ನಮ್ಮ ಸಿಂಧನೂರು, ಆಗಸ್ಟ್ 20
ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಆಗಸ್ಟ್ 24 ರಂದು ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರ್ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಸವ ಕೇಂದ್ರದ ಸಹಕಾರದೊಂದಿಗೆ ಸಂಜೆ 6.30 ಗಂಟೆಗೆ ರಾಯಚೂರು ಸಮುದಾಯ ತಂಡದಿಂದ ಡಾ.ವಿಕ್ರಮ್ ವಿಸಾಜಿಯವರು ರಚಿಸಿದ, ಪ್ರವೀಣ್ ರೆಡ್ಡಿ ಗುಂಜಳ್ಳಿ ಅವರು ನಿರ್ದೇಶಿಸಿದ ‘ರಕ್ತ ವಿಲಾಪ’ ನಾಟಕ ಪ್ರದರ್ಶನಗೊಳ್ಳಲಿದೆ. ಆಗಸ್ಟ್ 25ರಂದು ಸಂಜೆ 5 ಗಂಟೆಗೆ ಸಮುದಾಯ ಹಿಂದಿನ ಹೆಜ್ಜೆಗಳ ಹೊರಳು ನೋಟ ಕಾರ್ಯಕ್ರಮ ನಡೆಯಲಿದ್ದು, ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸುವರು. ಸಂಜೆ 6.30 ಗಂಟೆಗೆ ಸಮುದಾಯ ಸಿಂಧನೂರು ತಂಡದಿಂದ ಹನುಮಂತ ಹಾಲಿಗೇರಿ ರಚಿಸಿದ, ಗಿರೀಶ್ ಈಚನಾಳ ನಿರ್ದೇಶನದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನಗೊಳ್ಳಲಿದೆ. ಆಗಸ್ಟ್ 26ರಂದು ಸಂಜೆ 6.30ಕ್ಕೆ ನಾಟಕೋತ್ಸವ ಸಮಾರೋಪ ಜರುಗಲಿದ್ದು, ಕೃಷ್ಣಮೂರ್ತಿ ಬಿಳಿಗೆರೆಯವರು ಸಮಾರೋಪದ ಮಾತುಗಳನ್ನಾಡಲಿದ್ದಾರೆ. ತದನಂತರ ಸಮುದಾಯ ಧಾರವಾಡದ ತಂಡದವರಿಂದ ಗಿರೀಶ್ ಕಾರ್ನಾಡ್ ರಚಿತ, ಮಹಾದೇವ ಹಡಪದ ಅವರು ನಿರ್ದೇಶನದ ತಲೆದಂಡ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.