ಸಿಂಧನೂರು: ನೀರಿನ ಹಾಹಾಕಾರಕ್ಕೆ ಕಾರಣ ಪಟ್ಟಿ ಮಾಡಿದ ನಗರಾಭಿವೃದ್ಧಿ ಹೋರಾಟ ಸಮಿತಿ

Spread the love

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 2

ನಗರದಲ್ಲಿ ಕುಡಿವ ನೀರಿನ ಅಭಾವದಿಂದ ಹಾಹಾಕಾರ ಸೃಷ್ಟಿಯಾಗಿದೆ ಎಂದು ದೂರಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ನಗರಸಭೆ, ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ಹಲವು ಲೋಪಗಳ ಕುರಿತು ಧ್ವನಿ ಎತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ನೀರಿಗಾಗಿ ದಿನವೂ ಕಿರಿಕಿರಿ ಅನುಭವಿಸುತ್ತಿದ್ದರೂ, ನಗರಸಭೆ ಸದಸ್ಯರು ಗಂಭೀರವಾಗಿ ಪರಿಗಣಿಸದೇ ಈ ಕುರಿತು ಸೊಲ್ಲೆತ್ತದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಅಂದಾಜು ಒಂದೂವರೆ ಲಕ್ಷದಷ್ಟು ಜನರು ವಾಸವಿದ್ದಾರೆ, ದಿನದಿಂದ ದಿನಕ್ಕೆ ನೀರಿನ ಬಳಕೆಯ ಪ್ರಮಾಣದ ಬೇಡಿಕೆ ಹೆಚ್ಚುತ್ತಿದೆ. ಆದರೆ, ಬೇಡಿಕೆಗೆ ತಕ್ಕಂತೆ ಜಿಲ್ಲಾಡಳಿತ, ನಗರಸಭೆಯಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ. ನೀರಿನ ನಿರ್ವಹಣೆ ಪ್ರಕ್ರಿಯೆಯೇ ಗೊಂದಲದ ಗೂಡಾಗಿದೆ. ಹೀಗಾಗಿ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಅವಧಿ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Namma Sindhanuru Click For Breaking & Local News

ಹೋರಾಟ ಸಮಿತಿ ಪಟ್ಟಿಮಾಡಿದ ನಗರಸಭೆ ಆಡಳಿತ ಮಂಡಳಿಯ ಲೋಪಗಳು
1) ತುರ್ವಿಹಾಳ ಬಳಿ ಇರುವ ಕೆರೆಯನ್ನು ಪೂರ್ಣವಾಗಿ ತುಂಬಿಸದಿರುವುದು.
2) 8 ಮೀಟರ್ ವರೆಗೆ ನೀರು ತುಂಬಿಸಬಹುದಾದ ಕೆರೆಯಲ್ಲಿ ಕೇವಲ 6.5 ಮೀಟರ್ ನೀರು ತುಂಬಿಸಿರುವುದು.
3) ಸಿಂಧನೂರಿನ ಒಣ ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್ ಹತ್ತಿರ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ, ಈ ನೀರಿನಲ್ಲಿ ವ್ಯಕ್ತಿಯೊಬ್ಬರು ಜಮೀನಿನಲ್ಲಿ ಭತ್ತ ಬೆಳೆದಿದ್ದಾರೆ. ಒಂದು ವರ್ಷ ಕಳೆದರೂ ನಗರಸಭೆ ದುರಸ್ತಿಗೆ ಮುಂದಾಗಿಲ್ಲ.
4) ಬೇಸಿಗೆ ದಿನಗಳಲ್ಲಿ ಕಟ್ಟಡಗಳಿಗೆ ಪರವಾನಗಿ ರದ್ದುಪಡಿಸದೇ ನೀರು ಬಳಕೆಗೆ ಮುಕ್ತ ಅವಕಾಶ ನೀಡಿರುವುದು.
5) ಡಿಯುವ ನೀರಿನ ಪೂರೈಕೆಯ ಸಮಯದಲ್ಲಿ ವಿವಿಧ ವಾರ್ಡ್‌ಗ
ಳಲ್ಲಿ ನಳದ ನೀರು ಪೋಲಾಗುವುದನ್ನು ನಿಯಂತ್ರಿಸುವಲ್ಲಿ ನಗರಸಭೆ ವಿಫಲವಾಗಿದೆ.
6) ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್, ಪ್ರಭಾವಿಗಳ ಮನೆಗಳಿಗೆ ಕಾನೂನು ಬಾಹಿರವಾಗಿ ನೀರು ಪೂರೈಕೆ ಮಾಡುತ್ತಿರುವುದು.
7) ಸಿಂಧನೂರು ನಗರಸಭೆ ವ್ಯಾಪ್ತಿಯಲ್ಲಿ 219 ಕೊಳವೆ ಭಾವಿಗಳಿದ್ದು ಅದರಲ್ಲಿ ಹಲವಾರು ಕೊಳವೆಬಾವಿಗಳೂ ದುರಸ್ತಿಗೆ ಬಂದಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.
8) ನಗರಸಭೆ ಸದಸ್ಯರು ಮತ್ತು ಶಾಸಕರು ಜನರ ಸಂಕಟವನ್ನು ಅರಿತುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು.
9) ನಗರದ ಅನೇಕ ವಾರ್ಡ್ಗಳಲ್ಲಿ ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸದೇ ಹಲವು ದಿನಗಳಿಂದ ಕೆಟ್ಟು ನಿಂತಿದ್ದು, ಅವುಗಳನ್ನು ರಿಪೇರಿ ಮಾಡಿಸದೇ ಇರುವುದು.
10) 50 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡ ತುರ್ವಿಹಾಳ ಕೆರೆಯ ಕಾಮಗಾರಿ ಪೂರ್ಣಗೊಳಿಸದ ಕಾರಣ ನೀರು ಸಂಗ್ರಹ ಕಡಿಮೆಯಾಗಿದೆ.
11) ನಗರದ ದೊಡ್ಡ ಕೆರೆಯ ಹಳ್ಳದ ಭಾಗದಲ್ಲಿನ ಒಡ್ಡು ಕುಸಿದಿದ್ದು, ಅರ್ಧದಷ್ಟು ನೀರು ಸಂಗ್ರಹ ಕಡಿಮೆಯಾಗಿದೆ. 10 ವರ್ಷ ಕಳೆದರೂ ಕುಸಿದ ಕೆರೆಯ ರಿಪೇರಿ ಮಾಡದಿರುವುದು.
12) ಬಡವರು, ಬೀದಿ ವ್ಯಾಪಾರಿಗಳು, ಕೊಳೆಗೇರಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ತಿಂಗಳ ಹಿಂದೆಯೇ ಟೆಂಡರ್ ಕರೆಯಬೇಕಾಗಿತ್ತು. ಈ ಕುರಿತು ವಿಳಂಬ ಮಾಡಲಾಗಿದೆ.
13) ಬಪ್ಪೂರು ರಸ್ತೆಯ ಎರಡು ಕೆರೆಯ ನೀರನ್ನು 1 ವಾರದ ಹಿಂದೆಯೇ ಪರೀಕ್ಷೆಗೆ ಕಳುಹಿಸದಿರುವುದು.

Namma Sindhanuru Click For Breaking & Local News

ಹಕ್ಕೊತ್ತಾಯಗಳು
1) ವಾರಕ್ಕೊಂದು ಬಾರಿ ನೀರು ಪೂರೈಕೆ ಮಾಡಬೇಕು.
2) ಕೊಳಗೇರಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು.
3) ಸಿಂಧನೂರು ಸುತ್ತಮುತ್ತಲಿರುವ ಖಾಸಗಿ ಕೆರೆ, ಬೋರ್‌ವೆಲ್‌ಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಂಡು ನಗರದ ಜನತೆಗೆ ಕುಡಿಯುವ ಮತ್ತು ಬಳಕೆಗೆ ನೀರು ಪೂರೈಸಬೇಕು.
4) 10 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಭರವಸೆ ನೀಡಿ 12 ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತಿದ್ದು, ನಗರಸಭೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದಂತೆ ನಡೆದುಕೊಳ್ಳಬೇಕು.
5) ತುರ್ವಿಹಾಳ ಮತ್ತು ಸಿಂಧನೂರಿನ ಕೆರೆಗಳನ್ನು ಆಧುನೀಕರಣಗೊಳಿಸಿ, ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದು.


Spread the love

Leave a Reply

Your email address will not be published. Required fields are marked *