ನಮ್ಮ ಸಿಂಧನೂರು, ಮೇ 1
ಪ್ರಪಂಚ ಕಾರ್ಮಿಕ ವರ್ಗದ ಹೋರಾಟದ ಚರಿತ್ರೆಯಲ್ಲಿ ಮೇ ದಿನಾಚರಣೆಗೆ ಅತ್ಯಂತ ಮಹತ್ವದ ಪ್ರಾಮುಖ್ಯತೆ ಇದೆ.1886 ಮೇ ಒಂದರಂದು ಅಮೆರಿಕದ ಕಾರ್ಮಿಕ ವರ್ಗ ದೇಶಾದ್ಯಂತ ಹೂಡಿದ ಚಳುವಳಿಯ ಧ್ವನಿ ಜಗತ್ತಿನಾದ್ಯಂತ ಮಾರ್ದನಿಸಿದ ದಿನವಿದು. ಇದರಿಂದ ಸ್ಫೂರ್ತಿಯನ್ನು ಪಡೆದು ಸಾಮ್ರಾಜ್ಯಶಾಹಿ ಲೂಟಿ, ಫ್ಯಾಶಿಸ್ಟ್ ದಾಳಿಯ ವಿರುದ್ಧ ಸಮರಶೀಲ ಹೋರಾಟಕ್ಕೆ ಒಗ್ಗೂಡಬೇಕೆಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹಾಗೂ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಗಂಗಾಧರ ಕರೆ ನೀಡಿದ್ದಾರೆ.
ಈ ಕುರಿತು ಬುಧವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಮೋದಿ ಸರಕಾರ ಅಂಗೀಕರಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳು ಇಲ್ಲಿನ ದುಡಿಯುವ ವರ್ಗವನ್ನು ಬರ್ಬರ ಶೋಷಣೆಗೆ ಈಡು ಮಾಡಲಿವೆ. ದೇಶದಾದ್ಯಂತ ದಿನಕ್ಕೆ 12 ಗಂಟೆಗೂ ಹೆಚ್ಚುಕಾಲ ದುಡಿಯುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಕನಿಷ್ಠ ಕೂಲಿಯನ್ನು ಈ ದೇಶದಲ್ಲಿ ನಿರಾಕರಿಸಲಾಗುತ್ತಿದೆ. ಉದ್ಯೋಗದ ಭದ್ರತೆಯು ಅಸಾಧ್ಯದ ಮಾತಾಗಿದೆ. ಗುಳೆ ಹೋಗುವಿಕೆ ಹಾಗೂ ಗುತ್ತಿಗೆ ಪದ್ಧತಿ ರಾರಾಜಿಸುತ್ತಿದೆ. ಗಣಿ, ಮಿಲ್, ಮಿಷನ್ಸ್, ಫ್ಯಾಕ್ಟರಿ, ಕೆಲಸದ ಕಚೇರಿ, ಪ್ಲಾಂಟೇಶನ್, ಸರಕು ಸಾಗಾಣಿಕೆ, ಪೌರಸೇವೆ, ಮನೆಗೆಲಸ, ಅಂಗಡಿ ಮುಂಗಟ್ಟು, ಗಿಗ್ ಮುಂತಾದ ಕಡೆ ಕೆಲಸದ ಸ್ಥಿತಿಗಳು ನರಕ ಸದೃಶವಾಗಿವೆ. ಭಾರತದಲ್ಲಿರುವ ಅಸಂಘಟಿತ ಕಾರ್ಮಿಕರ ಸಂಖ್ಯೆ ಶೇಕಡಾ 95 ಆಗಿದೆ. ಕನಿಷ್ಠ ಕೂಲಿ ಪಡೆಯುವ ಕಾರ್ಮಿಕರ ಪ್ರಮಾಣ ಶೇಕಡಾ ೫ ದಾಟಿರುವುದಿಲ್ಲ. ಕೆಲಸದ ಮೇಲಿನ ಅಪಘಾತ ಹಾಗೂ ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ. ಕಾರ್ಮಿಕ ಇಲಾಖೆಯಲ್ಲಿ ಕಾರ್ಪೊರೇಟ್ ಹಾಗೂ ಕಾಂಟ್ರಾಕ್ಟ್ ಹಿಡಿತ ಕೇಕೆ ಹಾಕುತ್ತಿದೆ ಎಂದು ಆಪಾದಿಸಿದ್ದಾರೆ.
ಕಾರ್ಮಿಕರ ಐಕ್ಯತೆ ಛಿದ್ರಗೊಳಿಸುವ ಹುನ್ನಾರ
ಮೋದಿ ಹೇಳಿದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಉಲ್ಟಾ ಆಗಿದೆ. ಕಾನೂನು ಬಾಹಿರವಾಗಿ ಹತ್ತಾರು ಕೋಟಿ ಕಾರ್ಮಿಕ ಹಾಗೂ ಸಿಬ್ಬಂದಿಯನ್ನು ಸರಕಾರಗಳ ಸ್ಕೀಮ್ ವರ್ಕರ್‌ಗಳೆಂದು ದುಡಿಸಲಾಗುತ್ತಿದೆ. ಒಟ್ಟಾರೆ ಕಾರ್ಮಿಕ ವರ್ಗ ತನ್ನ ತ್ಯಾಗ-ಬಲಿದಾನದೊಂದಿಗೆ ಪಡೆದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ಕಸಿಯುವಿಕೆಯ ವಿರುದ್ಧದ ಹೋರಾಟವನ್ನು ಬಲಪ್ರಯೋಗದೊಂದಿಗೆ ಹತ್ತಿಕ್ಕಲಾಗುತ್ತಿದೆ. ಧರ್ಮ, ಜಾತಿ,ಬಾಷೆ, ಪ್ರಾಂತ್ಯ ಮುಂತಾದ ಹೆಸರಲ್ಲಿ ಕಾರ್ಮಿಕರ ಐಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ. ಕಾರ್ಮಿಕ ವರ್ಗವು ತನ್ನ ವರ್ಗ ರಾಜಕಾರಣವನ್ನು ತನ್ನ ಕೈಯಾರೆ ತಿರಸ್ಕರಿಸಿ, ರಾಜಕೀಯ ರಹಿತ ಕಾರ್ಮಿಕ ಸಂಘ ಎಂಬ ಅಪಾಯಕಾರಿ ಟ್ರೇಡ್ ಯೂನಿಯನ್ ಸಿದ್ಧಾಂತಕ್ಕೆ ಗುರಿಯಾಗಿ ನಿಂತಿದೆ ಎಂದು ಹೇಳಿದ್ದಾರೆ.
‘ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಿ’
ಇಂತಹ ಸಂದಿದ್ದ ಸಂದರ್ಭದಲ್ಲಿ ದುಡಿಯುವ ವರ್ಗಗಳು, ದಮನಿತ ಜನಾಂಗಗಳು ಕೆಲಸ ವೇತನ ಹಾಗೂ ಘನತೆಯ ಜೀವನಕ್ಕಾಗಿ ದೇಶಾದ್ಯಂತ ಒಗ್ಗೂಡಿ ಹೋರಾಟದ ಕಣಕ್ಕಿಳಿಯುವ ಕಾಲ ಇದಾಗಿದೆ. ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಖಾಸಗಿ, ಸರಕಾರಿ,ಅರೆ ಸರ್ಕಾರಿ ಹಾಗೂ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು ಈ ಬಾರಿಯ ಮೇ ದಿನಾಚಾರಣೆಯದು ಫ್ಯಾಸಿಸ್ಟ್ ಆರ್ ಎಸ್ ಎಸ್ ಬಿಜೆಪಿಯನ್ನು ಸೋಲಿಸುವ ಪ್ರತಿಜ್ಞೆ ಮಾಡಬೇಕಾಗಿದೆ. ಮುಂದುವರಿದು, ಸಾಮ್ರಾಜ್ಯಶಾಹಿ ವಿರೋಧಿ ದಿಕ್ಕಿನಲ್ಲಿ ಸಂಘರ್ಷ ಮಾಡುತ್ತಲೇ, ನಿಜವಾದ ಪ್ರಜಾಪ್ರಭುತ್ವ ಹಾಗೂ ಸಮಾಜವಾದದ ಸಾಕಾರಕ್ಕಾಗಿ ದೀರ್ಘಕಾಲದ ಸಂಘರ್ಷಕ್ಕೆ ಮುಂದಾಗಲು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕೇಂದ್ರ ಸಮಿತಿಯು ಈ ಮೂಲಕ ಮೇ ದಿನಾಚರಣೆಯ ಕರೆಯಾಗಿದೆ ಎಂದು ಹೇಳಿದ್ದಾರೆ.