ಸಿಂಧನೂರು: ವಚನ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರ ಅನುಭಾವ ಸಾಹಿತ್ಯ: ಚಂದ್ರೇಗೌಡ ಹರೇಟನೂರು

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 17

ಹನ್ನೆರಡನೇ ಶತಮಾನದ ಶರಣರು ರಚಿಸಿದ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರಿಂದ ಬಂದ ನೆಲಮೂಲದ ಅನುಭಾವ ಸಾಹಿತ್ಯ ಎಂದು ನೀಲಾಂಬಿಕೆ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರೇಗೌಡ ಹರೇಟನೂರು ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಮತ್ತು ಶಿಕ್ಷಾ ಮಿತ್ರ ಎಜ್ಯುಕೇಷನ್ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ದತ್ತಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಸಮಾಜದಲ್ಲಿನ ಜಾತಿ, ಮತ-ಪಂಥ, ಧರ್ಮ ಹಾಗೂ ಲಿಂಗ ತಾರತಮ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿ, ಸಮತಾವಾದಿ ಪರಿಕಲ್ಪನೆಯನ್ನು ಲೋಕಕ್ಕೆ ನೀಡಿದೆ. ಪುರೋಹಿತಶಾಹಿ ವರ್ಗ ಸ್ವರ್ಗ, ನರಕಗಳನ್ನು ಸೃಷ್ಟಿಮಾಡಿ ಸಮಾಜದಲ್ಲಿ ಮೌಢ್ಯ ಬಿತ್ತಿ, ಶ್ರೇಣಿಕೃತ ವ್ಯವಸ್ಥೆಯನ್ನು ಆಚರಣೆಗೆ ತಂದು ಶೋಷಿತ್ತಿರುವುದನ್ನು ಕಂಡ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮೌಢ್ಯ-ಕಂದಾಚಾರಗಳನ್ನು ಬಹಿರಂಗವಾಗಿ ಖಂಡಿಸುವ ಮೂಲಕ ಜನರಲ್ಲಿ ಪ್ರಜ್ಞೆಯನ್ನು ತುಂಬಿದರು. ಹಾಗಾಗಿ ಇಂದಿಗೂ ನಾವು ಶರಣರ ವಚನಗಳನ್ನು ಪ್ರಸ್ತಾಪಿಸುತ್ತಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಪ್ಪ ಹೊಸಳ್ಳಿ ಉಪನ್ಯಾಸಕರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಿಹೋದ ಶರಣ ಪರಂಪರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು 800 ವರ್ಷಗಳ ಹಿಂದೆಯೇ ಆಚರಣೆಗೆ ತಂದೆ ಕೀರ್ತಿಗೆ ಪಾತ್ರವಾಗಿದೆ. ಸಮ ಸಮಾಜದ ಆಶಯವನ್ನು ಹೊಂದಿದ್ದ ಶರಣರು ಕಲ್ಯಾಣ ಕ್ರಾಂತಿಯವರೆಗೂ ಅನುಭವ ಮಂಟಪದ ಮೂಲಕ ಕಟ್ಟಿಕೊಟ್ಟ ಸಾಹಿತ್ಯ ಅಳಿಸಲಾದ ದಾಖಲೆ ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಗಮೇಶ ಕೋಟೆ ಉದ್ಘಾಟಿಸಿದರು. ದತ್ತಿ ದಾನಿಗಳಾದ ಡಾ.ಶಶಿಕಾಂತ ಕಾಡ್ಲೂರು, ಮುಖ್ಯ ಅತಿಥಿಗಳಾದ ಶಿವಶಂಕರಪ್ಪ, ಬಸವರಾಜ ಹೊಸಳ್ಳಿ, ಸಂಗೀತಾ ಸಾರಂಗಮಠ, ನಾಗರಾಜ, ವಿಶ್ವನಾಥ ಪಲ್ಲೇದ, ಶಶಿಕುಮಾರ್ ಸಾಸಲಮರಿ ಇನ್ನಿತರರಿದ್ದರು. ಸಂಗೀತ ಸಾರಂಗಮಠ ನಿರೂಪಿಸಿದರು. ತುಳಸಿದಾಸ ಸ್ವಾಗತಿಸಿದರು. ವೆಂಕಟೇಶ ಬುಕ್ಕನಹಟ್ಟಿ ಸ್ವಾಗತಿಸಿದರು. ಶಶಿಕುಮಾರ್ ಸಾಸಲಮರಿ ವಂದಿಸಿದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *