(ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 30
ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದ ಹಲವು ದಿನಗಳಿಂದ ಒಳಹರಿವಿನ ಸುಳಿವಿಲ್ಲದಂತಾಗಿದೆ. ಈ ನಾಲ್ಕು ಜಿಲ್ಲೆ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಸುರಿದ ವರದಿ ಬರುತ್ತಿದ್ದರೂ ಒಳಹರಿವು ಹೆಚ್ಚಳವಾಗದೇ ಇರುವುದು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ನೀರಿನ ದಾಖಲೆ
ದಿನಾಂಕ: 30-05-2024ರಂದು 3.33 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹ ಇದೆ. ಹೊರ ಹರಿವು 33 ಕ್ಯೂಸೆಕ್ ಇದ್ದರೆ, ಒಳ ಹರಿವು ಶೂನ್ಯವಾಗಿದೆ. ಇದೇ ದಿನಾಂಕದಂದು ಕಳೆದ 2023ರಂದು ಜಲಾಶಯದಲ್ಲಿ 4.61 ಟಿಎಂಸಿ ನೀರಿನ ಸಂಗ್ರಹವಿದ್ದರೆ, ಹೊರ ಹರಿವು 219 ಕ್ಯೂಸೆಕ್ ಇದ್ದರೆ, 1833 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಅದರಂತೆ ಕಳೆದ 10 ವರ್ಷದ ಹಿಂದೆ ಇದೇ ದಿನಾಂಕಕ್ಕೆ ಹೋಲಿಕೆ ಹಾಕಿದರೆ 2014ರಲ್ಲಿ, 7.39 ಟಿಎಂಸಿ ನೀರು ಸಂಗ್ರಹವಿದ್ದರೆ, ಹೊರ ಹರಿವು 384 ಕ್ಯೂಸೆಕ್ ಹಾಗೂ ಒಳ ಹರಿವು 926 ಕ್ಯೂಸೆಕ್ ದಾಖಲಾಗಿದೆ.
ಸಿಂಗಟಾಲೂರು ಬ್ಯಾರೇಜ್‌ನಿಂದ ನದಿಗೆ ನೀರು
ಕಳೆದ ಕೆಲ ದಿನಗಳಿಂದ ಮಲೆನಾಡು ಮತ್ತು ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ನದಿಯ ಒಳ ಹರಿವು ಹೆಚ್ಚುತ್ತಿದ್ದು, ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಈಗಾಗಲೇ 1.981 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಈ ಬ್ಯಾರೇಜ್‌ನ ಸಮತೋಲನ ಕಾಯ್ದುಕೊಂಡು ಎರಡು ಗೇಟುಗಳನ್ನು ತೆಗೆದು ನದಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಿಂಗಟಾಲೂರು ಬ್ಯಾರೇಜ್‌ನಿಂದ ಗೇಟುಗಳ ಮೂಲಕ ನೀರು ಹರಿಬಿಟ್ಟಿರುವುದರಿಂದ ಒಂದೆರಡು ದಿನಗಳಲ್ಲಿ ಜಲಾಶಯಕ್ಕೆ ನೀರು ಹರಿದು ಬರಲಿದೆ ಎಂದು ಗೊತ್ತಾಗಿದೆ.