ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 19
ಸೈಕಲ್ ಮೋಟರ್ ಸೈಲೆನ್ಸರ್ ಕಿತ್ತಿ ಓಡಿಸುವುದು, ಅಡ್ಡಾ-ದಿಡ್ಡಿ ಅತಿವೇಗ, ಅಜಾಗರೂಕತನದಿಂದ ಬೈಕ್ ಚಲಾಯಿಸುವುದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು, ಮುಜುಗರ ಬರುವಂತೆ ವರ್ತಿಸುವುದು, ಕಾಲೇಜು ತರಗತಿಗಳನ್ನು ತಪ್ಪಿಸಿ ಬಸ್ ನಿಲ್ದಾಣದಲ್ಲಿ ಕಾಲಹರಣ ಮಾಡುವುದು, 18 ವರ್ಷದ ಒಳಗಿನ ಯುವಕರು ಬೈಕ್ ರೈಡ್ ಮಾಡುವುದನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು ‘ರೋಡ್ ರೋಮಿಯೋ’ ತಂಡ ರಚಿಸಿದೆ.
ಏನಿದು ‘ರೋಡ್ ರೋಮಿಯೋ’ ತಂಡ ?
ಕಳೆದ 15ರಿಂದ 20 ದಿನಗಳ ಹಿಂದೆ ‘ರೋಡ್ ರೋಮಿಯೋ’ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ತಂಡ ಕಾರ್ಯನಿರ್ವಹಿಸುತ್ತದೆ. ಈ ತಂಡದಲ್ಲಿ 1 ಎಎಸ್‌ಐ, 5ಎಚ್‌ಆರ್‌ಸಿಪಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮುಖ್ಯ ರಸ್ತೆ ಹಾಗೂ ಜನದಟ್ಟಣೆಯ ಹಲವು ವಾರ್ಡ್‌ಗಳ ಪ್ರಮುಖ ರಸ್ತೆಗಳಲ್ಲಿ ಈ ತಂಡ ಆಗಾಗ ಸಂಚರಿಸುತ್ತದೆ ಹೇಳಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ, ಯುವತಿಯರಿಗೆ ಯಾರಾದರೂ ಯುವಕರು ಚುಡಾಯಿಸುವುದು, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲಿ ಈ ತಂಡ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಲಾಗುತ್ತಿದೆ.
20ಕ್ಕೂ ಹೆಚ್ಚು ಬೈಕ್ ಸವಾರರಿಗೆ ದಂಡ
ನಿಯಮಬಾಹಿರವಾಗಿ ಬೈಕ್ ಚಲಾಯಿಸಿದ ಮತ್ತು ಸೈಲೆನ್ಸರ್ ಬಿಚ್ಚಿ ಗಾಡಿ ರೈಡ್ ಮಾಡಿದ 20ಕ್ಕೂ ಹೆಚ್ಚು ಯುವ ಬೈಕ್ ಸವಾರರಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ಇನ್ನೂ ಕೆಲವರಿಗೆ ಕೋರ್ಟ್ನಲ್ಲಿ ದಂಡ ಪಾವತಿಸಲು ಸೂಚಿಸಲಾಗಿದೆ. ಅಷ್ಟೇ ಅಲ್ಲದೇ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಹೆಲ್ಪ್ ಡೆಸ್ಕ್
ಇತ್ತೀಚಿಗೆ ಹಲವು ಘಟನಾವಳಿಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮವಾಗಿ ಹೆಲ್ಪ್ ಡೆಸ್ಕ್ ರಚಿಸಿದ್ದು, ಈ ಹೆಲ್ಪ್ ಡೆಸ್ಕ್ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

