(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 26
ಸಿಂಧನೂರು ನಗರ ದಿನಗಳೆದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತಿದೆ. ರಾಯಚೂರು, ಗಂಗಾವತಿ ಹಾಗೂ ಕುಷ್ಟಗಿ ಮಾರ್ಗದ ಕಡೆ ಶರವೇಗದಲ್ಲಿ ಬೆಳೆಯುತ್ತಿರುವ ನಗರ, ಮಸ್ಕಿ ಮಾರ್ಗದ ಕಡೆ ನಿಧಾನಗತಿಯಲ್ಲಿ ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಮಾರ್ಗದ ಕಡೆಯೂ ಬದಲಾವಣೆಗಳು ಆಗುತ್ತಿದ್ದು, ಬೂತಲದಿನ್ನಿ ಗ್ರಾಮದ ಕೂಗಳತೆಯಲ್ಲಿಯೇ ಹೊಸ ಲೇಔಟ್‌ವೊಂದು ಆರಂಭವಾಗಿದೆ.
ಸಿಂಧನೂರು ನಗರ ಗಂಗಾವತಿ ಮಾರ್ಗದಲ್ಲಿ ಶ್ರೀಪುರಂ ಜಂಕ್ಷನ್ ಸಮೀಪಿಸಿದರೆ, ರಾಯಚೂರು ಮಾರ್ಗದಲ್ಲಿ ಆರ್.ಎಚ್.ಕ್ಯಾಂಪ್ ಕ್ರಾಸ್ ದಾಟಿಯೂ ನಗರದ ಚಹರೆಗಳು ವಿಸ್ತರಿಸಿವೆ, ಇನ್ನೂ ಕುಷ್ಟಗಿ ಮಾರ್ಗದ ರಸ್ತೆಯಲ್ಲಿ 3ಮೈಲ್ ಕ್ಯಾಂಪ್‌ವರೆಗೂ ಸಿಟಿ ಛಾಯೆ ಇದೆ, ಇನ್ನೂ ಇತ್ತೀಚಿನ ಬೆಳವಣಿಗೆಯಂತೆ ಮಸ್ಕಿ ಮಾರ್ಗದಲ್ಲಿ ಬೂತಲದಿನ್ನಿ ಗ್ರಾಮದವರೆಗೂ ವ್ಯಾಪಿಸುತ್ತಿರುವುದು ನಗರದ ಬೆಳವಣಿಗೆಗೆ ಸಾಕ್ಷಿಯಾಗಿದೆ.
ರಿಯಲ್ ಎಸ್ಟೇಟ್‌ಗೆ ಪೋಟಿಯಾದ ‘ರೈಲು’
ಸಿಂಧನೂರು ನಗರಕ್ಕೆ 26 ವರ್ಷಗಳ ನಂತರ ರೈಲು ಸಂಚಾರ ಸೌಲಭ್ಯ ಬಂದಿದ್ದೇ ತಡ ರಿಯಲ್ ಎಸ್ಟೇಟ್ ಜಿಗಿತ ಕಂಡಿದೆ. ರೈಲ್ವೆ ಸ್ಟೇಶನ್ ಆಜು-ಬಾಜು ಇರುವ ಹೊಲ-ಗದ್ದೆಗಳ ದರ ಲಕ್ಷದಿಂದ ಕೋಟಿಗೆ ಜಿಗಿದಿದೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಹೂಡಿಕೆದಾರರು ಈ ಭಾಗದಲ್ಲಿ ಹೊಲಗಳನ್ನು ಖರೀದಿಸಲು ಪೈಪೋಟಿ ನಡೆಸುತ್ತಿರುವುದು ಇದೆ. ಇನ್ನೂ ರಾಯಚೂರು, ಗಂಗಾವತಿ ಮಾರ್ಗದ ಕಡೆಗಿನ ಪ್ಲಾಟುಗಳ ರೇಟುಗಳು ಗಗನಮುಖಿಯಾಗಿದ್ದರೆ, ಕುಷ್ಟಗಿ ಮಾರ್ಗದ ಕಡೆಗಿನ ನಿವೇಶಗಳ ದರಗಳೇನು ಕಡಿಮೆಯಾಗಿಲ್ಲ. ಈಗ ಮಸ್ಕಿ ಮಾರ್ಗದ ಕಡೆಗೆ ರಿಯಲ್ ಎಸ್ಟೇಟ್ ಹೆಜ್ಜೆಗಳು ಆರಂಭವಾಗಿದ್ದು, ವಿದ್ಯಾ ಪಬ್ಲಿಕ್ ಶಾಲೆ, ಎಫ್‌ಆರ್‌ಎಸ್ ಕ್ಲಬ್ ಆಸು-ಪಾಸು ಭಾಗದಲ್ಲಿ ಎನ್‌ಎ ಆದ ಜಮೀನುಗಳಲ್ಲಿ ಪ್ಲಾಟುಗಳ ರಚನೆ, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳು ಬಿಡುವಿಲ್ಲದೇ ನಡೆಯುತ್ತಿವೆ.
ಜಿಲ್ಲೆಯ ಕನಸಿನೊಂದಿಗೆ ‘ಪ್ಲಾಟಿನತ್ತ ಚಿತ್ತ’ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಹಲವಾರು ಜಿಲ್ಲೆಗಳಿಗೆ ಜಂಕ್ಷನ್ ರೀತಿಯಲ್ಲಿದೆ. ಅಲ್ಲದೇ ಕೆಲವರಿಗೆ ಆಸ್ಪತ್ರೆ, ಶಿಕ್ಷಣ ಸೇರಿದಂತೆ ವಾಣಿಜ್ಯ-ವ್ಯವಹಾರಗಳಿಗೆ ಹೇಳಿ ಮಾಡಿಸಿದಂತಹ ಸಿಟಿಯಂತಾಗಿದ್ದು, ಹೀಗಾಗಿ ತಮ್ಮ ನೆಚ್ಚಿನ ಮನೆ ಕಟ್ಟಿಸಲು ನಗರದಲ್ಲಿ ಪ್ಲಾಟು ಹೊಂದಲು ಮುಂದಾಗುತ್ತಿದ್ದಾರೆನ್ನುವ ಅಭಿಪ್ರಾಯ ಹಲವರದ್ದಾಗಿದೆ. ಇವತ್ತಲ್ಲಾ ನಾಳೆ ಸಿಂಧನೂರು ಜಿಲ್ಲಾ ಕೇಂದ್ರವಾಗಲಿದ್ದು, ತಾವು ಖರೀದಿಸಿದ ಪ್ಲಾಟಿಗೆ ಯಾವುದೇ ರೀತಿಯ ದೋಖಾ ಆಗುವುದಿಲ್ಲ ಎಂಬ ಮುಂದಾಲೋಚನೆಯೊಂದಿಗೆ ಕೆಲವರು ನಿವೇಶನ ಖರೀದಿಗೆ ಹಣ ವಿನಿಯೋಗಿಸುತ್ತಿರುವುದು ಇದೆ.
ಹಳ್ಳಿಜನ ಸಿಟಿಯತ್ತ !
ಸಿಂಧನೂರು ತಾಲೂಕು ವ್ಯಾಪ್ತಿಯ ವ್ಯಾಪಾರಿ ವರ್ಗ, ಶ್ರೀಮಂತ ಸಮುದಾಯಗಳು ಗ್ರಾಮೀಣ ಪ್ರದೇಶದಲ್ಲಿ ಆಸ್ತಿ, ಉತ್ತಮ ವ್ಯವಹಾರ ಹೊಂದಿದವರು ಶಿಕ್ಷಣ, ಸಂಪರ್ಕ-ಸಂವಹನ, ವ್ಯವಹಾರ, ಬದಲಾದ ಜೀವನ ಶೈಲಿಯಿಂದಾಗಿ ಬಹಳಷ್ಟು ಜನರು ಹಳ್ಳಿಯಿಂದ ಸಿಟಿಯತ್ತ ಬರುತ್ತಿದ್ದು, ಮೊದ ಮೊದಲು ಬಾಡಿಗೆ ಮನೆಯಲ್ಲಿದ್ದು, ಒಂದೆರಡು ವರ್ಷಗಳಲ್ಲಿ ನಿವೇಶನ ಖರೀದಿಸಿ, ಹೊಸಮನೆಯತ್ತ ದಾಪಗಾಲು ಹಾಕುತ್ತಿದ್ದಾರೆ. ಹೀಗಾಗಿ ನಿವೇಶನ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಹೆಚ್ಚುತ್ತಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ಜಿಗಿತ ಕಾಣುತ್ತಿದೆ.