ಸಿಂಧನೂರು, ಅಕ್ಟೋಬರ್ 07
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿ ಕಲಾವಿದ ದೇವೇಂದ್ರ ಹುಡಾ ಅವರ ಕೈಚಳಕದಲ್ಲಿ ಅರಳಿದ ‘ಎತ್ತಿನ ಬಂಡಿ’ ಮಾದರಿ ವೈದ್ಯರನ್ನೂ ಮೋಡಿ ಮಾಡಿದೆ. ನಗರದ ಖ್ಯಾತ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಬಿ.ಎನ್.ಪಾಟೀಲ್, ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್ ಅವರು ಎತ್ತಿನ ಬಂಡಿ ಮಾದರಿಯೊಂದಿಗೆ ಫೋಟೋ ತೆಗೆಸಿಕೊಳ್ಳುವ ಮೂಲಕ ಗ್ರಾಮೀಣ ಬದುಕಿನ ಬಗೆಗೆ ಸಂತಸ ಹಂಚಿಕೊಂಡಿದ್ದು ಕಂಡುಬಂತು.
ಸ್ಮಾರಕದಂತಾದ ಎತ್ತಿನ ಗಾಡಿ
ಗಾಂಧಿ ಸರ್ಕಲ್ ಮೂಲಕ ಹಾದು ಹೋಗುವ ಯಾರೇ ಆಗಲಿ ಎತ್ತಿನ ಬಂಡಿಯ ಮೋಡಿಗೆ ಒಳಗಾಗದವರಿಲ್ಲ. ಸರ್ಕಲ್‌ನಲ್ಲಿ ಸ್ಮಾರಕದಂತೆ ಕಂಗೊಳಿಸುತ್ತಿರುವ ‘ಬಾರುಕೋಲು ಬೀಸಿ ಬಂಡಿ ಓಡಿಸುತ್ತಿರುವ ರೈತ’ನನ್ನು ಕಣ್ತುಂಬಿಕೊಳ್ಳುವ ಜೊತೆಗೆ ಹಳ್ಳಿಗಾಡಿನ ಜನರು ಗ್ರಾಮ್ಯ ಬದುಕಿನ ಹಿನ್ನೋಟಕ್ಕಿಳಿಯುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ದಸರಾ ಉತ್ಸವ ಸಮಿತಿ ವತಿಯಿಂದ ಸಿಂಧನೂರು ರೈತ ದಸರಾ ಉತ್ಸವ 2024 ಅಂಗವಾಗಿ ‘ನಮ್ಮ ನಡಿಗೆ ಸಿರಿಧಾನ್ಯ ಮತ್ತು ಸಾವಯವ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸಿರಿಧಾನ್ಯ ರೋಡ್‌ಶೋನಲ್ಲಿ ಭಾಗವಹಿಸಿದ ಹಲವು ಪ್ರಮುಖರು ಎತ್ತಿನ ಬಂಡಿ ಮಾದರಿಯೊಂದಿಗೆ ಫೋಟೋ ತೆಗೆಸಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.