ನಮ್ಮ ಸಿಂಧನೂರು, ಮೇ 3
ಆರ್.ಎಚ್.ಕ್ಯಾಂಪ್‌ನ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ನೀರು ಕುಡಿಯಲು ಆಯೋಗ್ಯವಾಗಿದ್ದು, ಬಳಕೆಗೆ ಮಾತ್ರ ಉಪಯೋಗಿಸುವಂತೆ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 2ರಂದು ಪ್ರಕಟಣೆ ಹೊರಡಿಸಿರುವ ಪಿಡಿಒ “ತಾಲ್ಲೂಕಿನ ಆರ್.ಹೆಚ್.ಕ್ಯಾಂಪ್ ಮತ್ತು ಇತರೆ 25 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆರೆಯಲ್ಲಿ ಕಡಿಮೆ ಪ್ರಮಾಣ ನೀರಿದ್ದು, ಕುಡಿಯಲು ಯೋಗ್ಯವಾಗಿರುವುದಿಲ್ಲವೆಂದು ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ವರದಿ ಬಂದಿರುವುದರಿಂದ, ಗೋನವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನವಾರ, ಹುಲಗುಂಚಿ, ಧುಮತಿ, ವಿಘ್ನೇಶ್ವರಕ್ಯಾಂಪ್, ಪಾಪಾರಾವ್‌ಕ್ಯಾಂಪ್ ಮತ್ತು ವೆಂಕಟೇಶ್ವರಕ್ಯಾಂಪಿನ ಗ್ರಾಮಸ್ಥರು ಈ ನೀರನ್ನು ಕುಡಿಯದೇ ಕೇವಲ ಬಳಕೆಗೆ ಮಾತ್ರ ಉಪಯೋಗಿಸಿ, ಶುದ್ಧೀಕರಿಸಿದ (ಫಿಲ್ಕರ್ ವಾಟರ್) ನೀರನ್ನು ಮಾತ್ರ ಕುಡಿಯಬೇಕು” ಎಂದು ಮನವಿ ಮಾಡಿದ್ದಾರೆ.