ಸಿಂಧನೂರು: ‘ಕರ್ನಾಟಕದಲ್ಲಿ ಬಿಜೆಪಿ ಹೋಗಿ ಜೆಡಿಎಸ್ ಆಗಿದೆ’ : ಸಚಿವ ಶಿವರಾಜ್ ತಂಗಡಗಿ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08

ರಾಜ್ಯದಲ್ಲಿ ಬಿಜೆಪಿ ಅನ್ನೋದು ಹೋಗಿದೆ. ಬಿಜೆಪಿ ಹೋಗಿ ಈಗ ಜೆಡಿಎಸ್ ಆಗಿದೆ. ಕುಮಾರಸ್ವಾಮಿ ಅವರು ತಾವು ಹೇಳಿದ್ದೇ ವೇದವಾಕ್ಯ ಅನ್ನುತ್ತಿದ್ದಾರೆ. ಇದ ಅವರ ದೊಡ್ಡ ತಪ್ಪು. ಮುಡಾ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆ ಸುತ್ತುವ ಕೆಲಸ ನಡೆಯುತ್ತಿದೆ. ಈ ಪ್ರಕರಣವನ್ನು ಈಗಾಗಲೇ ತನಿಖೆಗೆ ಒಪ್ಪಿಸಲಾಗಿದೆ. ತನಿಖೆ ಆಗಲಿ ಎಲ್ಲ ಗೊತ್ತಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ.ಎಸ್.ತಂಗಡಗಿ ವ್ಯಂಗ್ಯವಾಡಿದರು.
ಸಿಂಧನೂರು ದಸರಾ ಮಹೋತ್ಸವದ ನಿಮಿತ್ತ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ರೈತ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. “ ಪ್ರಧಾನಿ ಮೋದಿಯವರಿಗೆ, ಅಮಿತ್ ಶಾ ಅವರಿಗೆ ಕರ್ನಾಟಕ ರಾಜ್ಯ ಕಂಡರೆ ಸಿಟ್ಟು ಜಾಸ್ತಿ. ರಾಜ್ಯದ ಪಾಲಿನ ಜಿಎಸ್‌ಟಿ ಕೊಡುತ್ತಿಲ್ಲ. ಬರ ಬಂದಾಗ ಪರಿಹಾರ ಕೊಡಲಿಲ್ಲ. 35ರಿಂದ 36 ಬಾರಿ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಿ ಹೋದ್ರೂ ಬಿಜೆಪಿಗೆ ಯಾವುದೇ ಲಾಭ ಆಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರವನ್ನು ತೆಗೆಯಬೇಕೆಂಬ ನಿಟ್ಟಿನಲ್ಲಿ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಲಾಗುತ್ತಿದೆ. ರಾಜ್ಯಪಾಲರ ಕಚೇರಿ ಬಿಜೆಪಿ ಕೇಂದ್ರ ಕಚೇರಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜನ ಎಷ್ಟು ದಿನ ಸುಳ್ಳು ಕೇಳ್ತಾರೆ’
“ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ಎರಡು ಕಡೆ ನಾವು ಮುಂದೆ ಇದ್ದೇವೆ. ಇಷ್ಟು ದಿನ ಬಿಜೆಪಿಯ ಹಾಗೂ ನರೇಂದ್ರ ಮೋದಿಯವರ ಹವಾ ಇತ್ತು. ಎಷ್ಟು ದಿನಾಂತ ಈ ದೇಶದ ಜನರು ಸುಳ್ಳು ಕೇಳ್ತಾರೆ. ಸುಳ್ಳುಗಳು ಜನರಿಗೆ ಗೊತ್ತಾಗಿವೆ. ಈಗಾಗಿ ಮುಂದಿನ ದಿನಮಾನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಶಕ್ತಿ ಬರುವ ಕೆಲಸವಾಗುತ್ತದೆ” ಎಂದು ತಂಗಡಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಜಾತಿ ಗಣತಿಯಲ್ಲ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿ’
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಜಾತಿ ಗಣತಿ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲ. ಜಾತಿ ಜನಗಣತಿ ಏನಾದ್ರೂ ಇದ್ರೆ ಅದು ಕೇಂದ್ರ ಸರ್ಕಾರ ಮಾಡ್ತಿರೋದು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಯಾರೂ ನೋಡಿಲ್ಲ. ರಾಜ್ಯದಲ್ಲಿ ಯಾವ್ಯಾವ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಹೇಗಿದೆ ಎಂದು ನೋಡಲು ಕಾಂತರಾಜ್ ವರದಿಯನ್ನು ಮಾಡಲಾಗಿತ್ತು. ಆ ವರದಿ ಸ್ವೀಕಾರ ಆಗಲಿಲ್ಲ. ಅದರಲ್ಲಿ ಕೆಲ ನ್ಯೂನ್ಯತೆಗಳಿದ್ದವು. ನಂತರ ಜಯಪ್ರಕಾಶ ಹೆಗಡೆ ಅವರಿಗೆ ಕೊಡಲಾಯಿತು. ಅವರು ಅದರ ಕೆಲವು ನ್ಯೂನ್ಯತೆಗಳನ್ನು ಸರಿಮಾಡಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದನ್ನು ನೋಡಲಾರದ ಹಾಗೆ ಇಟ್ಟಿದ್ದೀವಿ. ಆ ವರದಿಯನ್ನು ಮೊದಲು ಕ್ಯಾಬಿನೆಟ್‌ಗೆ ತಂದು ಚರ್ಚೆ ಮಾಡ್ತೀವಿ. ಅದರ ಅಂಕಿ-ಅAಶಗಳು ಗೊತ್ತಾಗಲಿ. ಅದಕ್ಕಿಂತಲೂ ಮುಂಚೆಯೇ ನಾನು ವಿರೋಧ, ನೀನು ವಿರೋಧ ಎಂಬುವುದರಲ್ಲಿ ಅರ್ಥವೇನಿದೆ ?. ಸಿಎಂ ಸಿದ್ದರಾಮಯ್ಯ ಅವರು 18 ತಾರೀಖಿಗೆ ಕ್ಯಾಬಿನೆಟ್‌ಗೆ ತರುವುದಾಗಿ ಹೇಳಿದ್ದಾರೆಯೇ ಹೊರತು, ಜಾರಿಗೆ ತರುವುದಾಗಿ ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು
‘ಹೈಕಮಾಂಡ್ ನಾಯಕರ ಭೇಟಿಯಲ್ಲಿ ವಿಶೇಷತೆ ಏನಿಲ್ಲ ’
“ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರನ್ನು ರಾಜ್ಯ ಸಚಿವರು, ಮುಖಂಡರು ಭೇಟಿಯಾಗುವುದರಲ್ಲಿ ವಿಶೇಷತೆಯೇನಿಲ್ಲ. ನಮ್ಮ ಪಕ್ಷದ ಹೈಕಮಾಂಡ್‌ನವರನ್ನು ಭೇಟಿಯಾಗದೇ ಬಿಜೆಪಿಯ ಹೈಕಮಾಂಡ್‌ನವರನ್ನು ಭೇಟಿಯಾಗಬೇಕೆ ? ಬಿಜೆಪಿಯವರು ಕನಸು ಕಾಣುವ ಕೆಲಸ ಮಾಡುತ್ತಿದ್ದಾರೆ. ದಸರಾ ನಂತರ ಸಿಎಂ ಬದಲಾಗುತ್ತಾರೆಂದು ಬಿಜೆಪಿಯವರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ಜಾರಕಿಹೊಳಿಯವರು ಖರ್ಗೆಯವರನ್ನು ಭೇಟಿಯಾಗಿದ್ದರಲ್ಲಿ ವಿಶೇಷತೆ ಏನಿಲ್ಲ” ಎಂದು ಮಾಧ್ಯಮದವರ ಪ್ರಶ್ನೆಗೆ ಬಿಜೆಪಿಯವರ ಮೇಲೆ ವಾಗ್ದಾಳಿ ನಡೆಸಿದರು.
‘ಬಿಜೆಪಿ ಮುಖಂಡರ ಮೇಲೆ ಇಡಿ ಕೇಸ್ ಯಾಕ್ ಮಾಡ್ತಾ ಇಲ್ಲ’
“1000 ಕೋಟಿಗೆ ಸರ್ಕಾರ ಬೀಳುತ್ತದೆ, ಸರ್ಕಾರ ಕೆಡವಾಕ ಸಾವಿರ ಕೋಟಿ ರೆಡಿ ಇಟ್ಟಿದ್ದೀವಿ” ಎಂದು ಬಿಜೆಪಿಯ ಮುಖಂಡ ಯತ್ನಾಳ್ ಅವರು ಹೇಳಿಕೆ ನೀಡಿದ್ದು, ಯಾರು ಹಣ ರೆಡಿ ಇಟ್ಟಿದ್ದಾರೆ ? ಯಾರ ಬಳಿ 1000 ಕೋಟಿ ಇದೆ. ವಿಜಯೇಂದ್ರ, ಬೊಮ್ಮಾಯಿಯವರ ಹತ್ರ ಸಾವಿರ ಕೋಟಿ ಇದೆಯೇ ? ಇಡಿ ಏಕೆ ಯತ್ನಾಳ್ ಅವರ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿಲ್ಲ. ಕೇಸು ದಾಖಲಿಸಲು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಮುಖ್ಯಮಂತ್ರಿಯವರು ಪತ್ನಿಯವರಿಗೆ ಸೇರಿದ ನಿವೇಶನಗಳ ಬೆಲೆ 62 ಕೋಟಿ ಮೌಲ್ಯದ್ದು ಎಂದು ಇಡಿ ಕೇಸಾಗುತ್ತದೆ. ಹಾಗಾದರೆ ಸಾವಿರ ಕೋಟಿ ಯಾಕೆ ಇಡಿ ಕೇಸು ಮಾಡುತ್ತಿಲ್ಲ” ಎಂದು ಬಿಜೆಪಿ ವಿರುದ್ಧ ತಂಗಡಗಿ ಹರಿಹಾಯ್ದರು.
‘ಎಫ್‌ಐಆರ್ ಆದೋರು ರಾಜೀನಾಮೆ ಕೊಡಬೇಕು ಅನ್ನೋದಾದ್ರೆ ಬಿಜೆಪಿಯಲ್ಲಿ ಎಂಟತ್ತು ಜನ ಉಳಿತಾರೆ”
“ಎಫ್‌ಐಆರ್ ಆದೋರು ರಾಜೀನಾಮೆ ಕೊಡಬೇಕು ಅನ್ನೋದಾದ್ರೆ, ಬಿಜೆಪಿಯಲ್ಲಿ ಎಂಟತ್ತು ಜನರಷ್ಟೇ ಉಳಿತಾರೆ. ಬಾಕಿಯವರು ರಾಜೀನಾಮೆ ಕೊಡಬೇಕಾಗುತ್ತದೆ. ಬಿಜೆಪಿಯ ಬಹುತೇಕರ ಮೇಲೆ ಎಫ್‌ಐಆರ್‌ಗಳಿವೆ. ಕುಮಾರಸ್ವಾಮಿಯವರ ಮೇಲೆ 2 ಎಫ್‌ಐಆರ್‌ಗಳು ಆಗಿವೆ. ಜೋಶಿಯವರು ಮೊದಲು ತಮ್ಮ ಸಂಪುಟ ಸಹೋದ್ಯೋಗಿಯಾದ ಕುಮಾರಸ್ವಾಮಿಯವರ ರಾಜೀನಾಮೆ ಕೇಳಬೇಕು” ಎಂದು ಸಚಿವ ಶಿವರಾಜ ತಂಗಡಗಿ ಖಾರವಾಗಿ ಪ್ರತಿಕ್ರಿಯಿಸಿದರು.


Spread the love

Leave a Reply

Your email address will not be published. Required fields are marked *