Spread the love

(ಜನದನಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 20
ವಯಸ್ಸು 24 ಆದರೆ ಮಾಡಿದ ಸಾಲ 14 ಲಕ್ಷ !, 30ರ ಆಸುಪಾಸಿನ ಯುವಕನೊಬ್ಬನ ಸಾಲ 20 ಲಕ್ಷ !!, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಮಧ್ಯಮ ವರ್ಗದ ಕುಟುಂಬದ ಯುವಕನ ಸಾಲ 5 ಲಕ್ಷ ದಾಟಿದೆ !!! 24ನೇ ವಯಸ್ಸಿಗೆ 14ಲಕ್ಷ ಸಾಲ ಮಾಡಿದ ಯುವಕ ಪ್ಲಾಟೊಂದನ್ನು ರೇಟಿಗೆ ಹಚ್ಚಿದ್ದರೆ, ಇನ್ನೊಬ್ಬ ಯುವಕ ಮನೆಯಲ್ಲಿ ಬೈಸಿಕೊಂಡು ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾನೆೆ, ಮತ್ತೊಬ್ಬ ಯುವಕ ಮಾಡಿದ ಸಾಲ ತೀರಿಸಲಾಗದೇ, ಸಾಲಗಾರರಿಂದ ತಲೆಮರೆಸಿಕೊಳ್ಳಲು ಬೆಂಗಳೂರಿನತ್ತ ಕಾಲ್ಕಿತ್ತಿದ್ದಾನೆ. ಆನ್‌ಲೈನ್ ಬೆಟ್ಟಿಂಗ್‌ನ ಜೇಡರ ಬಲೆಯಲ್ಲಿ ಸಿಲುಕಿದ ಯುವಕರು ‘ವಿಲ ವಿಲ’ಯಾತನೆ ಅನುಭವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದಿನ ದಿನವೂ ತರಹೇವಾರಿ ಸುದ್ದಿಗಳು ತೂರಿ ಬರುತ್ತಿವೆ.
ಯುವಕರಿಗೆ ಆನ್‌ಲೈನ್ ‘ಖೆಡ್ಡಾ’ !
ತಾಲೂಕಿನಲ್ಲಿ 18 ವಯಸ್ಸಿನಿಂದ 40ರ ಆಸುಪಾಸಿನ ವಯಸ್ಸಿನವರು ಹೆಚ್ಚಾಗಿ ಆನ್‌ಲೈನ್ ಬೆಟ್ಟಿಂಗ್‌ನ ಜಾಲಕ್ಕೆ ಬಿದ್ದು ಹೊರಬರಲಾಗದೇ ತೊಳಲಾಡುತ್ತಿದ್ದಾರೆ. ಹಲವು ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳಿವೆ ಎಂದು ಹೇಳಲಾಗುತ್ತಿದ್ದು, ಈ ಆನ್‌ಲೈನ್ ವೆಬ್‌ಸೈಟ್‌ಗಳೊಂದಿಗೆ ತಾಲೂಕಿನ ಕೆಲ ಬುಕ್ಕಿಗಳು ವ್ಯವಹಾರ ಕುದುರಿಸಿಕೊಂಡು ಹಾಡಹಡಗಲೇ ದರೋಡೆಗೆ ಇಳಿದಿದ್ದಾರೆನ್ನುವ ಚರ್ಚೆಗಳು ವ್ಯಾಪಕವಾಗಿವೆ. ಹೀಗಾಗಿ ಈ ಆನ್‌ಲೈನ್ ಬೆಟ್ಟಿಂಗ್ ‘ಹಾಡ ಹಗಲೇ’ ಹೆಚ್ಚಾಗಿ ವಿದ್ಯಾರ್ಥಿಗಳು, ಯುವಕರು ಹಾಗೂ ಮಧ್ಯ ವಯಸ್ಕರನ್ನು ತನ್ನ ಖೆಡ್ಡಾಕ್ಕೆ ಬೀಳಿಸಿಕೊಂಡು ‘ಸಾಲಗಾರ’ರನ್ನಾಗಿ ಮಾಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಕೃಪಾಪೋಷಿತ ಅ‘ವ್ಯವಹಾರ’ ?
ಕಳೆದ ಹಲವು ದಿನಗಳಿಂದ ರಾಜಾರೋಷವಾಗಿ ಆನ್‌ಲೈನ್ ಬೆಟ್ಟಿಂಗ್ ಅವ್ಯವಹಾರ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಐಪಿಎಲ್ ಸೇರಿದಂತೆ ಇನ್ನಿತರೆ ಕ್ರಿಕೆಟ್ ಪಂದ್ಯಾವಳಿಗಳಿದ್ದಾಗ ಅದು ತಾರಕಕ್ಕೇರುತ್ತದೆ. ಈ ಬಗ್ಗೆ ಕೆಲ ಅಧಿಕಾರಿವಲಯದಿಂದಿಡಿದೂ ಬಹುತೇಕರಿಗೆ ಗೊತ್ತಿದೆ ಎಂದು ಹೇಳಲಾಗುತ್ತಿದ್ದು, ಜಾಣ ಕುರುಡುತನ ದಿಂದಾಗಿ ಈ ಜಾಲವನ್ನು ಬೇಧಿಸಲು ಆಗುತ್ತಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತಿವೆ. “ಪ್ರಭಾವಿಗಳ ಆಸುಪಾಸು ಗರಿಗರಿ ಬಿಳಿ ಬಟ್ಟೆ ತೊಟ್ಟ ಪೋಸು ಕೊಡುವವರೇ ಬುಕ್ಕಿಗಳಾದರೆ ? ಯಾರು ಏನ್ಮಾಡ್ತಾರೆ. ಹಿಂಗಾಗಿ ಖುಲ್ಲಂ ಖುಲ್ಲಂ ಆನ್‌ಲೈನ್ ಬೆಟ್ಟಿಂಗ್ ಅವ್ಯವಹಾರ ನಡೆಯುತ್ತಿದೆ. ಯುವಕರೆನ್ನದೇ ಹಲವು ವಯೋಮಾನದವರು ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತಿದ್ದಾರೆ” ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕ್ರಿಕೆಟ್ ಬೆಟ್ಟಿಂಗ್‌ಗೆ ಯುವಕ ಬಲಿ
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಎಂದು ಹೇಳಲಾಗುವ ತಾಲೂಕಿನ ಉದ್ಬಾಳ ಗ್ರಾಮದ ಮುದಿಬಸವ ಎನ್ನುವ ಯುವಕ ನಗರದ ಖಾಸಗಿ ಲಾಡ್ಜೊಂದರಲ್ಲಿ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು ಮೃತಪಟ್ಟಿರುವ ಘಟನೆ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್ನು ನೂರಾರು ಯುವಕರು ಖಾಸಗಿ ಫೈನಾನ್ಸ್, ಲೇವಾದೇವಿದಾರರ ಬಳಿ ಸಾಲ ಕೊಯ್ದರೆ, ಇನ್ನು ಕೆಲವರು ಕುಟುಂಬದವರನ್ನೂ ಯಾಮಾರಿಸಿ ಹಣ ಪಡೆದು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಸೋತು ದಿವಾಳಿಯಾಗಿದ್ದಾರೆ.
ನಗರ, ಊರು ತೊರೆದ ಕೆಲ ಯುವಕರು !
“ಐಪಿಎಲ್ ಬೆಟ್ಟಿಂಗ್‌ನಲ್ಲಿ ಹಣ ಸೋತು, ಸಾಲ-ಸೋಲ ಮಾಡಿಕೊಂಡು ಅದನ್ನು ತೀರಿಸಲಾಗದ ಅನೇಕ ಯುವಕರು ಹಾಗೂ ಮಧ್ಯವಯಸ್ಕರು ನಗರ, ಊರು ತೊರೆದಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಹತ್ತಿಪ್ಪತ್ತು ಸಾವಿರಕ್ಕೆ ಕೆಲಸ ಮಾಡಲು ಹೋಗಿದ್ದಾರೆ. ಅವರಿಗೆ ಇತ್ತ ಮನೆಯವರಿಗೂ ಮುಖ ತೋರಿಸಲು ಆಗುತ್ತಿಲ್ಲ, ಅತ್ತ ಸಾಲ ಕೊಟ್ಟವರ ಕಿರಿಕಿರಿ ತಾಳಲಾಗದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಬೆಟ್ಟಿಂಗ್ ಸಂತ್ರಸ್ತರಾದ ಬಹಳಷ್ಟು ಯುವಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾದವರಂತೆ ಜೀವನ ನಡೆಸುತ್ತಿದ್ದಾರೆ” ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ.
ಬೇಲಿಯೇ ಎದ್ದು ಹೊಲದ ‘ಹುಲ್ಲು ತಿನ್ನುತ್ತಿರುವಾಗ’ !!
ಸಿಂಧನೂರು ತಾಲೂಕಿನಲ್ಲಿ ಐಪಿಎಲ್ ಹೆಸರಿನಲ್ಲಿ ಬೆಟ್ಟಿಂಗ್ ಅವ್ಯವಹಾರ ಗುಡ್ಡದಂತೆ ಬೆಳೆದು ಯುವಕರ ಬದುಕನ್ನು ಹಾಳು ಮಾಡುತ್ತಿರುವ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಿಂದ ಪರಿಣಾಮಕಾರಿ ಕೆಲಸಗಳು ಆಗುತ್ತಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ. ಆನ್‌ಲೈನ್ ಬೆಟ್ಟಿಂಗ್ ಕುರಿತು ಸಾರ್ವಜನಿಕರೊಬ್ಬರು “ಬೇಲಿಯೇ ಎದ್ದು ಹೊಲದ ಹುಲ್ಲು ಮೇಯ್ದರೆ ಯಾರಿಗೆ ದೂರಬೇಕು” ಎಂದು ವಿಶ್ಲೇಷಿಸುತ್ತಾರೆ.

Namma Sindhanuru Click For Breaking & Local News

ವೀರ ಮದಕರಿ ನಾಯಕ ಯುವ ವೇದಿಕೆ ಆಗ್ರಹ
ಈ ಕುರಿತು ಸೋಮವಾರ ಡಿವೈಎಸ್‌ಪಿ, ಸಿಪಿಐ ಹಾಗೂ ಪಿಐ ಅವರಿಗೆ ವೀರ ಮದಕರಿ ನಾಯಕ ಯುವ ವೇದಿಕೆಯ ತಾಲೂಕು ಅಧ್ಯಕ್ಷ ವಿಶ್ವನಾಥ.ಎಚ್.ನಾಯಕ, ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಮಲ್ಲಯ್ಯ ನಾಯಕ ವಕೀಲ, ಜಿಲ್ಲಾ ಉಪಾಧ್ಯಕ್ಷ ಫಕೀರಪ್ಪ ನಾಯಕ ರಾಮತ್ನಾಳ ಅವರು ದೂರು ಸಲ್ಲಿಸಿ, ಸಿಂಧನೂರು ತಾಲೂಕಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಬೆಟ್ಟಿಂಗ್‌ಗಳ ಮೇಲೆ ಬೆಟ್ಟಿಂಗ್ ಆಡಿಸುತ್ತಿರುವ ಬುಕ್ಕಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *