ನಮ್ಮ ಸಿಂಧನೂರು, ಆಗಸ್ಟ್ 31
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಇಲಾಖೆಯ ಆದೇಶದಂತೆ ನಿಯಮ ಪಾಲಿಸಲಾಗಿದೆ, ಯಾವುದೇ ರೀತಿಯ ಲೋಪ ಉಂಟಾಗಿಲ್ಲ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ (ರಿ) ಬೆಂಗಳೂರು ತಾಲೂಕು ಘಟಕ ಸಿಂಧನೂರು ಶನಿವಾರ ಸ್ಪಷ್ಟನೆ ನೀಡಿದೆ.
“ಕಾಲೇಜಿನ ಪ್ರಾಂಶುಪಾಲರು ನಿಯಮಾನುಸಾರ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕ ಕೈಗೊಂಡಿದ್ದಾರೆ. ದಿನಾಂಕ:23-08-2024ರಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಆಕಸ್ಮಿಕವಾಗಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದಿಂದ ಮೌಖಿಕವಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಈ ಮನವಿಗೆ ಸ್ಪಂದಿಸಿ ಅವರು, ಇಲಾಖೆಯ ಜಂಟಿ ನಿರ್ದೇಶಕರು ಕಲಬುರಗಿ ಇವರಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಜಂಟಿ ನಿರ್ದೇಶಕರ ಸೂಚನೆಯ ಹಿನ್ನೆಲೆಯಲ್ಲಿ ನಿಯಮಾನುಸಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಿದ್ದಾರೆಯೇ ಹೊರತು, ಅವರು ಯಾವುದೇ ರೀತಿಯಲ್ಲಿ ಪ್ರಾಂಶುಪಾಲರಿಗೆ ಒತ್ತಡ ಹೇರಿಲ್ಲ” ಎಂದು ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ್ ತಿಳಿಸಿದ್ದಾರೆ.
‘ಶಾಸಕರ ಗಮನಕ್ಕೆ ತರಲಾಗಿದೆ’
“ಇಲಾಖೆಯ ಆದೇಶದಂತೆ ಅತಿಥಿ ಉಪನ್ಯಾಸಕರ ನೇಮಕದ ವಿಷಯ ಕುರಿತಂತೆ ಶಾಸಕರು ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಿಡಿಸಿ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ ಅವರಿಗೆ ನಮ್ಮ ಸಂಘಟನೆಯಿಂದ ಗಮನಕ್ಕೆ ತಂದು ಮನವಿ ಮಾಡಿಕೊಳ್ಳಲಾಗಿದೆ. ಈ ಕುರಿತಂತೆ 08-08-2024ರಂದು ಮನವಿಯನ್ನೂ ಕೂಡ ನೀಡಲಾಗಿದೆ. ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಪ್ರಾಂಶುಪಾಲರು ನಿಯಮಾನುಸಾರ ನೇಮಕದಿಂದ 40ಕ್ಕೂ ಹೆಚ್ಚು ಉಪನ್ಯಾಸಕರಿಗೆ ಅನುಕೂಲವಾಗಿದೆ. ಯಾರಿಗೂ ಅನ್ಯಾಯವಾಗದಂತೆ ಇಲಾಖೆ ಆದೇಶ ಪಾಲಿಸಿಯೇ ಅತಿಥಿ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿ ನಡೆದಿದೆ” ಎಂದು ವಿವರಿಸಿದ್ದಾರೆ.