ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 2
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಸುಕ್ಷೇತ್ರ ತಾಲೂಕಿನ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಬಣ್ಣ ಬಣ್ಣದ ಲೈಟಿಂಗ್‌ಗಳಿಂದ ಗುರುವಾರ ರಾತ್ರಿ ಇಡೀ ಕ್ಷೇತ್ರ ಜಗಮಗಿಸಿದ್ದು ಕಂಡುಬಂತು. 02-01-2026 ಶುಕ್ರವಾರದಂದು ವಿವಿಧ ಮಠಾಧೀಶರ ಹಾಗೂ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ಜಾತ್ರೋತ್ಸವ ವಿಧ್ಯುಕ್ತವಾಗಿ ಚಾಲನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಶಾಸಕ ಹಂಪನಗೌಡ ಬಾದರ್ಲಿ ಭೇಟಿ
ಶಾಸಕ ಹಂಪನಗೌಡ ಬಾದರ್ಲಿ ಅವರು ಗುರುವಾರ ರಾತ್ರಿ ಅಂಬಾಮಠಕ್ಕೆ ಭೇಟಿ ನೀಡಿ, ಜಾತ್ರೋತ್ಸವಕ್ಕೆ ಕೈಗೊಂಡಿರುವ ಕೆಲಸ ಕಾರ್ಯಗಳನ್ನು ವೀಕ್ಷಿಸಿ, ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ ಅನುಕೂಲತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಚುರುಕಿನಿಂದ ಕಾರ್ಯನಿರ್ವಹಿಸುವಂತೆ ತಾಲೂಕು ಆಡಳಿತದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ ದೇಸಾಯಿ, ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ದೇವಸ್ಥಾನ ಸಮಿತಿಯ ರಂಗನಗೌಡ, ಜಿ.ಪಂ.ಮಾಜಿ ಸದಸ್ಯ ಬಸವರಾಜ ಹಿರೇಗೌಡರ್, ಆರ್.ಸಿ.ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.

ಜ.2 ರಂದು ಸಂಜೆ 5 ಗಂಟೆ ಜಾತ್ರೆಗೆ ಚಾಲನೆ
ಅಂಬಾಮಠದಲ್ಲಿ 02-01-2026ರಂದು ಧಾರ್ಮಿಕ ಧ್ವಜಾರೋಹಣ ಹಾಗೂ ಜಾತ್ರಾ ಪ್ರಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಜೆ 5 ಗಂಟೆಗೆ ಜಾಲನೆ ದೊರೆಯಲಿದೆ. ಸಾನ್ನಿಧ್ಯವನ್ನು ಡಾ. ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು ವೀರಾಪುರ ಹಿರೇಮಠ, ನಿಚ್ಚಾಡಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು, ಬೆಂಗಳೂರು, ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಖಾಸಾ ಶಾಖಾಮಠ, ಕರಿಬಸವ ನಗರ ಸಿಂಧನೂರು, ಶ್ರೀ ಮಹಾಂತೇಶ ಶಾಸ್ತ್ರಿಗಳು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು, ಬೆಂಗಳೂರು, ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ, ರೌಡಕುಂದ, ಶ್ರೀ ನಂಜುಂಡಯ್ಯ ಗುರುವಿನ್ ನಂಜುಂಡೇಶ್ವರ ಮಠ, ಸುಕಾಲಪೇಟೆ ಸಿಂಧನೂರು, ಶ್ರೀ ಮಾದಯ್ಯ ಗುರುವಿನ್ ಅಮೋಘ ಸಿದ್ದೇಶ್ವರ ಮಠ, ತುರ್ವಿಹಾಳ, ಶ್ರೀ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ, ವಳಬಳ್ಳಾರಿ, ಶ್ರೀ ಸಿದ್ದರಾಮೇಶ್ವರ ಶರಣರು ಸಿದ್ಧಾಶ್ರಮ, ವೆಂಕಟಗಿರಿಕ್ಯಾಂಪ್, ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಸುವರ್ಣಗಿರಿ ವಿರಕ್ತಮಠ, ಯದ್ದಲದೊಡ್ಡಿ, ಶ್ರೀ ಸಿದ್ದಲಿಂಗ ಶಿವಾಚಾರ್ಯರು ಕಲ್ಮಠ, ಸಿಂಧನೂರು, ಶ್ರೀ ಅಮರಗುಂಡ ಶಿವಾಚಾರ್ಯ ಮಹಾಸ್ವಾಮಿಗಳ ಪುರವರ ಹಿರೇಮಠ, ತುರ್ವಿಹಾಳ, ಶ್ರೀ ಕುಮಾರಸ್ವಾಮಿ ಕಂಬಳಿಮಠ, ಹುಡಾ ಇವರು ವಹಿಸುವರು. ಶಾಸಕ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ರಾಜಶೇಖರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಅತಿಥಿಗಳಾಗಿ ಅಂಬಾದೇವಿ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ರಂಗನಗೌಡ, ಸೋಮಲಾಪುರ ಗ್ರಾ.ಪಂ.ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.


ಜಿಲ್ಲಾಧಿಕಾರಿ ಸುಕ್ಷೇತ್ರ ಭೇಟಿ
ಜಿಲ್ಲಾಧಿಕಾರಿ ನಿತೀಶ್.ಕೆ ಅವರು ಅಂಬಾಮಠ ಸುಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ, ರಥಬೀದಿ, ರಸ್ತೆ, ಮೂಲ ಸೌಕರ್ಯಗಳು ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳನ್ನು ವೀಕ್ಷಿಸಿದರು. ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಬರುವ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜ.3ರಂದು ಅಂಬಾದೇವಿ ರಥೋತ್ಸವಕ್ಕೆ ಸಿಎಂ, ಡಿಸಿಎಂ ಚಾಲನೆ
03-01-2026ರಂದು ಶನಿವಾರ ಶ್ರೀ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಲೋಕಾರ್ಪಣೆಯನ್ನು ನೆರವೇರಿಸಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯ ವೇದಿಕೆ ಸಿದ್ಧಪಡಿಸಲಾಗಿದ್ದು, ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಭರದ ಸಿದ್ಧತೆಗಳು ನಡೆದಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
02-01-2026ರಂದು ಸಂಜೆ 7 ಗಂಟೆಗೆ ಮೌನಮ್ಮ ಮತ್ತು ತಂಡದವರಿಂದ ಭಕ್ತಿಸುಧೆ ಕಾರ್ಯಕ್ರಮ, ಸ್ಥಳೀಯ ಶಾಲಾ-ಕಾಲೇಜು ತಂಡದಿಂದ ಸಾಂಸ್ಕೃತಿಕ ನೃತ್ಯ, ಧಾತ್ರಿ ರಂಗಸಂಸ್ಥೆ ಸಿರಿಗೇರಿ ತಂಡದಿಂದ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.



