ಸಿಂಧನೂರು: ಕುಡಿವ ನೀರಿನ ಕೆರೆಯಲ್ಲಿ ತಳಕ್ಕೆ ಕುಸಿದ ನೀರು !

Spread the love

(ಜನದನಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 11

ಸಿಂಧನೂರು ನಗರದ ಕುಡಿವ ನೀರಿನ ಪ್ರಮುಖ ಜಲ ಮೂಲವಾಗಿರುವ ಕುಡಿವ ನೀರಿನ ಕೆರೆಯಲ್ಲಿ, ನೀರಿನ ಪ್ರಮಾಣ ತಳಕ್ಕೆ ಕುಸಿದಿದ್ದು, ತುಂಗಭದ್ರಾ ನಾಲೆಗೆ ನೀರು ಹರಿಸುವವರೆಗೆ ಪೂರೈಕೆ ಹೇಗೆ ? ಏನು ಎಂಬ ಪ್ರಶ್ನೆ ನಗರಸಭೆಗೆ ಸವಾಲಾಗಿ ಪರಿಣಮಿಸಿದೆ. ಕುಷ್ಟಗಿ ಮಾರ್ಗದಲ್ಲಿರುವ ಕುಡಿವ ನೀರಿನ ಕೆರೆಗೆ ಶನಿವಾರ ಸಂಜೆ ‘ಸಿಂಧನೂರು ವೆಬ್ ತಾಣ’ ಭೇಟಿ ನೀಡಿದಾಗ ನೀರಿನ ಪ್ರಮಾಣ ಕುಸಿದಿರುವುದು ಕಂಡುಬಂತು. ಅಲ್ಲದೇ ದೊಡ್ಡ ಕೆರೆಯ ಪಕ್ಕದಲ್ಲಿರುವ ಸಣ್ಣ ಕೆರೆಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ.
8 ದಿನಕ್ಕೊಮ್ಮೆ ನೀರು ಸರಬರಾಜು
ಕಳೆದ ಬಾರಿಗಿಂತ ಈ ಬಾರಿ ಬಿಸಿಲಿನ ಧಗೆ ಹೆಚ್ಚಿದ್ದು, ನೀರಿನ ಬಳಕೆಯಲ್ಲಿಯೂ ಏರುಪೇರಾಗಿದೆ. ನಗರದ 31 ವಾರ್ಡ್ ಗಳಿಗೆ ಪ್ರಸ್ತುತ 8 ದಿನಕ್ಕೊಮ್ಮೆ ನಗರಸಭೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್ನಲ್ಲಿ ರಾಯಚೂರು ಜಿಲ್ಲಾದ್ಯಂತ ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ, ತುಂಗಭದ್ರಾ ಡ್ಯಾಂನಿಂದ ಎಡದಂಡೆ ನಾಲೆಗೆ ಮಾರ್ಚ್ 5 ರಿಂದ ಮಾರ್ಚ್ 16 ವರೆಗೆ ನೀರನ್ನು ಹರಿಸಲಾಗಿತ್ತು. ಆ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಲಾಗಿತ್ತು. ನೀರು ತುಂಬಿಸಿ 56 ದಿನಗಳೊಳಗಾಗಿ ಕೆರೆಯಲ್ಲಿ ನೀರಿನ ಮಟ್ಟ ಕುಸಿದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Namma Sindhanuru Click For Breaking & Local News

ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ವಿಫಲ, ಆರೋಪ
ನಗರದ ವಿವಿಧ ವಾರ್ಡ್ಗಳಲ್ಲಿ ಬಳಕೆ ಹಾಗೂ ಕುಡಿವ ನೀರಿನ ಸಮಸ್ಯೆಯಿಂದಾಗಿ ಸಾರ್ವಜನಿಕರು ದಿನವೂ ಒಂದಿಲ್ಲೊAದು ಪಡಿಪಾಟಲು ಅನುಭವಿಸುತ್ತಿದ್ದರೂ, ನಗರಸಭೆಯವರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಳೆದ ಹಲವು ದಿನಗಳಿಂದ ಪೂರೈಕೆಯಾಗುತ್ತಿರುವ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈ ನೀರನ್ನು ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ನಗರದ ಬಹುತೇಕ ಕುಟುಂಬಗಳು ಅನಿವಾರ್ಯವಾಗಿ ಖಾಸಗಿಯವರ ನೀರಿನ ಪ್ಲಾಂಟ್‌ಗಳನ್ನೇ ಅವಲಂಬಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

Namma Sindhanuru Click For Breaking & Local News

ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಸಭೆ ಕರೆಯಲು ಒತ್ತಾಯ
ದಿನದಿಂದ ದಿನಕ್ಕೆ ಹಲವು ವಾರ್ಡ್ಗಳಲ್ಲಿ ನೀರಿನ ಅಭಾವ ಹೆಚ್ಚುತ್ತಿದ್ದು, 8 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವುದರಿಂದ ಬೇರೆ ದಾರಿಯಿಲ್ಲದೇ ಟ್ಯಾಂಕರ್‌ಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದ್ದು, ಕೂಡಲೇ ನಗರಸಭೆಯವರು ತುರ್ತು ಸಭೆ ಕರೆದು, ಪರ್ಯಾಯ ಕ್ರಮಕಗಳನ್ನು ಕೈಗೊಳ್ಳಬೇಕು. ಚುನಾವಣೆಯ ನೆಪದಲ್ಲಿ ಸಾರ್ವಜನಿಕ ಸಮಸ್ಯೆಯನ್ನು ಕಡೆಗಣಿಸುವುದು ಸರಿಯಲ್ಲ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಜನಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ವಿವಿಧ ವಾರ್ಡ್‌ಗಳ ಸಾರ್ವಜನಿಕರು ಎಚ್ಚರಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *