್ಲಿ, ನೀರಿನ ಪ್ರಮಾಣ ಕುಸಿತ ಕಂಡಿದ್ದು, ಕೆಲ ಕೆರೆಗಳು ಡಿಸೆಂಬರ್ನಲ್ಲೇ ತಳಮಟ್ಟಕ್ಕೆ ಸರಿದಿವೆ. ಈ ಕುರಿತು ಇತ್ತೀಚಿಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಮಸ್ಕಿ ಸೇರಿದಂತೆ ಸಿಂಧನೂರು ತಾಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಭೇಟಿ ನೀಡಿ, ಕೆರೆಯಲ್ಲಿ ನೀರು ಭರ್ತಿ ಮಾಡಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳ ಕೆರೆಗಳಿಗೆ ಕಾಲುವೆಯಿಂದ ನೀರು ತುಂಬಿಸುವ ಪ್ರಕ್ರಿಯೆ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಮೂಲಗಳು ತಿಳಿಸಿವೆ.
ತುಂಬಿ ಹರಿಯುತ್ತಿರುವ ಕಾಲುವೆ
ಒಂದೇ ಬೆಳೆಗೆ ಐಸಿಸಿ ಸಲಹಾ ಸಮಿತಿ ತೀರ್ಮಾನಿಸಿರುವುದರಿಂದ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ ಉಪ ಕಾಲುವೆಗಳು ತುಂಬಿ ಹರಿಯುತ್ತಿವೆ. ಭತ್ತ ಕಟಾವು ಮುಗಿದಿದ್ದು, ಅಲ್ಲಲ್ಲಿ ಹಳ್ಳ, ಕೆರೆ, ಬೋರ್ವೆಲ್ ಸೌಕರ್ಯ ಹೊಂದಿದ ರೈತರು ಸಸಿ ನಾಟಿ ಮಾಡಿದ್ದು, ಇನ್ನೂ ಕೆಲವರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಮಸ್ಕಿ ತಾಲೂಕಿನ ರಂಗಾಪುರ ಬಳಿಯಿರುವ 54ನೇ ಉಪ ಕಾಲುವೆ ತುಂಬಿ ಹರಿಯುತ್ತಿರುವುದು ಭಾನುವಾರ ಬೆಳಿಗ್ಗೆ ಕಂಡುಬಂತು.

