ಸಿಂಧನೂರು: ಖಾಸಗಿ ಕೆರೆ ವೀಕ್ಷಿಸಿದ ನಗರಾಭಿವೃದ್ಧಿ ಹೋರಾಟ ಸಮಿತಿ, ನಗರಸಭೆ ನಿರ್ಲಕ್ಷ್ಯಕ್ಕೆ ಕಿಡಿ

Spread the love

(ವಿಶೇಷ ಸುದ್ದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 31

ನಗರದಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಹಾಹಾಕಾರ ಪರಿಸ್ಥಿತಿ ಉಂಟಾಗಿದ್ದು, ವಾರ್ಡ್ ನಿವಾಸಿಗಳ ಹಿತದೃಷ್ಟಿಯಿಂದ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಗರಸಭೆ ಬೆನ್ನತ್ತಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಬಪ್ಪೂರು ರಸ್ತೆಯಲ್ಲಿರುವ ಖಾಸಗಿಯವರ ಕೆರೆಯನ್ನು ವೀಕ್ಷಿಸಿದರು.
ನಗರಸಭೆ ಆಡಳಿತ ತುಂಗಭದ್ರಾ ಎಡದಂಡೆ ನಾಲೆಯಿಂದ ಕೆರೆಗೆ ನೀರು ಬರುವವರೆಗೂ, ಸದ್ಯ ಕೆರೆಯಲ್ಲಿ ಇರುವ ನೀರಿನ ಲಭ್ಯತೆ ಆಧರಿಸಿ, ಮೇ 16ರಿಂದ ನಗರಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಿದೆ. ಆದರೆ ವಾಸ್ತವದಲ್ಲಿ 10 ದಿನಕ್ಕೊ ಒಮ್ಮೆಯೂ ನೀರು ಬಿಡುತ್ತಿಲ್ಲ, ಕೆಲ ವಾರ್ಡ್ ಗಳಿಗೆ 12 ದಿನಗಳಾದರೂ ನೀರು ಬಂದಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಹೋರಾಟ ಸಮಿತಿ ಮೇ 27‌ ರಂದು ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿ ನೀರಿನ ಅಭಾವದಿಂದ ಜನರು ಅನುಭವಿಸುತ್ತಿರುವ ಸಂಕಷ್ಟದ ಕುರಿತು ಗಮನ ಸೆಳೆದಿತ್ತು.

Namma Sindhanuru Click For Breaking & Local News

ಪೌರಾಯುಕ್ತರ ಭರವಸೆ ಏನಾಯ್ತು ?
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಮನವಿಗೆ ಸ್ಪಂದಿಸಿದ್ದ ನಗರಸಭೆ ಪೌರಾಯುಕ್ತರು, ಸದ್ಯ 15 ದಿನಗಳವರೆಗೆ ಆಗುವಷ್ಟು ಮಾತ್ರ ಕೆರೆಯಲ್ಲಿ ನೀರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿಯವರ 2 ಕೆರೆಗಳನ್ನು ಪಡೆದು, ಒಂದು ಕೆರೆಯಿಂದ 15 ದಿನಗಳಂತೆ 30 ದಿನಗಳವರೆಗೆ ನೀರು ಪೂರೈಸಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದೂ ಹೇಳಿದ್ದರು.
ಖಾಸಗಿ ಕೆರೆಗಳಿಗೆ ಭೇಟಿ ನೀಡಿದ ಹೋರಾಟ ಸಮಿತಿ
ಪೌರಾಯುಕ್ತರ ಭರವಸೆಗೆ ಸುಮ್ಮನಾಗದ ನಗರಾಭಿವೃದ್ಧಿ ಹೋರಾಟ ಸಮಿತಿಯ ತಂಡ, ಜನರು ಇನ್ನಷ್ಟು ಸಂಕಷ್ಟಕ್ಕೀಡಾಗದಿರಲಿ ಎಂಬ ಕಳಕಳಿಯಿಂದ ನಗರಸಭೆಯವರು ವಶಕ್ಕೆ ಪಡೆಯಲು ಉದ್ದೇಶಿಸಿರುವ ಖಾಸಗಿ ಕೆರೆಗಳಿಗೆ ಭೇಟಿ ನೀಡಿತು. ರೈತರ ಖಾಸಗಿ ಕೆರೆಗಳಿಂದ ನಗರದ ದೊಡ್ಡ ಕೆರೆಗೆ ನೀರು ಹರಿಸುವ ಪೈಪ್‌ಲೈನ್ ಕಾರ್ಯ ಪೂರ್ತಿ ಮುಗಿದಿದೆ ಎಂದು ಹೇಳಲಾಗಿತ್ತು; ಸಮರೋಪಾದಿಯಲ್ಲಿ ಕೆಲಸ ಮಾಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಸ್ಥಳಕ್ಕೆ ಬೇಟಿ ಕೊಟ್ಟಾಗ ನಗರಸಭೆಯವರ ನಿರ್ಲಕ್ಷ್ಯ ಕಣ್ಣಿಗೆ ರಾಚಿತು. ಕೆರೆಯ ಹತ್ತಿರದ ಹೊಲದಲ್ಲಿ ಪೈಪುಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಅಲ್ಲಿ ಯಾರೊಬ್ಬ ಸಿಬ್ಬಂದಿಯೂ ಇಲ್ಲದಿರುವುದು ಕಂಡುಬಂತು. ಇದಲ್ಲದೇ ತುರ್ವಿಹಾಳದಿಂದ ನೀರು ಹರಿಸುವ ದೊಡ್ಡ ಪೈಪ್ (ಕುಷ್ಟಗಿ ಮಾರ್ಗದ ರಸ್ತೆಯ ಶರಣೆಗೌಡರ ಕೋಲ್ಡ್ ಸ್ಟೋರೇಜ್ ಹತ್ತಿರ) ಡ್ಯಾಮೇಜಾಗಿ (ಒಡೆದು) ಅರ್ಧ ಅಡಿ ನೀರು ಸೋರಿಕೆಯಾಗುತ್ತಿರುವುದು ಕಂಡುಬಂತು. ಕಳೆದ ಒಂದು ವರ್ಷದಿಂದ ಈ ಪೈಪ್ ಸೋರುತ್ತಿದೆ ಎಂದು ಹೇಳಲಾಗುತ್ತಿದ್ದು, ಆದರೆ ಇಲ್ಲಿಯವರೆಗೂ ದುರಸ್ತಿಗೆ ಮುಂದಾಗದೇ ಇರುವುದು ನಗರಸಭೆಯ ನಿರ್ಲಕ್ಷ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

Namma Sindhanuru Click For Breaking & Local News

‘ಪ್ರತಿ ವಾರ್ಡ್‌ ಗೆ ಮೂರು ದಿನಕ್ಕೊಮ್ಮೆ ಟ್ಯಾಂಕರ್ ನೀರು ಪೂರೈಸಿ’
ನಗರದ ಕೊಳಚೆ ಪ್ರದೇಶ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಬಡ ಕೂಲಿಕಾರರು, ಮಧ್ಯಮ ವರ್ಗದವರು, ಬಾಡಿಗೆ ಮನೆ ನಿವಾಸಿಗಳು ಸೇರಿದಂತೆ ಆರ್ಥಿಕವಾಗಿ ದುರ್ಬಲರಾದವರು ವಾಸವಿದ್ದು, ಅವರು 10 ರಿಂದ 15 ದಿನಗಳವರೆಗೆ ನೀರು ಸಂಗ್ರಹಿಸಿಟ್ಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಅವರ ಬಳಿ ನೀರಿನ ಸಂಪ್ ಆಗಲಿ, ದೊಡ್ಡ ಬ್ಯಾರೆಲ್ಲುಗಳಾಗಲಿ ಅಥವಾ ಇತರೆ ಸಾಮಗ್ರಿಗಳಾಗಲಿ ಇಲ್ಲ. ಹೀಗಾಗಿ ಎರಡ್ಮೂರು ದಿನಕ್ಕೊಮೆ ನೀರು ಬಿಟ್ಟರೇ ಆ ನೀರನ್ನೇ ಅವರು ಬಳಸಿಕೊಂಡು ಉಪಯೋಗಿಸುತ್ತಾರೆ. ಪ್ರತಿ ವರ್ಡ್ಗಳಿಗೆ ಮೂರು ದಿನಕ್ಕೆ ಒಂದು ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರೆ, ಹೆಚ್ಚು ನೀರು ಸಂಗ್ರಹಿಸಿಕೊಳ್ಳಲು ಸಾಧ್ಯವಾಗದ ಬಡವರಿಗೆ ಅನುಕೂಲವಾಗುತ್ತದೆ. ಇಲ್ಲದೇ ಹೋದರೆ ಜನರು ನೀರಿನ ಸಮಸ್ಯೆಯಿಂದ ಈಗಾಗಲೇ ರೋಸಿಹೋಗಿದ್ದು, ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಮಿತಿಯವರು ವಿಶ್ಲೇಷಿಸಿದ್ದಾರೆ.


Spread the love

Leave a Reply

Your email address will not be published. Required fields are marked *