ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 19
ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ತೆರವು ಕಾರ್ಯಾಚರಣೆ ನಂತರ ಬಹಳಷ್ಟು ಬೀದಿ ಬದಿ ವ್ಯಾಪಾರಸ್ಥರು ಉದ್ಯೋಗ ಕಳೆದುಕೊಂಡಿದ್ದು, ಅವರ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕರ ಕಾರ್ಯಾಲಯಕ್ಕೆ ನಿಯೋಗ ತೆರಳಿ ಡಿ.ವೈ.ಎಸ್.ಪಿ ಬಿ.ಎಸ್.ತಳವಾರ ಅವರನ್ನು ಭೇಟಿ ಮಾಡುವ ಮೂಲಕ ಕೆಲಕಾಲ ಚರ್ಚಿಸಲಾಯಿತು.
ಕಳೆದ ಮೂರು ತಿಂಗಳಿಂದ ಬೀದಿ ಬದಿ ವ್ಯಾಪಾರಸ್ಥರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದು, ವ್ಯಾಪಾರವಿಲ್ಲದೇ ಅವರ ಕುಟುಂಬಗಳು ಜೀವನ ನಿರ್ವಹಣೆಗೆ ಅನುಭವಿಸುತ್ತಿರುವ ಸಂಕಷ್ಟವನ್ನು ಮನವರಿಕೆ ಮಾಡಲಾಯಿತು.
ನಿಯೋಗದ ಮನವಿಗೆ ಸ್ಪಂದಿಸಿದ ಡಿವೈಎಸ್‌ಪಿ ಬಿ.ಎಸ್.ತಳವಾರ ಅವರು, ಈ ಕುರಿತು ಮೇಲಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರದವರೊಂದಿಗೆ ಮಾತನಾಡುತ್ತೇನೆ. ಕಾನೂನಿನಡಿ ಏನೆಲ್ಲಾ ಅವಕಾಶವಿದೆ ಆ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಿ.ಎಚ್.ಪೂಜಾರ್, ಚಂದ್ರಶೇಖರ ಗೊರಬಾಳ, ಹುಸೇನ್‌ಸಾಬ್, ಬಸವಂತರಾಯಗೌಡ ಕಲ್ಲೂರು, ಬಿ.ಎನ್.ಯರದಿಹಾಳ, ಕೃಷ್ಣಮೂರ್ತಿ, ಡಿ.ಎಚ್.ಕಂಬಳಿ, ಬಸವರಾಜ ಬಾದರ್ಲಿ, ಕೃಷ್ಣಮೂರ್ತಿ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಇದ್ದರು.

ಕುಷ್ಟಗಿ ಮಾರ್ಗದ ರಸ್ತೆ ಬದಿಯ ವ್ಯಾಪಾರಸ್ಥರ ಸಭೆ
ನಗರದ ಎಪಿಎಂಸಿಯ ಗಣೇಶ ಗುಡಿಯಲ್ಲಿ ಮಂಗಳವಾರ ಸಾಯಂಕಾಲ ಕುಷ್ಟಗಿ ಮಾರ್ಗದ ರಸ್ತೆ ಬದಿಯ ಬೀದಿ ಬದಿ ವ್ಯಾಪಾರಸ್ಥರ ಸಭೆ ನಡೆಯಿತು. ಈ ಸಭೆಯಲ್ಲಿ ಮಾರ್ಗದಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರು ಭಾಗವಹಿಸಿ ಕಳೆದ ಮೂರು ತಿಂಗಳಿನಿAದ ಉದ್ಯೋಗ ಕಳೆದುಕೊಂಡು ಅನುಭವಿಸುತ್ತಿರುವ ಆರ್ಥಿಕ ಹಾಗೂ ಜೀವನ ನಿರ್ವಹಣೆಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಅಳಲು ತೋಡಿಕೊಂಡರು. ಹೇಗಾದರೂ ಮಾಡಿ ನಮಗೆ ಒಂದು ವ್ಯವಸ್ಥೆ ಮಾಡಿಸಿ ಕೊಡಿ, ಇಲ್ಲದಿದ್ದರೆ ನಮ್ಮ ಕುಟುಂಬ ಸಾಕಲು ಪರದಾಡಬೇಕಾದ ಸ್ಥಿತಿ ಅನುಭವಿಸುವಂತಾಗುತ್ತದೆ. ಈಗಾಗಲೇ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡು ಸಾಲದವರ ಕಿರಿಕಿರಿಗೆ, ಕುಟುಂಬ ಸಾಕಲು ಬೆಂಗಳೂರು, ಮುಂಬೈ, ಮಂಗಳೂರಿಗೆ ಕೆಲಸ ಅರಸಿ ಹೋಗಿದ್ದಾರೆ. ಇನ್ನೂ ಬಹಳಷ್ಟು ಮಂದಿ ಹೇಗೋ ಏನೋ ಜೀವನ ನಡೆಸುತ್ತಿದ್ದೇವೆ ಎಂದು ಬೀದಿ ಬದಿ ವ್ಯಾಪಾರಸ್ಥರೊಬ್ಬರು ದಿನ ನಿತ್ಯ ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡರು.
ಇದಕ್ಕೆ ಹೋರಾಟ ಸಮಿತಿಯವರು ಪ್ರತಿಕ್ರಿಯಿಸಿ, ಈ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಈ ನಡುವೆ ಶಾಸಕರು ಸದನದಲ್ಲಿ ಪಾಲ್ಗೊಂಡಿರುವುದರಿಂದ ಸದ್ಯಕ್ಕೆ ಅವರ ಭೇಟಿ ಸಾಧ್ಯವಾಗಿಲ್ಲ. ಹಾಗಾಗಿ ಅವರು ಸಿಂಧನೂರಿಗೆ ಬಂದ ನಂತರ ಇನ್ನೊಮ್ಮೆ ಚರ್ಚಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕರು, ಮುಖಂಡರು ಉಪಸ್ಥಿತರಿದ್ದರು.

