ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 23
ಸ್ಥಳೀಯ ನಗರಸಭೆಯಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ನಿಯಮಗಳನ್ನು ಉಲ್ಲಂಘಿಸಿ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹನುಮಂತ ಕಲ್‌ಶೆಟ್ಟಿ ಅವರು ತಹಸೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಬುಧವಾರ ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ಹಿಂದಿನ ಅಧ್ಯಕ್ಷೆ ಪ್ರಿಯಾಂಕ ನಾಯಕ್ ಅವರು ಸರ್ಕಾರಿ ನೌಕರಿ ಬಂದ ಕಾರಣ ರಾಜೀನಾಮೆ ಕೊಟ್ಟಿದ್ದರಿಂದ ಉಪಾಧ್ಯಕ್ಷರಾಗಿದ್ದ ಮಂಜುಳಾ ಪ್ರಭುರಾಜ ಅವರನ್ನು, ಏಕಾಏಕಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೇ, ಯಾವುದೇ ಅಧಿಕೃತ ಪತ್ರವಾಗಲಿ, ಸರ್ಕಾರದ ಆದೇಶವಾಗಲಿ ಇಲ್ಲದೇ ಕರ್ನಾಟಕ ಮುನ್ಸಿಪಲ್ ಆಕ್ಟ್ 1964ರ ವಿಧಿ 42 ಮತ್ತು 44ರ ಪ್ರಕಾರ ಆಗಿನ ಪೌರಾಯುಕ್ತರು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆ ಮೂಲಕ ಎಸ್ಸಿ, ಎಸ್ಟಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಹಂಗಾಮಿ ಅಧ್ಯಕ್ಷರ ಆಯ್ಕೆ ಕುರಿತಂತೆ ಸಮಂಜಸವಾದ ದಾಖಲೆ ಕೇಳಿದ ನನಗೆ ಕಾಲಹರಣ ಮಾಡುವ ಉದ್ದೇಶದಿಂದ ಹಾಗೂ ಹಂಗಾಮಿ ಅಧ್ಯಕ್ಷರಿಗೆ ಅನುಕೂಲ ಕಲ್ಪಿಸಲು, ಸರಿಯಾದ ದಾಖಲೆಗಳನ್ನು ನೀಡದೇ ಸತಾಯಿಸುತ್ತಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ನಿಯಮಬಾಹಿರವಾಗಿದೆ ಎಂದು ಕಲ್‌ಶೆಟ್ಟಿ ಅವರು ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಸೂಕ್ತ ಕ್ರಮಕ್ಕೆ ಆಗ್ರಹ
ಅಷ್ಟೇ ಅಲ್ಲದೇ ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆಯ ಹಂಗಾಮಿ ಅಧ್ಯಕ್ಷರ ನೇಮಕದಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಉಲ್ಲಂಘನೆಯಾಗಿದ್ದು, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು, ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಪೌರಾಯುಕ್ತರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಪೌರಾಯುಕ್ತರು ಎಸ್ಸಿ, ಎಸ್ಟಿ ಕಾಯ್ದೆ ಉಲ್ಲಂಘನೆಯಾಗಿರುವ ಕುರಿತು ಹಾಗೂ ಹಂಗಾಮಿನ ಅಧ್ಯಕ್ಷರ ನೇಮಕ, ಅವಧಿ ಈ ಕುರಿತು ವಿವರವಾದ ಮಾಹಿತಿಯನ್ನು ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಸಿಂಧನೂರು ನಗರಸಭೆ ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳು ಖುದ್ದು ಭೇಟಿನೀಡಿ, ಹಂಗಾಮಿ ಅಧ್ಯಕ್ಷರ ನೇಮಕವಾದ ಮೇಲೆ ಎಲ್ಲಾ ಕೆಲಸ ಕಾರ್ಯಗಳ ಕಡತಗಳನ್ನು ಪರಿಶೀಲಿಸಬೇಕು, ನಗರಸಭೆಯಲ್ಲಿ ಸರ್ಕಾರದ ಆದೇಶದ ಪ್ರಕಾರ ಬಿ ಖಾತಾ ಹಾಗೂ ಎ ಖಾತಾ ಸರಿಯಾಗಿ ದೊರಕುತ್ತಿಲ್ಲ ಇದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಐದು ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
