(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 11
ಸಂವಿಧಾನ ಬದ್ಧವಾಗಿ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ದೊರಕಿರುವ 371(ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ ‘371(ಜೆ) ಅನುಷ್ಠಾನ ಸಮಿತಿ’ಯನ್ನು ರಚಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಡಾ.ರಜಾಕ್ ಉಸ್ತಾದ್ ಸರ್ಕಾರವನ್ನು ಆಗ್ರಹಿಸಿದರು.
ಅವರು ನಗರದಲ್ಲಿ ಕಲ್ಯಾಣ ಕರ್ನಾಟಕ ಆರ್ಟಿಕಲ್ 371(ಜೆ) ಹೋರಾಟ ಸಮಿತಿಯಿಂದ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಂವಿಧಾನದ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ, ರಾಜ್ಯದಲ್ಲಿ ಅನುಚ್ಛೇದ 371(ಜೆ) ಉದ್ಯೋಗ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ 371(ಜೆ) ಜಾರಿಗೊಳಿಸಿ 10 ವರ್ಷಗಳಾದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದರೆ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಈಗಲೇ ಖ್ಯಾತೆ ತೆಗೆದಿರುವುದು ಇದು ಹೊಟ್ಟೆ ಕಿಚ್ಚಿನ ಪರಮಾವಧಿಯಾಗಿದೆ. ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ಹೈ.ಕ.ಜಿಲ್ಲೆಗಳ ಏಳ್ಗೆಯನ್ನು ಸಹಿಸದೇ ಇರುವುದು ಸರಿಯಾದ ಕ್ರಮವಲ್ಲ. ಇಂದು 371 (ಜೆ) ಕಾರಣಕ್ಕೆ ನಮ್ಮ ಈ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೆಡಿಕಲ್, ಎಂಜಿನಿಯರಿಂಗ್, ಅಗ್ರಿ ಸೇರಿದಂತೆ ಇನ್ನಿತರೆ ಉನ್ನತ ಶಿಕ್ಷಣದ ಹಲವು ಕೋರ್ಸ್ಗಳನ್ನು ಪಡೆಯಲು ಸಾಧ್ಯವಾಗಿದೆ. ಇಲ್ಲದೇ ಹೋದರೆ ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಹಳಷ್ಟು ಹಿನ್ನಡೆ ಸಾಧಿಸುತ್ತಿದ್ದರು ಎಂದು ಹೇಳಿದರು.
‘3 ತಿಂಗಳಿಗೊಮ್ಮೆ ಸಭೆ ಅನುಷ್ಠಾನ ಸಮಿತಿ ಸಭೆ ಕರೆಯಲಿ’
ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಂತೆ, ರಾಜ್ಯ ಸರ್ಕಾರ 371 (ಜೆ) ಅನುಷ್ಠಾನ ಸಮಿತಿ ರಚಿಸಿ, ಮುಖ್ಯಮಂತ್ರಿಗಳು 3 ತಿಂಗಳಿಗೊಮ್ಮೆ ಸಭೆ ಕರೆದು ಮೇಲ್ವಿಚಾರಣೆ ನಡೆಸಬೇಕು. ಆ ಮೂಲಕ ಹಿಂದುಳಿದ ಪ್ರದೇಶದ ಜಿಲ್ಲೆಗಳ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ರಜಾಕ್ ಉಸ್ತಾದ್ ಅವರು ಒತ್ತಾಯಿಸಿದರು.
‘371(ಜೆ) ಪ್ರತ್ಯೇಕ ಟ್ರಿಬ್ಯುನಲ್ ರಚಿಸಿ’
“ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳ ಜನರಿಗೆ ಸಂವಿಧಾನ ಬದ್ಧವಾಗಿ ದೊರಕಿರುವ 371 (ಜೆ) ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನದ ಹಿನ್ನೆಲೆಯಲ್ಲಿ 371 (ಜೆ) ಪ್ರತ್ಯೇಕ ಟ್ರಿಬ್ಯುನಲ್ ರಚಿಸಬೇಕು ಹಾಗೂ ಆ ಟ್ರಿಬ್ಯುನಲ್ನ್ನು ಹೈ.ಕ.ಭಾಗದ ಜಿಲ್ಲೆಗಳಲ್ಲೇ ವ್ಯವಸ್ಥೆಗೊಳಿಸಿ, ಏನೇ ತಕರಾರುಗಳು ಬಂದರೂ ಇದೇ ಟ್ರಿಬ್ಯುನಲ್ ಮೂಲಕ ಬಗೆಹರಿಸಬೇಕು’ ಎಂದು ಉಸ್ತಾದ್ ಸರ್ಕಾರವನ್ನು ಆಗ್ರಹಿಸಿದರು.
‘30 ವರ್ಷಗಳ ಹೋರಾಟದ ಫಲ’
ಹೈದ್ರಾಬಾದ್ ಕರ್ನಾಟಕಕ್ಕೆ 371 (ಜೆ) ವಿಶೇಷ ಸ್ಥಾನಮಾನ ದೊರಕಿರುವುದು ೩೦ ವರ್ಷಗಳ ಹೋರಾಟದ ಫಲವಾಗಿದೆ. ವೈಜನಾಥ ಪಾಟೀಲ್ ಸೇರಿದಂತೆ ಹಲವು ಹೋರಾಟಗಾರರು ಇದಕ್ಕಾಗಿ ಅವಿರತ ಶ್ರಮಪಟ್ಟಿದ್ದಾರೆ. ಈ ಕಲಂ ಜಾರಿಯಾದ ಹತ್ತೇ ವರ್ಷಗಳಲ್ಲಿ ದಕ್ಷಿಣ ಭಾಗದ ಜಿಲ್ಲೆಗಳ ಜನರು ಅಸೂಯೆಪಡುತ್ತಿರುವುದು ಯೋಗ್ಯವಲ್ಲ. ಈ ಭಾಗದ ಜನರು ಬಹಳ ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ, ಪ್ರಾದೇಶಿಕ ಅಸಮಾನತೆಯಿಂದ ನಲುಗಿ ಹೋಗಿದ್ದು, ಇತ್ತೀಚಿಗೆ ವಿಶೇಷ ಸ್ಥಾನಮಾನ ದೊರೆತ ಕಾರಣ ಶೈಕ್ಷಣಿಕ ಮತ್ತು ಉದ್ಯೋಗ ರಂಗದಲ್ಲಿ ಒಂದಿಷ್ಟು ಬೆಳವಣಿಗೆ ಕಾಣುತ್ತಿದ್ದಾರೆ. ಹಾಗಾಗಿ ಸರ್ಕಾರ ತಾರತಮ್ಯ ನೀತಿ ಅನುಸರಿಸದೇ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಸರ್ಕಾರವನ್ನು ಒತ್ತಾಯಿಸಿದರು.
‘ಮಕ್ಕಳ ಭವಿಷ್ಯಕ್ಕಾಗಿ ಹೋರಾಟಕ್ಕೆ ಮುಂದಾಗೋಣ’
ಹಿಂದುಳಿದ ಪ್ರದೇಶದ ಜನರಿಗೆ ನ್ಯಾಯೋಚಿತವಾಗಿ ಸಿಕ್ಕ ಸೌಲಭ್ಯದ ಬಗ್ಗೆ ಮುಂದುವರಿದ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಹೊಟ್ಟೆಕಿಚ್ಚುಪಡುತ್ತಿರುವುದು ಏಕೆ ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಆಸ್ಪದ ಕೊಡದೇ ಈ ಭಾಗದ ಜನರಿಗೆ ದೊರಕಿರುವ ಸೌಲಭ್ಯವನ್ನು ಜಾಚೂತಪ್ಪದೇ ಜಾರಿಗೊಳಿಸಬೇಕು. ಈ ಭಾಗದ ಜಿಲ್ಲೆಗಳ ಜನರು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹೋರಾಟಕ್ಕೆ ಮುಂದಾಗಬೇಕು. ಸರ್ಕಾರ ಯಾವುದೇ ರೀತಿಯ ತಾರತಮ್ಯ ನೀತಿಯನ್ನು ಕೈಬಿಡಬೇಕು ಎಂದು ಮಾಜಿ ಸಂಸದ ಹಾಗೂ ಹೋರಾಟ ಸಮಿತಿಯ ಸಂಚಾಲಕ ಕೆ.ವಿರೂಪಾಕ್ಷಪ್ಪ ಅವರು ಆಗ್ರಹಿಸಿದರು.
ರಾಜ್ಯಪಾಲರು, ಸಿಎಂ ಅವರಿಗೆ ಮನವಿ ರವಾನೆ
17 ಹಕ್ಕೊತ್ತಾಯಗಳುಳ್ಳ ಮನವಿಯನ್ನು ಹೋರಾಟ ಸಮಿತಿಯ ಸಂಚಾಲಕರು ತಹಸೀಲ್ದಾರ್ ಅರುಣ್ಕುಮಾರ್ ದೇಸಾಯಿ ಅವರ ಮೂಲಕ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ರವಾನಿಸಲಾಯಿತು. ಹೋರಾಟದಲ್ಲಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಾದಯ್ಯ ಗುರುವಿನ್, ಬಾಬುಗೌಡ ಬಾದರ್ಲಿ, ವಕೀಲರ ಸಂಘದ ಎನ್.ಭೀಮನಗೌಡ, ಸರಸ್ವತಿ ಪಾಟೀಲ್, ಬಸವರಾಜ ಹಿರೇಗೌಡರ್ ಸೇರಿದಂತೆ ಹಲವು ಮುಖಂಡರು, ಗಣ್ಯರು, ಹೋರಾಟ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕರು, ಆಡಳಿತ ಮಂಡಳಿಯವರು ಸೇರಿದಂತೆ ಇನ್ನಿತರರು ಇದ್ದರು.