ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 3
ಅಂಬಾದೇವಿಯ ಜಾತ್ರೋತ್ಸವವನ್ನು ಸಡಗರ, ಸಂಭ್ರಮದಿAದ ಇಂದು ಉದ್ಘಾಟಿಸಿದ್ದೇನೆ ಎಂದು ಮಾತಿಗೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು ಜೂನ್ ತಿಂಗಳ ಒಳಗಡೆ ಎಷ್ಟೇ ತೊಂದರೆ ಎದುರಾದರೂ, ಎಷ್ಟೇ ಖರ್ಚಾದರೂ ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಸಿ ಮುಂದಿನ ಬೆಳೆಗೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು. ಅಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದಿನಾಂಕ: 03-01-2026 ಶನಿವಾರದಂದು ಜಂಬೂಸವಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು.

1 ಲಕ್ಷ 12 ಸಾವಿರ ಕೋಟಿ ರೂಪಾಯಿ ಖರ್ಚು
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಗೆ 1 ಲಕ್ಷ 12 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. 640 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಇಲ್ಲಿಯವರೆಗೂ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಗಾಗಿ ರಾಜ್ಯ ಸರ್ಕಾರ 16 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ವರ್ಷ 52 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ” ಎಂದು ಸಿಎಂ ಹೇಳಿದರು.

ರಾಜ್ಯ ನೀರಾವರಿ ಯೋಜನೆಗಳಿಗೆ ಚುರುಕು
“ರಾಜ್ಯಸ್ಥಾನದ ನಂತರ ಕರ್ನಾಟಕವೇ ಒಣಭೂಮಿ ಹೊಂದಿರುವ ಎರಡನೇ ರಾಜ್ಯವಾಗಿದೆ. ಹೀಗಾಗಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಿಂಧನೂರು ಒಂದೇ ಅಲ್ಲದೇ ಇಡೀ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಕೆಳಭಾಗದ ರೈತರಿಗೆ ನೀರು ಕೊಡುವ ಕೆಲಸ ಮಾಡುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
‘ಕೇಂದ್ರ ಸರ್ಕಾರ ಗೆಜೆಟ್ ನೊಟಿಫಿಕೇಶನ್ ಮಾಡಿಲ್ಲ’
“ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯರೆಗೂ ಗೆಜೆಟ್ ನೊಟಿಫಿಕೇಶನ್ ಮಾಡಿಲ್ಲ. 2003ರಲ್ಲಿಯೇ ನಮ್ಮ ರಾಜ್ಯಕ್ಕೆ ನ್ಯಾಯ ದೊರೆತಿದೆ. 170 ಟಿಎಂಸಿ ನೀರು ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನಾನು ಮತ್ತು ನಮ್ಮ ಜಲಸಂಪನ್ಮೂಲ ಸಚಿವರು ನಿರಂತರ ಮನವಿ ಮಾಡುತ್ತಾ ಬರುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಿರ್ಲಕ್ಷö್ಯ ಧೋರಣೆ ಅನುಸರಿಸುತ್ತಿದೆ” ಎಂದು ಸಿದ್ದರಾಮಯ್ಯ ಅವರು ಆಪಾದಿಸಿದರು.

ತಲಾ ಆದಾಯದಲ್ಲಿ ಕರ್ನಾಟಕವೇ ನಂಬರ್ ಒನ್
“ತಲಾ ಆದಾಯದಲ್ಲಿ ಇಡೀ ದೇಶಕ್ಕೆ ಕರ್ನಾಟಕ ರಾಜ್ಯವೇ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಜನರಿಗೆ ನಾವು ಏನು ಮಾತು ಕೊಟ್ಟಿದ್ದೇವೆ ಅದನ್ನು ಈಡೇರಿಸುತ್ತೇವೆ. ಯಾವತ್ತೂ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.
‘ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ’
“ಸಿದ್ದರಾಮಯ್ಯನವರ ಸರ್ಕಾರದಲ್ಲಿ ಹಣ ಇಲ್ಲ; ಗ್ಯಾರಂಟಿ ಯೋಜನೆಗಳನ್ನು ಮಾಡಿ, ಅಭಿವೃದ್ಧಿ ಯೋಜನೆ, ನೀರಾವರಿ, ಮೂಲ ಸೌಕರ್ಯಗಳಿಗೆ ಅನುದಾನ ಒದಗಿಸಲು ಹಣ ಇಲ್ಲ ಎಂದು ಹೇಳುತ್ತಿದ್ದಾರೆ ಎಂಬ ವದಂತಿ ಹಬ್ಬಿಸಲಾಗುತ್ತಿದ್ದು, ಇದು ಅಪ್ಪಟ ಸುಳ್ಳು. ಗ್ಯಾರಂಟಿ ಯೋಜನೆಗಳನ್ನು ಮಾಡಿರುವುದು ನಿಜ, ಆದರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ನಮ್ಮ ಸರ್ಕಾರ ಹಿಂದೆ ಬಿದ್ದಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

‘ಮೋದಿಯವರು ಮನರೇಗಾ ಯೋಜನೆಯಲ್ಲಿ ಗಾಂಧಿಯವರ ಹೆಸರು ತೆಗೆದು ಹಾಕಿದ್ದಾರೆ’
“ಮನರೇಗಾ ಯೋಜನೆಗೆ ರಾಜ್ಯ ಸರ್ಕಾರ ಪ್ರತಿವರ್ಷ ಸುಮಾರು 6000 ಕೋಟಿ ರೂ.ಖರ್ಚು ಮಾಡುತ್ತಿದೆ. ಕಳೆದ 18ನೇ ತಾರೀಖಿನಂದು ಕೇಂದ್ರ ಸರ್ಕಾರ ಹೊಸ ಕಾನೂನು ಮಾಡಿದ್ದಾರೆ. ಆ ಹೊಸ ಕಾಯ್ದೆಯಲ್ಲಿ ಗಾಂಧೀಜಿಯವರ ಹೆಸರು ತೆಗೆದುಹಾಕಿ, ವಿಬಿ-ಜಿ-ರಾಮ್-ಜಿ ಎಂಬ ಕಾಯ್ದೆ ಮಾಡಿದ್ದಾರೆ. ಸ್ವರೂಪವನ್ನೇ ಬದಲಾವಣೆ ಮಾಡಿದ್ದಾರೆ. ಈ ಕಾಯ್ದೆಯ ಅಡಿ ಜನರ ಏನು ಕೆಲಸ ಕೇಳ್ತಾರೆ, ಆ ಕೆಲಸ ಕೊಡಲು ಆಗುವುದಿಲ್ಲ. ಬಡವರು, ರೈತರು, ಮಹಿಳೆಯರು, ದಲಿತರಿಗೆ ಇದರಿಂದ ತೊಂದರೆಯಾಗುವ ರೀತಿ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ನಮ್ಮ ಪಕ್ಷ, ಇತರೆ ಪಕ್ಷಗಳೊಂದಿಗೆ ಸೇರಿ ವಿರೋಧ ಮಾಡುತ್ತೇವೆ. ನಮ್ಮ ಉದ್ದೇಶ ಈ ಕಾನೂನನ್ನು ರದ್ದು ಮಾಡಬೇಕೆಂಬುದು. ಮನರೇಗಾ ಕಾನೂನು ಪುನಸ್ಥಾಪನೆ ಮಾಡಬೇಕು. 20 ವರ್ಷಗಳ ಹಿಂದೆ ಮನಮೋಹನ್‌ಸಿಂಗ್ ಅವರು ಈ ಯೋಜನೆ ಜಾರಿಗೆ ತಂದಿದ್ದು, ಆದರೆ ಬಿಜೆಪಿ ಸರ್ಕಾರ ಇದನ್ನು ತೆಗೆದುಹಾಕಿದೆ. ಇದಕ್ಕೆ ಜನರು ವಿರೋಧ ಮಾಡಬೇಕು” ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

‘ಹಂಪನಗೌಡರನ್ನು ನಾನು ಅಭಿನಂದಿಸ್ತೇನೆ”
“ವಿದ್ಯಾರ್ಥಿಗಳ ಸಲುವಾಗಿ ಸರ್ಕಾರದ 5 ಕೋಟಿ ರೂಪಾಯಿ ಅನುದಾನದ ಮೂಲಕ 15 ಬಸ್ಸುಗಳ ಸೌಕರ್ಯ ಕಲ್ಪಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗಾಗಿ ನಾನು ವಿದ್ಯಾರ್ಥಿಗಳ ಪರವಾಗಿ ಶಾಸಕ ಹಂಪನಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಷ್ಟೇ ಅಲ್ಲದೇ ಸಾಲಗುಂದಾ, ಒಳಬಳ್ಳಾರಿಗೆ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ” ಎಂದು ಅವರು ಹೇಳಿದರು.

ಅಂಬಾದೇವಿ ದೇವಸ್ಥಾನ ಅಭಿವೃದ್ಧಿಗೆ 6.30 ಕೋಟಿ ರೂ.
“ಅಂಬಾದೇವಿ ದೇವಸ್ಥಾನದ ಅಭಿವೃದ್ಧಿಗೆ ಒಟ್ಟು 6.30 ಕೋಟಿ ರೂ.ನೀಡಲಾಗಿದೆ. ಅದರಲ್ಲಿ ಮೊದಲ ಹಂತದಲ್ಲಿ 2 ಕೋಟಿ ರೂ.ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾಡಿಗೆ ಅಂಬಾದೇವಿ ದೇವಸ್ಥಾನದ ಮಹತ್ವ ಸಾರಲು ವಿಶೇಷ ಜಾತ್ರೆ : ಹಂಪನಗೌಡ ಬಾದರ್ಲಿ
ಶಾಸಕ ಹಂಪನಗೌಡ ಬಾದರ್ಲಿ ಅವರು ಮಾತನಾಡಿ, ಸಿಂಧನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಅಲ್ಲದೇ ಅಂಬಾದೇವಿ ದೇವಸ್ಥಾನ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ಈ ದೇವಸ್ಥಾನದ ಮಹತ್ವ ನಾಡಿಗೆ ಸಾರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಡಾ.ಶರಣ ಪ್ರಕಾಶ ಪಾಟೀಲ್, ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ನಾಗರಾಜ.ಬಿ.ಎಂ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ವಸಂತಕುಮಾರ ಇದ್ದರು. ಜಿಲ್ಲಾಧಿಕಾರಿ ನಿತೀಶ್.ಕೆ, ತಹಸೀಲ್ದಾರ್ ಅರುಣ ದೇಸಾಯಿ, ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ವಿಶೇಷ ಭೂಸ್ವಾಧೀನಾಧಿಕಾರಿ ಶೃತಿ ಇನ್ನಿತರರಿದ್ದರು.

