ನಮ್ಮ ಸಿಂಧನೂರು, ಡಿಸೆಂಬರ್ 04
ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ, ಮಹಿಳೆಯರ ಸರಣಿ ಸಾವಿನ ಪ್ರಕರಣಗಳ ಕುರಿತಂತೆ ಕಠಿಣ ಕ್ರಮಕ್ಕೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಡಿ.3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಉಪವಾಸ ನಿರತ ಇಬ್ಬರು ಪದಾಧಿಕಾರಿಗಳ ಸ್ಥಿತಿ ಗಂಭೀರವಾಗಿದ್ದರೂ ಇತ್ತ ಸಂಬಂಧಿಸಿದ ಅಧಿಕಾರಿಗಳಾಗಲಿ, ಶಾಸಕರಾಗಲಿ ಬಂದಿಲ್ಲ ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
“ನಮ್ಮ ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಘಟಕದ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಅವರು ದಿನಾಂಕ: 3-12-2024ರಿಂದ ಉಪವಾಸ ನಿರತರಾಗಿದ್ದು, ರಾತ್ರಿ ವೇಳೆ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಬಂದು ಆರೋಗ್ಯ ತಪಾಸಣೆ ನಡೆಸಿ ಹೋಗಿದ್ದು ಬಿಟ್ಟರೆ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಬಂದಿಲ್ಲ” ತಿಳಿಸಿದ್ದಾರೆ.
“ಸಂಘಟನೆಯ ಮುಖಂಡರಿಗೆ ಏನಾದರೂ ಆಪತ್ತು ಉಂಟಾದರೆ ಅದಕ್ಕೆ ತಾಲೂಕು, ಜಿಲ್ಲಾಡಳಿತವೇ ಹೊಣೆ”
“ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಮ್ಮ ಸಂಘಟನೆಯಿಂದ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಧರಣಿ ಸ್ಥಳಕ್ಕೆ ಸೌಜನ್ಯಕ್ಕಾದರೂ ಶಾಸಕ ಹಂಪನಗೌಡ ಬಾದರ್ಲಿ ಅವರು ಬಂದು ಅಹವಾಲು ಆಲಿಸಿಲ್ಲ. ಇನ್ನು ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಸಂಪೂರ್ಣ ನಿರ್ಲಕ್ಷö್ಯವಹಿಸಿದ್ದಾರೆ. ಉಪವಾಸ ನಮ್ಮ ಸಂಘಟನೆಯ ಮುಖಂಡರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಒಂದು ವೇಳೆ ಅವರಿಗೆ ಏನಾದರೂ ಸಮಸ್ಯೆಯಾದರೆ ತಾಲೂಕು, ಜಿಲ್ಲಾಡಳಿತ ಹಾಗೂ ಶಾಸಕರೇ ನೇರ ಹೊಣೆಗಾರರಾಗಿದ್ದಾರೆ” ಧರಣಿ ನಿರತ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ