Spread the love

(ಜನದನಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 14

ನಗರದ 31 ವಾರ್ಡ್‌ಗಳ ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿವ ನೀರು ಪೂರೈಕೆಯ ಕೇಂದ್ರಬಿಂದುವಾಗಿರುವ ಕೆರೆಯ ಶುದ್ಧೀಕರಣ ಘಟಕಗಳ ಬಗ್ಗೆ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆಯೇ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ನೀರು ಪೂರೈಕೆ ಮುನ್ನ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮ, ಗುಣಮಟ್ಟ, ನೀರಿನ ಪರೀಕ್ಷೆ ಸೇರಿದಂತೆ ಇನ್ನಿತರ ಕಾರ್ಯಗಳ ಬಗ್ಗೆ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡಿವೆ.
ನಗರ ನಿವಾಸಿಗಳ ಬಳಕೆ ಮತ್ತು ಕುಡಿವ ನೀರಿನ ಅಗತ್ಯತೆ ಪ್ರಮಾಣ ಹೆಚ್ಚಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ನೀರಿನ ಘಟಕಗಳ ಆಧುನೀಕರಣ, ಯಂತ್ರೋಪಕರಣಗಳ ಅಳವಡಿಕೆ, ಹೊಸ ಯೋಜನೆಗಳ ಕಾರ್ಯಾನುಷ್ಠಾನ ನಡೆಯುತ್ತಿಲ್ಲ. ಇರುವ ಯೋಜನೆಯ ನಿರ್ವಹಣೆಯೂ ಹಳಿ ತಪ್ಪಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ 31 ವಾರ್ಡ್‌ ಗಳಿಗೆ ನೀರು ಪೂರೈಕೆ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ನಗರಿಯ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಬೇಕಾದ ಹೊಣೆ ಹೊತ್ತಿರುವ ನಗರಸಭೆ ದಿನದಿಂದ ದಿನಕ್ಕೆ ಕೈಚೆಲ್ಲುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿವೆ. ಈಗ 8 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅದು ವಿಕೋಪಕ್ಕೆ ಹೋದರೆ 10 ದಿನ ಇಲ್ಲವೇ 15 ದಿನಕ್ಕೊಮ್ಮೆ ನೀರು ಪೂರೈಕೆಯಾದರೂ ಅಚ್ಚರಿಯೇನಿಲ್ಲ ಎಂದು ಹೇಳಲಾಗುತ್ತಿದೆ.

Namma Sindhanuru Click For Breaking & Local News

ಪುರಸಭೆ ಇದ್ದಾಗಿನ ಶುದ್ಧೀಕರಣ ಘಟಕವೇ ಇಂದಿಗೂ ಆಸರೆ
25-05-1998ರಲ್ಲಿ ಸಿಂಧನೂರು ಪುರಸಭೆ ಇದ್ದಾಗ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ ಅವರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸಿಂಧನೂರು ಪಟ್ಟಣ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿದ್ದರು. 26ವರ್ಷಗಳ ಹಿಂದೆ ನಿರ್ಮಿಸಿದ ಶುದ್ಧೀಕರಣ ಘಟಕವೇ ಇಂದಿಗೂ ನಗರ ನೀರು ಸರಬರಾಜಿಗೆ ಆಧಾರವಾಗಿದೆ. ಇತ್ತೀಚೆಗೆ ಮತ್ತೊಂದು ಘಟಕವನ್ನು ನಿರ್ಮಿಸಲಾಗಿದ್ದು, ನಗರದ ಜನಸಂಖ್ಯೆಗೆ ಈ ಎರಡು ಘಟಕಗಳು ಕಾರ್ಯಾಚರಣೆ ನಡೆಸಿದರೂ ನೀರು ಸಾಲುತ್ತಿಲ್ಲ ಎನ್ನಲಾಗುತ್ತಿದೆ. ಹೊಸ ಘಟಕ ಕಳೆದ ಹಲವು ತಿಂಗಳಿನಿಂದ ಪ್ರಾರಂಭವಾಗಿದ್ದು, ನಿರ್ವಹಣೆ ಕೊರತೆಯೂ ಎದ್ದು ಕಾಣುತ್ತಿದೆ.

Namma Sindhanuru Click For Breaking & Local News

ನೀರಿನ ನಿರ್ವಹಣೆಗೆ 6 ಸಿಬ್ಬಂದಿ
ಮಂಗಳವಾರ ‘ನಮ್ಮ ಸಿಂಧನೂರು ವೆಬ್ ನ್ಯೂಸ್’ ತಾಣ ಕುಡಿವ ನೀರಿನ ಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಅಂಶಗಳು ಕಂಡುಬಂದವು. ಕುಡಿವ ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆ ನಗರಸಭೆ 6 ಸಿಬ್ಬಂದಿ ನಿಯೋಜಿಸಿರುವುದು ತಿಳಿದುಬಂತು. ಯಂತ್ರಗಳ ನಿರ್ವಹಣೆ, ನೀರು ಸರಬರಾಜು ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳನ್ನು ನಿಯೋಜನೆಗೊಂಡ ಸಿಬ್ಬಂದಿ ಪಾಳಿಯಂತೆ ಕೆಲಸ ನಿರ್ವಹಿಸುತ್ತಾರೆ. ಈ ಸಂದರ್ಭದಲ್ಲಿ ಕೆರೆ, ಶುದ್ಧೀಕರಣ ಘಟಕ, ಯಂತ್ರೋಪಕರಣಗಳು ಸೇರಿದಂತೆ ಸುರಕ್ಷತೆಯ ಬಗ್ಗೆ ನಗರಸಭೆ ನಿರ್ಲಕ್ಷ್ಯ ಇಲ್ಲಿಗೆ ಭೇಟಿ ನೀಡಿದ ಯಾರಿಗಾದರೂ ಗೋಚರಿಸದೇ ಇರದು. ಈ ಹಿಂದೆ ಪಾರ್ಕಿನಂತೆ ಕಂಡುಬರುತ್ತಿದ್ದ, ಕೆರೆ ಏರಿಯಾ, ನೀರಿನ ಘಟಕದ ಪ್ರದೇಶ ಸಂಪೂರ್ಣ ಅಧ್ವಾನ ಸ್ಥಿತಿಗೆ ತಲುಪಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Namma Sindhanuru Click For Breaking & Local News

ನಿಯಮಿತ ಅವಧಿಯಲ್ಲಿ ಶುದ್ಧೀಕರಣ ಘಟಕಗಳ ಸ್ವಚ್ಛತೆ ಮಾಡಲಾಗುತ್ತಿದೆಯೇ ?
ಕೆರೆಯಿಂದ ಬರುವ ರಾ ವಾಟರ್ ಅನ್ನು ಸ್ಯಾಂಡ್ ಫಿಲ್ಟರ್ ಮೂಲಕ ಶುದ್ಧೀಕರಿಸಿ, ಸಂಪ್‌ಗೆ ಪೂರೈಸಬೇಕು (ರಿವರ್ಸ್ ಆಸ್ಮೋಸಿಸ್ ಪ್ರಕ್ರಿಯೆ), ಸಂಪಿನ ನೀರನ್ನು ಓವರ್ ಹೆಡ್ ಟ್ಯಾಂಕ್ ಇಲ್ಲವೇ ಪೈಪ್‌ಲೈನ್ ಮುಖಾಂತರ ಪೂರೈಸಬೇಕಿದೆ. ನಿಯಮಿತ ಅವಧಿಯಲ್ಲಿ ಸ್ಯಾಂಡ್‌ಫಿಲ್ಟರ್ ಅನ್ನು ಸ್ವಚ್ಛಗೊಳಿಸಬೇಕು. ಇಲ್ಲದೇ ಹೋದರೆ ನೀರು ಶುದ್ಧೀಕರಣಗೊಳ್ಳುವುದಿಲ್ಲ ಎನ್ನುತ್ತಾರ ತಜ್ಞರು. ಆದರೆ ಇಲ್ಲಿ ಆಗುತ್ತಿರುವುದು ಬೇರೆ ! ಶುದ್ದೀಕರಣ ಘಟಕಗಳನ್ನು ನಿಯಮಿತವಾಗಿ ಶುದ್ಧೀಕರಣಗೊಳಿಸಬೇಕು, ತುಕ್ಕು ಹಿಡಿದ ಯಂತ್ರಗಳನ್ನು ಬದಲಿಸಬೇಕು, ನೀರು ಸರಬರಾಜು ಉಸ್ತುವಾರಿಗೆ ನೇಮಿಸಿದ ತಾಂತ್ರಿಕ ವಿಭಾಗದ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ವ್ಯವಸ್ಥೆ ಸುಧಾರಿಸುವುದಕ್ಕೆ ಮೇಲಧಿಕಾರಿಗಳಿಗೆ ಬೇಡಿಕೆಯನ್ನು ಸಲ್ಲಿಸಬೇಕು, ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಏನೇ ಕೊರತೆ ಉಂಟಾದಲ್ಲಿ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಕೂಡಲೇ ತರಬೇಕು. ಆದರೆ ಈ ಪ್ರಕ್ರಿಯೆಗಳು ಇತ್ತೀಚೆಗೆ ಹಳಿ ತಪ್ಪಿವೆ.

Namma Sindhanuru Click For Breaking & Local News

ಸಿಬ್ಬಂದಿಗೆ ಅಗತ್ಯ ತರಬೇತಿಯೇ ಇಲ್ಲ ?
ಶುದ್ಧೀಕರಣ ಘಟಕದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿ ಬೇಕು, ಕಣ್ಣಳತೆ ಆಧರಿಸಿ ನೀರಿಗೆ ಬ್ಲೀಚಿಂಗ್ ಪೌಡರ್ ಮಿಶ್ರಣ ಮಾಡುವುದು ಸೇರಿದಂತೆ ಅಂದಾಜಿನಿಂದ ಯಾವುದೇ ಕೆಲಸ ನಿರ್ವಹಿಸುವುದು ಸರಿಯಲ್ಲ. ಇಡೀ ನಗರಕ್ಕೆ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಸ್ಪಷ್ಟತೆ ಹಾಗೂ ವೈಜ್ಞಾನಿಕ ನಿಯಮಗಳನ್ನು ಪಾಲಿಸಲೇಬೇಕಿದೆ. ಇಲ್ಲದೇ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ನಗರಸಭೆ ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಗತ್ಯ ತರಬೇತಿ ಪಡೆಯದೇ ಇರುವುದು ಹಾಗೂ ಮೇಲಧಿಕಾರಿಗಳು ಹೇಳಿದಂತೆ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ತಿಳಿದುಬಂತು.
ಕು
ಡಿವ ನೀರಿನಲ್ಲಿ ಬ್ಯಾಕ್ಟೀರಿಯಾ ಶಂಕೆ ?
ಸಿಂಧನೂರು ನಗರಸಭೆ ವಿವಿಧ ವಾರ್ಡ್ಗಳಿಗೆ ಪೂರೈಸುತ್ತಿರುವ ಕುಡಿಯುವ ನೀರು ಕಂದುಬಣ್ಣಕ್ಕೆ ತಿರುಗಿದ್ದು, ಇದರಲ್ಲಿ ಬ್ಯಾಕ್ಟೀರಿಯಾಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ ನಗರಸಭೆ ಈ ನೀರನ್ನು ‘ಕಾಯಿಸಿ ಆರಿಸಿ ಸೋಸಿ ಕುಡಿಯಿರಿ’ ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದಿದ್ದರೂ ನಗರಸಭೆ ನಿರ್ಲಕ್ಷ್ಯವಹಿಸಿರುವುದು ತಿಳಿದುಬಂತು.
ನೀರನ್ನು ಪರೀಕ್ಷೆಗೆ ಒಳಪಡಿಸದ ನಗರಸಭೆ ?
ನಗರಸಭೆ ವಿವಿಧ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿರುವ ನೀರನ್ನು ಕಡ್ಡಾಯವಾಗಿ ನಿಯಮಿತವಾಗಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಬೇಕು. ಅದರ ಆಧಾರದ ಮೇಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ ಕೆಮಿಕಲ್ ಪ್ಯಾರಾಮೀಟರ್‌ನಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದು, ಬ್ಯಾಕ್ಟೀರಿಯಾ ಶಂಕೆ ವ್ಯಕ್ತವಾದ ನಂತರವೂ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕುಡಿವ ನೀರು ಭಾರತೀಯ ಮಾನಕ ಬ್ಯೂರೊ (ಬಿಐಎಸ್) ಅನುಸಾರ ಇರಬೇಕು ಇಲ್ಲದೇ ಹೋದರೆ ಆ ನೀರು ಕುಡಿಯಲು ಯೋಗ್ಯವಲ್ಲ. ಒಂದು ವೇಳೆ ಅಂತಹ ನೀರು ಅನಾರೋಗ್ಯಕ್ಕೆ ಈಡು ಮಾಡುತ್ತದೆ. ಆದರೆ ಈ ನೀರನ್ನು ನಗರಸಭೆ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಿಗಡಾಯಿಸಿದ ನೀರಿನ ಸಮಸ್ಯೆ, ಗಮನಹರಿಸದ ಶಾಸಕರು !
ನಗರದ ಹಲವು ವಾರ್ಡ್ಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿರುವುದಲ್ಲದೇ, ಕಂದುಬಣ್ಣಕ್ಕೆ ತಿರುಗಿದ ನೀರು ಪೂರೈಕೆಯಾಗುತ್ತಿದ್ದರೂ ಇಲ್ಲಿಯವರೆಗೂ ಶಾಸಕರು ಸಭೆ ಕರೆದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷö್ಯ ವಹಿಸಿದ್ದಾರೆನ್ನುವ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *