ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 27
ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವದ ಹಿನ್ನೆಲೆಯಲ್ಲಿ ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ತಾಲೂಕು ಸಮಿತಿ ವತಿಯಿಂದ ಡಿಸೆಂಬರ್ 31ರಂದು ನಗರದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಧುಮತಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 28000 ಸೈನಿಕರನ್ನು ಕೇವಲ 500 ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ ಭೀಮಾ ಕೋರೆಗಾಂವ್ ಆಗಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು-ಕೀಳುಗಳ ವಿರುದ್ಧ ಸೆಟೆದುನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟಕ್ಕೆ ಇದು ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಶೋಷಿತರು, ಮೇಲ್ಜಾತಿ ಶೋಷಕರ ಶೋಷಣೆಯ ನಡವಳಿಕೆ ವಿರುದ್ಧ ಯುದ್ಧ ಘೋಷಿಸಿ, ಗೆಲುವು ಸಾಧಿಸಿದಂತ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿದೆ. ಭೀಮಾ ತೀರದಲ್ಲಿ ಕಾಳಗ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮಾ ಕೋರೇಗಾಂವ್ ಯುದ್ಧವೆಂದೇ ಪ್ರಸಿದ್ಧಿ ಪಡೆದಿದೆ’ ಎಂದು ಹೇಳಿದರು.
ಎಪಿಎಂಸಿಯಿಂದ, ತಾ.ಪಂ.ವರೆಗೆ ಪಂಜಿನ ಮೆರವಣಿಗೆ
‘ನಗರದ ಎಪಿಎಂಸಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿವರೆಗೆ ಭೀಮ್ ಆರ್ಮಿ ಕಾರ್ಯಕರ್ತರು ಸೇರಿದಂತೆ ಮುಖಂಡರಿಂದ ಪಂಜಿನ ಮೆರವಣಿಗೆ ನಡೆಯಲಿದೆ. ತದನಂತರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು. ಈ ವಿಜಯೋತ್ಸವದಲ್ಲಿ ವಿದ್ಯಾರ್ಥಿ ಯುವಜನರು, ವಿವಿಧ ಜನಪರ ಸಂಘಟನೆಗಳ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸುವಂತೆ’ ಪ್ರಮೀಣ್‌ಕುಮಾರ ಧುಮತಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಮೇಶ ಸುಕಾಲಪೇಟೆ, ಪರಶುರಾಮ, ಬೀರಪ್ಪ, ಪ್ರದೀಪ್, ವೀರಭದ್ರಯ್ಯ ಇದ್ದರು.
