(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 2
ಬಿಸಿಲ ಝಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ನಗರದ ಹಲವು ಮಕ್ಕಳ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಹೊರ ಮತ್ತು ಒಳರೋಗಿಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಾಂತಿ, ಭೇದಿ, ಜ್ವರ, ಮೈಮೇಲೆ ಗುಳ್ಳೆಗಳು ಏಳುವುದು, ಬೆವರುಸಾಲೆ, ನಿರ್ಜಲೀಕರಣ ಸೇರಿದಂತೆ ಇನ್ನಿತರೆ ಅನಾರೋಗ್ಯ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬರುತ್ತಿದ್ದು, ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಪೋಷಕರು ಅಲೆದಾಡುತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ನಗರದ ಮಕ್ಕಳ ಖಾಸಗಿ ಆಸ್ಪತ್ರೆಯೊಂದರಲ್ಲಿ 90ಕ್ಕೂ ಹೆಚ್ಚು ಹೊರ ರೋಗಿಗಳು ಚೀಟಿ ಮಾಡಿಸಿದ್ದು ಕಂಡುಬಂತು. ಜೊತೆಗೆ ಖಾಸಗಿ ಚರ್ಮರೋಗ ತಜ್ಞರ ಆಸ್ಪತ್ರೆಯಲ್ಲಿ 84 ಹೊರ ರೋಗಿಗಳು ಚಿಕಿತ್ಸೆಗೆ ಚೀಟಿ ಮಾಡಿಸಿದ್ದರು. ಅದರಲ್ಲಿ ಶೇ.20ಕ್ಕೂ ಹೆಚ್ಚು ಮಕ್ಕಳು ಇದ್ದದ್ದು ಗೊತ್ತಾಯಿತು. ನಗರದ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ಮುಂದೆ ಬೆಳಿಗ್ಗೆ 6 ಗಂಟೆಗೂ ಮುನ್ನವೇ ಕೆಲವರು ಮಕ್ಕಳ ಚಿಕಿತ್ಸೆಗಾಗಿ ಚೀಟಿ ಮಾಡಿಸಲು ಸರದಿ ಸಾಲಲ್ಲಿ ನಿಲ್ಲಲು ತಯಾರಿ ನಡೆಸುತ್ತಿರುವುದು ಸಾಮಾನ್ಯವಾಗಿದೆ. ದಿನವೂ ಈ ಆಸ್ಪತ್ರೆಗೆ 200ಕ್ಕೂ ಹೆಚ್ಚು ಹೊರ ರೋಗಿಗಳು ಭೇಟಿ ನೀಡುತ್ತಿದ್ದು, ಒಳರೋಗಿಗಳ ಸಂಖ್ಯೆಯೂ ಗಣನೀಯವಾಗಿದೆ ಎಂದು ತಿಳಿದುಬಂದಿದೆ. ಈ ಬಾರಿಯ ಬಿಸಿಲ ಬೇಗೆ ಮಕ್ಕಳ ಮೇಲೆ ಕೆಂಗಣ್ಣು ಬೀರಿದೆ. ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿದೆ.
ಜ್ವರ, ವಾಂತಿ, ಭೇದಿ, ನಿರ್ಜಲೀಕರಣ ಸಮಸ್ಯೆ ಸೇರಿದಂತೆ ಇನ್ನಿತರೆ ಅನಾರೋಗ್ಯದಿಂದಾಗಿ ಚಿಕ್ಕಮಕ್ಕಳು ಸಮಸ್ಯೆಗೊಳಗಾಗುತ್ತಿದ್ದಾರೆ.“ಮಗುವಿಗೆ ಮೇಲಿಂದ ಮೇಲೆ ಭೇದಿಯಾಗಿದೆ, ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದು, ಇಂದಿಗೆ ಮೂರು ದಿನ ಆಯ್ತು. ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ. ವೈದ್ಯರ ಸಲಹೆ ಪಡೆದು, ಅವರು ಡಿಸ್ಚಾರ್ಜ್ ಮಾಡಿದರೆ ಮನೆಗೆ ಹೋಗಬೇಕು” ಎಂದು ಮಗುವಿನ ಪಾಲಕರೊಬ್ಬರು ತಿಳಿಸಿದರು.
ಬಿಸಿಗಾಳಿ, ಸೆಖೆ ತಂದ ತಳಮಳ
ವಿಪರೀತ ಬಿಸಿಲು, ಬಿಸಿಗಾಳಿ, ಸೆಖೆ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನವಜಾತ ಶಿಶುಗಳು, ವರ್ಷ, ವರ್ಷದ ಒಳಗಿನ ಮಕ್ಕಳನ್ನು ಪೋಷಣೆ ಮಾಡುವುದು ಪಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಕುದಿಯಿಂದಾಗಿ ಮಕ್ಕಳು ಪದೇ ಪದೆ ಅಳುವುದು, ಚೀರುವುದು, ನಿದ್ರೆಯಿಲ್ಲದೇ ಪರಿತಪಿಸುತ್ತಿದ್ದು, ಸಂತೈಸುವುದರೊಳಗೆ ತಾಯಂದಿರುವ ಹಾಗೂ ಪಾಲಕರಲು ಹೈರಾಣಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.
ಎಲೆಕ್ಷನ್ ಕೆಲಸ, ಸಾರ್ವಜನಿಕರ ಪರದಾಟ !
ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು, ಜಿಲ್ಲಾಡಳಿತದ ಅಧಿಕಾರಿಗಳು ಅದರಲ್ಲೇ ಬ್ಯುಸಿಯಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ತಾಪಮಾನದ ಬಗ್ಗೆ ಕೇಂದ್ರ ಮತ್ತು ರಾಜ್ಯದ ಹವಾಮಾನ ಇಲಾಖೆಗಳು ಮಾಹಿತಿ, ಮುನ್ಸೂಚನೆ ನೀಡುತ್ತಿವೆಯೇ ಹೊರತು, ಜನಸಾಮಾನ್ಯರಿಗೆ ಅನುಕೂಲತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸಗಳು ಆಗುತ್ತಿಲ್ಲ. ಬಹುತೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿದ್ದು, ಅಶುದ್ಧ ನೀರು ಕುಡಿಯುವುದು ಸೇರಿದಂತೆ ನಾನಾ ಕಾರಣಕ್ಕಾಗಿ ಮಕ್ಕಳು ಸೇರಿದಂತೆ ಸಾರ್ವಜನಿಕರಲ್ಲಿ ಆನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಚುನಾವಣೆಯ ಜೊತೆಗೆ ಜನಸಾಮಾನ್ಯರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.