(ಜನದನಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 11
ಏರುತ್ತಿರುವ ತಾಪಮಾನದಿಂದ ತಾಲೂಕಿನ ಹಲವು ಕೆರೆ-ಕುಂಟೆ, ಹಳ್ಳಗಳು ಸೇರಿದಂತೆ ತುಂಗಭದ್ರಾ ನದಿಯೂ ಬತ್ತಿದೆ. ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು, ಬಳಕೆ ನೀರಿನ ಅಭಾವ ಉಂಟಾಗಿದ್ದು, ಜಾನುವಾರು ಸಾಕಣೆ ಸವಾಲಾಗಿ ಪರಿಣಮಿಸಿದೆ.
“ಈ ತಿಂಗ್ಳ ದೊಡ್ಡ ಮಳಿ ಆಗ್ಲಿಲ್ಲ ಅಂದ್ರ, ಭಾಳ ಕಷ್ಟ ಐತಿ ನೋಡ್ರಿ. ಕರ‍್ಯಾಗ ನೀರಿಲ್ಲ. ನದ್ಯಾಗ ನೀರಿಲ್ಲ. ಹಳ್ಳ ಅನೋವು ಖಾಲಿ ಖಾಲಿ ಆಗ್ಯಾವ. ತುಂಗಭದ್ರಾ ನದಿ ಅಂತೂ ಬತ್ತಿ ಬಾಡಿ ಹೋಗೇತಿ, ಡ್ಯಾಂನ್ಯಾಗ ತಟಗು ನೀರು ಉಳುದಾವಂತ, ಬೋರುಗಳಾಗ ಜಲಿ ಇಲ್ದ ಸರೀಗೆ ನೀರು ರ‍್ತಿಲ್ಲ. ಕುಡೇ ನೀರಿಗೆ ದಿನಾ ಇಪ್ಪತ್ತು-ಮೂವತ್ತು ರೂಪಾಯಿ ಖರ್ಚು ಮಾಡಂಗಾಗೈತಿ. ಇನ್ನ ದನ-ಕರುಗಳ ಪರಿಸ್ಥಿತಿ ಕೇಳಬರ‍್ದು” ಎಂದು ತಾಲೂಕಿನ ನದಿ ತಟದ ಗ್ರಾಮವೊಂದರ ರೈತರೊಬ್ಬರು ‘ನಮ್ಮ ಸಿಂಧನೂರು ವೆಬ್ ತಾಣ’ದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೋದ ವರ್ಷ ಮಳೆ ಸುರಿದಿದ್ದು ಕಡಿಮೆ
ಕಳೆದ ವರ್ಷ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆ ಆಗದ ಕಾರಣ ತುಂಗಭದ್ರಾ ಅಣೆಕಟ್ಟೆಯಲ್ಲೂ ನೀರಿನ ಅಭಾವ ಉಂಟಾಯಿತು. ಇದರಿಂದ ತಾಲೂಕಿನಲ್ಲಿ 1 ಬೆಳೆಗೆ ನೀರು ಹರಿಸಲಾಯಿತು. ಮಳೆ ಕೊರತೆಯಿಂದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಕುಸಿದು ಜಮೀನುಗಳು ಬಿರಕುಬಿಟ್ಟಿದ್ದು, ಕೃಷಿ ಚಟುವಟಿಕೆ ಆರಂಭಿಸಬೇಕೆಂದರೆ ದೊಡ್ಡ ಮಳೆಯ ಅವಶ್ಯಕತೆ ಇದೆ. ಕಳೆದ ಮರ‍್ನಾಲ್ಕು ದಿನಗಳಿಂದ ಮೋಡ ಕವಿದು ತೂಪರಿ ಇಲ್ಲವೇ ಜಿಟಿ ಜಿಟಿ ಮಳೆ ಬರುತ್ತಿದ್ದು, ದೊಡ್ಡ ಮಳೆ ಆಗಿಲ್ಲ. ಒಂದು ವೇಳೆ ದೊಡ್ಡ ಮಳೆ ಆಗದೇ ಹೋದರೆ ಕೃಷಿ ಚಟುವಟಿಕೆ ಆರಂಭಕ್ಕೂ ತೊಡಕಾಗಲಿದೆ.
ಮಳೆಗಾಗಿ ದೇವರ ಮೊರೆ
ಈ ಬಾರಿ ಬಿಸಿಲು, ತಾಪಮಾನದಿಂದ ತತ್ತರಿಸಿ ಹೋಗಿರುವ ಗ್ರಾಮೀಣ ಪ್ರದೇಶದ ಜನರು ಹಾಗೂ ರೈತರು ಮಳೆಗಾಗಿ ದೇವರ ಮೊರೆ ಹೋಗಿರುವುದು ಕಂಡುಬರುತ್ತಿದೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಸಪ್ತ ಭಜನೆ ಆರಂಭಿಸಿದ್ದರೆ, ಇನ್ನೂ ಕೆಲವೆಡೆ ಗ್ರಾಮ ದೇವತೆಯರಾದ ದುರುಗಮ್ಮ, ದ್ಯಾಮಮ್ಮ ಇಲ್ಲವೇ ಶುಂಕ್ಲಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಅಣಿಯಾಗಿದ್ದು, ಈ ಹಿನ್ನೆಲೆಯಲ್ಲಿ ಐದು ವಾರ ವ್ರತ ಆಚರಿಸಲು ಡಂಗುರ ಹಾಕಿಸುವುದು ನಡೆದಿದೆ.
ತುಂಗಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ
ಮಳೆ ಅಭಾವದಿಂದ ತುಂಗಭದ್ರಾ ಡ್ಯಾಂನಲ್ಲಿ ನೀರಿನ ಅಭಾವ ಉಂಟಾಗಿದೆ. ದಿನಾಂಕ: 11-05-2024ರಂದು 3.43 ಟಿಎಂಸಿ ನೀರು ಇತ್ತು. ಕಳೆದ ವರ್ಷ ಇದೇ ಸಮಯದಲ್ಲಿ 3.03 ಇದ್ದರೆ, 10 ವರ್ಷಗಳ ಹಿಂದೆ ಇದೇ ದಿನದಂದು ೩.೭೫ ಟಿಎಂಸಿ ನೀರಿನ ಸಂಗ್ರಹಣೆ ದಾಖಲಾಗಿದೆ. ಪ್ರಸ್ತುತ ಮೇ 11ರಂದು ಯಾವುದೇ ಒಳ ಹರಿವು ಇಲ್ಲ. 12 ಕ್ಯೂಸೆಕ್ ಮಾತ್ರ ನೀರನ್ನು ಮಾತ್ರ ಡ್ಯಾಂನಿAದ ಹರಿಸಲಾಗುತ್ತಿದೆ. ಉತ್ತಮ ಮಳೆಯಾದರೆ ನದಿಗೆ ನೀರು ಹರಿದು ಬಂದು, ಡ್ಯಾಂ ತುಂಬಲಿದೆ. ಇಲ್ಲದೇ ಹೋದರೆ ಇನ್ನಷ್ಟು ದಿನಗಳನ್ನು ಕಾಯಬೇಕಾಗುತ್ತದೆ ಎಂದು ರೈತರು ಪರಸ್ಪರ ಚರ್ಚಿಸುತ್ತಿದ್ದಾರೆ.