ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 22
ಬೆಂಗಳೂರಿನಲ್ಲಿ ಮಾರ್ಚ್ 21ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ)ಯಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಂತ ಬೆಳೆಗಳಿಗೆ ಹಾನಿಯಾಗದಂತೆ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಂಗಭದ್ರಾ ಡ್ಯಾಂ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಣಯಿಸಲಾಯಿತು. “ತುಂಗಭದ್ರಾ ಡ್ಯಾಂನಲ್ಲಿ ಸದ್ಯ 18 ಟಿಎಂಸಿ ಅಡಿ ನೀರಿದ್ದು, ಇದರಲ್ಲಿ 2 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಇರುತ್ತದೆ. ಉಳಿದಂತೆ ಬಿಸಿಲಿನಿಂದಾಗಿ 1.2 ಟಿಎಂಸಿ ಅಡಿ ನೀರು ಆವಿಯಾಗುವಿಕೆ, ರಾಜ್ಯದ ಪಾಲು 11 ಟಿಎಂಸಿ ಅಡಿ ಹಾಗೂ ಆಂಧ್ರದ ಪಾಲು 4 ಟಿಎಂಸಿ ಅಡಿಯಿದ್ದು, ಡ್ಯಾಂನಲ್ಲಿನ ನೀರಿನ ಲಭ್ಯತೆ ಆಧರಿಸಿ 4 ಜಿಲ್ಲೆಗಳಿಗೆ ಕುಡಿಯಲು ಹಾಗೂ ಬೆಳೆ ರಕ್ಷಣೆಗೆ ನೀರು ಹಂಚಿಕೆ ಮಾಡಲಾಗಿದೆ” ಎಂದು ಮಾಧ್ಯಮದವರಿಗೆ ಅಧ್ಯಕ್ಷ ಶಿವರಾಜ ತಂಗಡಗಿಯವರು ವಿವರಿಸಿದರು.
ಎಡದಂಡೆ ಮುಖ್ಯ ಕಾಲುವೆಗೆ ಏ.10ರವರೆಗೆ ದಿನವೂ 3000 ಕ್ಯೂಸೆಕ್ ನೀರು
ತುಂಗಭದ್ರಾ ಡ್ಯಾಂನಿಂದ ಎಡದಂಡೆ ಮುಖ್ಯಕಾಲುವೆಗೆ ಏಪ್ರಿಲ್ 1ರಿಂದ 10ನೇ ತಾರೀಖಿನವರೆಗೆ ನಿಂತ ಬೆಳೆಗಳ ಸಂರಕ್ಷಣೆ ಮತ್ತು ಕುಡಿಯುವ ನೀರಿಗಾಗಿ ಪ್ರತಿದಿನವೂ 3,000 ಕ್ಯುಸೆಕ್, ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್ 11ರಿಂದ ಮೇ 10ರ ವರೆಗೆ 150 ಕ್ಯುಸೆಕ್, ವಿತರಣಾ ಕಾಲುವೆ 1ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದ್ದಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ಬಲದಂಡೆ ಕಾಲುವೆ
ಡ್ಯಾಂನಿಂದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಲಭ್ಯವಾಗುವ ನೀರಿನಲ್ಲಿ ಏ. 1ರಿಂದ 10ರ ವರೆಗೆ ನಿಂತ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ 450 ಕ್ಯುಸೆಕ್, ರಾಯ-ಬಸವಣ್ಣ ಕಾಲುವೆಗೆ ಏ.1ರಿಂದ ಮೇ 31ರವರೆಗೆ ಲಭ್ಯವಾಗುವ ನೀರಿನಲ್ಲಿ 200 ಕ್ಯುಸೆಕ್ ನೀರು ಹರಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ಐಸಿಸಿ ಸಭೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ಬಿ.ನಾಗೇಂದ್ರ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ, , ಕಂಪ್ಲಿ ಶಾಸಕ ಗಣೇಶ್, ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ., ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.