ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 26
ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಜೋಳ ಮಾರಾಟ ಮಾಡಿ ತಿಂಗಳು ಸಮೀಪಿಸಿದರೂ ರೈತರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಮುಂಗಾರು-ಹಿಂಗಾರು ಜೋಳ ಖರೀದಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿ ತಾಲೂಕಿನ ರೈತರು ತಿಂಗಳಾನುಗಟ್ಟಲೇ ಜೋಳವನ್ನು ಮನೆಯಲ್ಲಿಟ್ಟುಕೊಳ್ಳುವಂತಾಗಿತ್ತು. ರೈತರ ಹೋರಾಟದ ಫಲವಾಗಿ ಕಳೆದ ತಿಂಗಳು ಜೂನ್ 30 ಕೊನೆಯ ದಿನ ನಿಗದಿಗೊಳಿಸಿ ಹೈಬ್ರಿಡ್ ಜೋಳ ಖರೀದಿಸಲಾಗಿತ್ತು.
ಗೊಂದಲಗಳ ನಡುವೆ ಖರೀದಿ ಪ್ರಕ್ರಿಯೆ
ತಾಲೂಕು ವ್ಯಾಪ್ತಿಯ ಪತ್ತಿನ ಸಹಕಾರಿ ಸಂಘಗಳಲ್ಲಿ ತೆರೆದ ಖರೀದಿ ಕೇಂದ್ರಗಳ ಮೂಲಕ, ರೈತರು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತಕ್ಕೆ ರೈತರು ಬೆಂಬಲ ಬೆಲೆ ಯೋಜನೆಯಡಿ ಹೈಬ್ರಿಡ್ ಜೋಳವನ್ನು ಮಾರಾಟ ಮಾಡಿದ್ದರು. ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ, ಏಕಾಏಕಿ ಖರೀದಿ ಕೇಂದ್ರ ಬಂದ್, ತಾಂತ್ರಿಕ ಸಮಸ್ಯೆ ಹೀಗೆ ಹತ್ತು ಹಲವು ಕಿರಿಕಿರಿಯನ್ನು ರೈತರು ಈ ವೇಳೆ ಅನುಭವಿಸಿದ್ದನ್ನು ಸ್ಮರಿಸಬಹುದು.
ಮುಂಗಾರು-ಹಿಂಗಾರು ಹಣ ಜಮಾ ಆಗಿಲ್ಲ !
“ಮುಂಗಾರಿನಲ್ಲಿ ಖರೀದಿ ಕೇಂದ್ರಕ್ಕೆ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಮಾರಾಟ ಮಾಡಿದ್ದು, ಅಲ್ಲೊಬ್ಬರು-ಇಲ್ಲೊಬ್ಬರು ರೈತರಿಗೆ ಮಾತ್ರ ಹಣ ಜಮಾ ಆಗಿದೆ. ಉಳಿದಂತೆ ಎಲ್ಲರಿಗೂ ಆಗಿಲ್ಲ. ಇನ್ನೂ ಹಿಂಗಾರು ಜೋಳ ಮಾರಾಟ ಮಾಡಿ ತಿಂಗಳು ಸಮೀಪಿಸಿದರೂ ನಮ್ಮ ಖಾತೆಗೆ ಹಣ ಜಮೆ ಆಗಿಲ್ಲ” ಎಂದು ದಿದ್ದಿಗಿ ಗ್ರಾಮದ ರೈತರೊಬ್ಬರು ಹೇಳುತ್ತಾರೆ.
ಆಗಸ್ಟ್ 12ರ ನಂತರ ಜಮಾ ಆಗಬಹುದು ?
“ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಜೋಳ ಮಾರಾಟ ಮಾಡಿದವರಿಗೆ ಯಾವಾಗ ಹಣ ಹಾಕುತ್ತಾರೆ ಎಂದು ಪ್ರಾಥಮಿಕ ಪತ್ತಿನ ಸಹಕಾರಿ ನಿಯಮಿತದ ಸಿಬ್ಬಂದಿಯವರನ್ನು ಕೇಳಿದರೆ, ಮುಂಗಾರಿನಲ್ಲಿ ಜೋಳ ಮಾರಾಟ ಮಾಡಿದ ಬೆರಳೆಣಿಕೆಯವರ ಖಾತೆಗೆ ಹಣ ಜಮಾ ಆಗಿದೆ. ಇನ್ನೂ ಬಹಳಷ್ಟು ರೈತರಿಗೆ ಆಗಬೇಕು. ಹಿಂಗಾರಿನಲ್ಲಿ ಮಾರಾಟ ಮಾಡಿದವರಿಗೆ ಇನ್ನೂ ಒಬ್ಬರಿಗೂ ಹಣ ಜಮಾ ಆಗಿಲ್ಲ. ಮೇಲಧಿಕಾರಿಗಳನ್ನು ಈ ಬಗ್ಗೆ ಸಂಪರ್ಕಿಸಿದರೆ ಆಗಸ್ಟ್ 12ರ ನಂತರ ಜಮಾ ಆಗಬಹುದು ಎಂದು ಹೇಳುತ್ತಾರೆ. ಇನ್ನೂ ಸ್ಪಷ್ಟತೆ ಇಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ” ಎಂದು ರೈತರೊಬ್ಬರು ತಿಳಿಸಿದ್ದಾರೆ.
ಜೂನ್ 2ರ ಸಿಂಧನೂರು ಬಂದ್ ಬಿಸಿ
ಸರ್ಕಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬ ಮಾಡಿದ್ದನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ, ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಖರೀದಿಸಬೇಕು, ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಸಿಂಧನೂರು ಬಂದ್ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಎಕರೆ 15 ಕ್ವಿಂಟಲ್ನಂತೆ ಗರಿಷ್ಠ 150 ಕ್ವಿಂಟಲ್ ಜೋಳ ಖರೀದಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಏಜೆನ್ಸಿಯ ಮೂಲಕ ರೈತರ ಜೋಳವನ್ನು ಖರೀದಿಸಲಾಗಿತ್ತು.
‘ಆದಷ್ಟು ಬೇಗ ರೈತರ ಖಾತೆಗೆ ಹಣ ಜಮಾ ಆಗಲಿ’
“ಖರೀದಿ ಕೇಂದ್ರ ತೆರೆಯಲು ವಿಳಂಬ ಮಾಡಿದಂತೆ ರೈತರ ಖಾತೆಗೆ ಹಣ ಜಮಾ ಮಾಡುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷö್ಯ ಧೋರಣೆ ತಾಳಬಾರದು. ಜೋಳ ಬೆಳೆದು ಮಾರಾಟ ಮಾಡಿ, ಹಣ ಕೈಗೆ ಬರುವಷ್ಟರಲ್ಲಿ ವರ್ಷ ಕಳೆದು ಹೋಗಿದೆ. ಹೀಗಾದರೆ ರೈತರು ಕುಟುಂಬ ನಿರ್ವಹಣೆ ಹೇಗೆ ಮಾಡಬೇಕು. ಇದರಿಂದ ಇನ್ನಷ್ಟು ಸಾಲಕ್ಕೆ ಗುರಿಯಾಗಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರ ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು” ಎಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಆಗ್ರಹಿಸಿದ್ದಾರೆ.