ವಿಶೇಷ ವರದಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 09
“ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಶಾಲಾ ವಾಹನ ಚಲಾಯಿಸುವುದು, ಗುರುತಿನ ಚೀಟಿ ಹೊಂದಿಲ್ಲದಿರುವುದು,
ಹಳೆಯ ವಾಹನದಲ್ಲಿ ಮಕ್ಕಳ ಸಾಗಣೆ, ಬೇರೆ ರಾಜ್ಯದ ಪಾಸಿಂಗ್ ಇರುವ ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆತರುವುದು, ಸಹಾಯಕರು/ಆಯಾಗಳಿಲ್ಲದೇ ಚಾಲಕರೊಬ್ಬರೇ ಮಕ್ಕಳನ್ನು ಆಯಾ ಊರುಗಳಿಂದ ಶಾಲೆಗೆ ಕರೆದುಕೊಂಡು ಬರುವುದು, ಅತಿವೇಗವಾಗಿ ಚಾಲನೆ ಮಾಡುವುದು, ಚಾಲಕರು ಸಮವಸ್ತ್ರ ಧರಿಸದಿರುವುದು, ನಿಗದಿತ ಸೀಟ್‌ಗಳಿಗಿಂತ ಹೆಚ್ಚಿನ ಮಕ್ಕಳನ್ನು ವಾಹನದಲ್ಲಿ ಸಾಗಿಸುವುದು, ಸಿ.ಸಿ.ಟಿವಿ ಕ್ಯಾಮೆರಾ ಇಲ್ಲದಿರುವುದು” ಹೀಗೆ ನಗರದ ಹಲವು ಶೈಕ್ಷಣಿಕ ಸಂಸ್ಥೆಗಳ ವಾಹನಗಳಲ್ಲಿ ದಿನಾಂಕ: 09-09-2024 ಮಂಗಳವಾರದಂದು ಕಂಡುಬಂದ ನೋಟಗಳಿವು.
ನಗರದ ಬಹಳಷ್ಟು ಶೈಕ್ಷಣಿಕ ಸಂಸ್ಥೆಗಳು ಶಾಲಾ ವಾಹನ ಬಳಕೆ ಮಾಡುತ್ತಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಪ್ರಾದೇಶಿಕ ಸಾರಿಗೆ ಇಲಾಖೆಯವರಾಗಲಿ, ಸಂಚಾರ ಠಾಣೆಯವರಾಗಲಿ ನಿಗದಿತವಾಗಿ ಪರಿಶೀಲನೆ ಮಾಡದಿರುವುದು ಮಕ್ಕಳ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ವಾಹನ ಹಾಗೂ ಸಾರಿಗೆ ಬಸ್ ನಡುವಿನ ಭೀಕರ ಅಪಘಾತ ಸಂಭವಿಸಿ, ಮುಗ್ದ ಕಂದಮ್ಮಗಳ ದಾರುಣ ಸಾವು-ನೋವಿನ ದುರ್ಘಟನೆ ಪಾಲಕ ಸಮುದಾಯದಲ್ಲಿ ಮಾಯದ ಗಾಯ ಮಾಡಿದ್ದು, ಆದರೂ ಇಲಾಖೆಯವರು, ಶೈಕ್ಷಣಿಕ ಸಂಸ್ಥೆಗಳು ಎಚ್ಚೆತ್ತುಕೊಳ್ಳದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪಾಲಕರಲ್ಲಿ ಹೆಚ್ಚಿದ ಆತಂಕ
ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಸಮಿತಿ ಹಲವು ನಿರ್ದೇಶನಗಳನ್ನು ನೀಡಿದ್ದು, ನಗರದ ಬಹುತೇಕ ಶೈಕ್ಷಣಿಕ ಸಂಸ್ಥೆಗಳ ಖಾಸಗಿ ಶಾಲಾ ವಾಹನಗಳು ಇವುಗಳನ್ನು ಪಾಲಿಸದೇ ಇರುವುದು ಪಾಲಕರ ಭಯಕ್ಕೆ ಕಾರಣವಾಗಿದೆ. ಕೆಲ ಶಿಕ್ಷಣ ಸಂಸ್ಥೆಗಳು ಮಾತ್ರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುತ್ತಿದ್ದು, ಉಳಿದ ಸಂಸ್ಥೆಗಳು ಕೋರ್ಟ್ ಹಾಗೂ ಸಾರಿಗೆ, ಸಂಚಾರ ಇಲಾಖೆಯ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿವೆ.
ಕೆಲವೊಂದು ಶಾಲೆಯಲಿ ಹತ್ತಕ್ಕೂ ಹೆಚ್ಚು ಬಸ್ಸು !
ನಗರದ ಕೆಲವೊಂದು ಶೈಕ್ಷಣಿಕ ಸಂಸ್ಥೆಗಳು ಹತ್ತಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಹೊಂದಿವೆ. ಆದರೆ ಸರಿಯಾಗಿ ನಿಯಮಪಾಲನೆ ಮಾಡುತ್ತಿಲ್ಲ. ತರಬೇತಿ ಪಡೆದ, ಸಮರ್ಥ ಚಾಲಕರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಗಾರ ಕೊಡುವುದು ಬರುತ್ತದೆ ಎಂದು ಕೆಲ ಶೈಕ್ಷಣಿಕ ಸಂಸ್ಥೆಗಳು ಕಡಿಮೆ ಪಗಾರಕ್ಕೆ ದುಡಿಯುವವರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹೀಗಾಗಿ ಸಾರಿಗೆ ಇಲಾಖೆ, ಸಂಚಾರ ನಿಯಮ ಸೇರಿದಂತೆ ಸುಪ್ರಿಂ ಕೋರ್ಟ್ನ ನಿರ್ದೇಶನಗಳನ್ನೂ ಉಲ್ಲಂಘಿಸಲಾಗುತ್ತಿದೆ ಎಂದು ವಿದ್ಯಾರ್ಥಿ ಪಾಲಕರೊಬ್ಬರು ಆರೋಪಿಸುತ್ತಾರೆ.
ಪರಿಶೀಲನೆ ಮರೆತ ಸಾರಿಗೆ ಇಲಾಖೆ ?
ಬಹುತೇಕ ವಾಹನಗಳಲ್ಲಿ ಹೊಗೆ ಪರೀಕ್ಷೆ ಮಾಡಿಸದಿರುವುದು, ತುರ್ತು ನಿರ್ಗಮನದ ಬಾಗಿಲು ಸುಲಭವಾಗಿ ತೆಗೆಯಲು ಬಾರದಂತಿರುವುದು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿರುವುದು, ಶಾಲಾ ಬ್ಯಾಗ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು, ವೇಗ ನಿಯಂತ್ರಣ ಸಾಧನ ಅಳವಡಿಸದಿರುವುದು, ತರಬೇತಿ ಪಡೆದ ಚಾಲಕರು ಇಲ್ಲದಿರುವುದು, ವಾಹನ ಸುಸ್ಥಿತಿಯಲ್ಲಿ ಇಲ್ಲದಿರುವುದು ಸೇರಿದಂತೆ ಹಲವು ಲೋಪಗಳು ಶಾಲಾ ವಾಹನಗಳಲ್ಲಿ ಕಂಡುಬಂದರೂ ಸಾರಿಗೆ ಇಲಾಖೆಯವರು ಮತ್ತು ಸಂಚಾರ ಠಾಣೆಯವರು ಇಲ್ಲಿಯವರೆಗೂ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ನಿಯಮಗಳು ಹೇಳುವುದು ಏನು ?
1) ಶೈಕ್ಷಣಿಕ ಸಂಸ್ಥೆಗಳ ಪ್ರತಿ ಶಾಲೆಯಲ್ಲಿ ಕ್ಯಾಬ್ (ವಾಹನ) ಸುರಕ್ಷತಾ ಸಮಿತಿ ರಚಿಸಬೇಕು ಹಾಗೂ ಸಮಿತಿ ವಾಹನಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು.
2) ವಾಹನವು ಪರ್ಮಿಟ್ (ಪರವಾನಗಿ) ಹೊಂದಿರಬೇಕು. ಎಲ್ಲ ದಾಖಲಾತಿಗಳು ಸಮರ್ಪಕವಾಗಿರಬೇಕು. ವಾಹನ ಸುಸ್ಥಿತಿಯಲ್ಲಿರಬೇಕು. ಹದಿನೈದು ವರ್ಷಗಳಿಗಿಂತ ಹಳೆಯ ವಾಹನ ಆಗಿರಬಾರದು. ಸ್ಪೀಡ್ (ವೇಗ) ಗವರ್ನರ್ ಅಳವಡಿಸಿರಬೇಕು.40 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಚಲಿಸಲು ಅವಕಾಶವಿರಬಾರದು. ವಾಹನದ ಕವಚವನ್ನು ಉಕ್ಕಿನಿಂದ ಮಾಡಿರಬೇಕು.
3) ವಾಹನದ ತಯಾರಿಕೆ ಸಂದರ್ಭದಲ್ಲಿ ಅಳವಡಿಸಿರುವ ಸೀಟ್‌ಗಳು (ಆಸನ) ಪುನರ್ ನಿರ್ಮಾಣ ಮಾಡಿರಬಾರದು. ಇರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಸಾಗಿಸಬಾರದು. ಅಲ್ಲದೇ ಶಾಲಾ ಮಕ್ಕಳು ಬ್ಯಾಗ್‌ಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇರಬೇಕು.
4) ವಾಹನ ಸಂಪೂರ್ಣ ವಿಮಾ ರಕ್ಷಣೆ ಹೊಂದಿರಬೇಕು. ಪ್ರಾಥಮಿಕ ಚಿಕಿತ್ಸಾ ಸಾಧನಗಳನ್ನು, ಅಳವಡಿಸಿರಬೇಕು. ಬೆಂಕಿ ನಂದಕ
(fire extinguisher) ಉಪಕರಣ ಹೊಂದಿರಬೇಕು.
5) ಶಾಲಾ ವಾಹನ ಸಂಪೂರ್ಣವಾಗಿ ಹಳದಿ ಬಣ್ಣ ಹೊಂದಿರಬೇಕು. ವಾಹನದ ಹಿಂದೆ ಮತ್ತು ಮುಂದೆ ಶಾಲಾ ವಾಹನ ಎಂದು ದಪ್ಪ ಅಕ್ಷರದಲ್ಲಿ (100 ಮಿ.ಮೀ.ಗಿಂತ ಹೆಚ್ಚು) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿರಬೇಕು. ಉಳಿದ ೨ ಕಡೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು.
6) ಮಕ್ಕಳನ್ನು ವಾಹನಕ್ಕೆ ಹತ್ತಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಕೆಳಗೆ ಇಳಿಸಿ ಪಾಲಕರಿಗೆ ಒಪ್ಪಿಸಲು ಪ್ರತಿಯೊಂದು ಶಾಲಾ ವಾಹನದಲ್ಲಿ ಶಾಲೆಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ನಿಗದಿತ ಪೋಷಕರನ್ನು ಹೊರತುಪಡಿಸಿ ಬೇರೆಯವರಿಗೆ ಮಕ್ಕಳನ್ನು ಒಪ್ಪಿಸುವಂತಿಲ್ಲ.
7) ಶಾಲಾ ವಾಹನಕ್ಕೆ ಅಧಿಕೃತ ಕಂಪನಿಗಳ ಎಲ್‌ಪಿಜಿ ಕಿಟ್‌ಗಳನ್ನು ಮಾತ್ರ ಅಳವಡಿಸಬೇಕು. ಸಿಲಿಂಡರ್ ಮೇಲೆ ಆಸನದ ವ್ಯವಸ್ಥೆ ಮಾಡುವಂತಿಲ್ಲ. ಶಾಲಾ ವಾಹನಕ್ಕೆ ಸಂಪೂರ್ಣ ಪಾರದರ್ಶಕ ಗಾಜುಗಳನ್ನು ಅಳವಡಿಸಿರಬೇಕು. ಬಾಗಿಲುಗಳು ಸರಳವಾಗಿ ತೆರೆದುಕೊಳ್ಳುವಂತೆ ಲಾಕ್‌ಗಳನ್ನು ಅಳವಡಿಸಬೇಕು. ತುರ್ತು ನಿರ್ಗಮನ ಬಾಗಿಲುಗಳು ಕಡ್ಡಾಯವಾಗಿರಬೇಕು.
8) ಶಾಲಾ ವಾಹನ ಚಾಲಕನಿಗೆ ಕನಿಷ್ಠ ೫ ವರ್ಷಗಳ ಅನುಭವ ಇರುವುದು ಕಡ್ಡಾಯ. ಇದುವರೆಗೆ ಆತನ ವಿರುದ್ಧ ಅಪಘಾತದ ದೂರು ದಾಖಲಾಗಿರಬಾರದು. ಕುಡಿದು ಚಾಲನೆ ಮಾಡಿದ ಬಗ್ಗೆ ದಂಡ ಕಟ್ಟಿರಬಾರದು. ವಾಹನ ಚಾಲಕನ ಸಂಪೂರ್ಣ ಮಾಹಿತಿಯನ್ನು ಶಾಲೆ ಸಮಿತಿ ಹೊಂದಿರಬೇಕು.