ನಮ್ಮ ಸಿಂಧನೂರು, ಜುಲೈ 5
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 05-07-2024 ಶುಕ್ರವಾರದಂದು 19,201 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ.ಜಲಾಶಯದಲ್ಲಿ ಇಂದು 11.71 ಟಿಎಂಸಿ ನೀರು ಸಂಗ್ರಹವಿದ್ದರೆ, 295 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.07 ಟಿಎಂಸಿ ನೀರು ಸಂಗ್ರಹವಿದ್ದರೆ, 259 ಕ್ಯೂಸೆಕ್ ನೀರು ಒಳಹರಿವಿತ್ತು, 60 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಈಗಾಗಲೇ ತುಂಗಾ ನದಿ ತುಂಬಿದ್ದು, ಎರಡು ಗೇಟ್‌ಗಳ ಮೂಲಕ ನದಿಗೆ ನೀರು ಹರಿಬಿಡಲಾಗಿದೆ. ಅಲ್ಲದೇ ಶಿವಮೊಗ್ಗದ ಮಲೆನಾಡ ಭಾಗದಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ನದಿಯ ಒಳಹರಿವು ಹೆಚ್ಚಿದೆ. ಪ್ರಸಕ್ತ ಮಳೆ ವರ್ಷದಲ್ಲಿ ಅತಿ ಹೆಚ್ಚಿನ ಒಳಹರಿವು ಇಂದು ದಾಖಲಾಗಿದೆ. ಮಳೆಯ ಪ್ರಮಾಣ ಹೆಚ್ಚಿದಂತೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ತುಂಗಾ ನದಿಗೆ ಒಳಹರಿವು ಹೆಚ್ಚಳ
ತುಂಗಾ ಜಲಾಶಯಕ್ಕೆ 22 ಗೇಟ್‌ಗಳಿದ್ದು, 21 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಬಿಡಲಾಗಿದೆ. ಶಿವಮೊಗ್ಗ ನಗರದ ಬಳಿಯಿರುವ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತೊರೆಗಳು, ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಹೀಗಾಗಿ ತುಂಗಾ ನದಿಯ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರಲಿದ್ದು, ಒಳಹರಿವಿನ ಪ್ರಮಾಣ 24 ಗಂಟೆಗಳ ಒಳಗೆ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.