(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 15
ನಗರದ ವಾರ್ಡ್ 17 ರಲ್ಲಿರುವ ವೆಂಕಟೇಶ್ವರ ಕಾಲೋನಿಯ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮತ್ತು ಮಕ್ಕಳ ಉದ್ಯಾನವನ ಕಾಳಜಿ ಕೊರತೆಯಿಂದ ಸೊರಗುತ್ತಿದೆ. ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ಗಿಡಗಳಿದ್ದು, ಆವರಣದಲ್ಲಿ ಮರಂಹಾಕಿ ಕೈಬಿಡಲಾಗಿದೆ. ಗರಿಕೆ ಅಥವಾ ಇನ್ನಿತರೆ ಗಿಡಗಳನ್ನು ಬೆಳೆಸಿದ ಕುರುಹು ಇಲ್ಲ. ಬೃಹತ್ತಾದ ಹೈಮಾಸ್ಟ್ ದೀಪದ ಕಂಬ ಇದ್ದು, ಮಕ್ಕಳಿಗಾಗಿ ಆಟಿಕೆಯ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಕುಳಿತುಕೊಳ್ಳಲು ಬೆರಳೆಣಿಕೆಯ ಆಸನಗಳ ಹೊರತುಪಡಿಸಿ, ಉಳಿದಂತೆ ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿ ಕಂಡಿಲ್ಲ.
ಇಡೀ ನಗರದಲ್ಲಿ ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಉದ್ಯಾನವನ ಇದೊಂದೇ ಅನಿಸುತ್ತದೆ. ಈ ಉದ್ಯಾನವನವು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 5 ಗಂಟೆಯಿಂದ 9 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ, ಭಾನುವಾರ ಮುಂಜಾನೆ 5 ಗಂಟೆಯಿಂದ ಸಾಯಂಕಾಲ 8 ಗಂಟೆಯವರೆಗೆ ತೆರೆದಿರುತ್ತದೆ ಎಂದು ದ್ವಾರಬಾಗಿಲಿನಲ್ಲಿ ಸಮಯ ನಿಗದಿಪಡಿಸಿ ಫಲಕ ಬರೆಯಲಾಗಿದೆ. ಈ ಉದ್ಯಾನವನ ವೆಂಕಟರಾವ್ ನಾಡಗೌಡ ಅವರು ಶಾಸಕರಾಗಿದ್ದಾಗ, ಮಲ್ಲಿಕಾರ್ಜುನ ಪಾಟೀಲ್ ಅವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿರ್ಮಾಣಗೊಂಡಿದೆ. ನಗರ ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿರುವ ಹೊತ್ತಲ್ಲಿ ಉದ್ಯಾನವನಗಳು ಒಂದು ರೀತಿಯಲ್ಲಿ ಆಕ್ಸಿಜನ್ ಬ್ಯಾಂಕ್‌ಗಳ ಕಾರ್ಯನಿರ್ವಹಿಸುತ್ತವೆ. ಆದರೆ ಉದ್ಯಾನಕ್ಕೆ ಜಾಗ ಮೀಸಲಿರಿಸಿ, ಅರೆಬರೆ ಅಭಿವೃದ್ಧಿ ಮಾಡುವ ಮೂಲಕ ಸ್ಥಳೀಯ ಸಂಸ್ಥೆಗಳು ಬೇಜವಾಬ್ದಾರಿ ವಹಿಸಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.