ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 04
ನಗರದ ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದು, ಈ ಮಳೆಗಾಲದ ವೇಳೆಗೆ ಪೂರ್ಣಗೊಳ್ಳುವ ಸೂಚನೆ ಕಾಣಿಸುತ್ತಿಲ್ಲ. ಮಾಚ್ 15, 2024ರಂದು ರೈಲ್ವೆ ಓಡಾಟಕ್ಕೆ ಚಾಲನೆ ದೊರೆತರೂ ಇಲ್ಲಿಯವರೆಗೂ ಸಂಪರ್ಕ ರಸ್ತೆ ನಿರ್ಮಾಣಗೊಳ್ಳದಿರುವುದು ಪ್ರಯಾಣಿಕರಿಗೆ ಬೇಸರ ತರಿಸಿದೆ.
ರೈಲಿನ ಓಡಾಟವೇನು ಶುರುವಾಯಿತು ಆದರೆ, ಕಚ್ಚಾ ರಸ್ತೆಯಲ್ಲಿ ನಿಲ್ದಾಣಕ್ಕೆ ತ್ರಾಸುಪಟ್ಟು ಹೋಗುವ ಅನಿವಾರ್ಯತೆ ಇದೆ. ಒಂದು ಕಿ.ಮೀ ರಸ್ತೆಯ ಹಾದಿ ಮಧ್ಯೆ ಎಲ್ಲೆಂದರಲ್ಲಿ ತಗ್ಗು-ದಿನ್ನೆಗಳಿರುವುದರಿಂದ ಕ್ರಮಿಸಲು ಪ್ರಯಾಣಿಕರು ಹೆಣಗಾಡುತ್ತಾರೆ. ಸುರಕ್ಷಿತ ವಾಹನ ಸಂಚಾರಕ್ಕೆ ಕಚ್ಚಾ ರಸ್ತೆ ಅಡಚಣೆಯಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕಾಮಗಾರಿ ನನೆಗುದಿಗೆ
“ಕಳೆದ ಎರಡ್ಮೂರು ತಿಂಗಳ ಹಿಂದೆ ರೈಲ್ವೆ ನಿಲ್ದಾಣ ಮಾರ್ಗದ ರಸ್ತೆ ಕಾಮಗಾರಿ ಆರಂಭವಾಗಿತ್ತು. ಆದರೆ ಆರಂಭವಾದಷ್ಟೇ ಬೇಗ ಸ್ಥಗಿತಗೊಂಡಿದೆ. ಏಕೆಂಬುದು ಗೊತ್ತಿಲ್ಲ. ಬೇಸಿಗೆ ಕಾಲದಲ್ಲಿ ಕಾಮಗಾರಿ ಚುರುಕಾಗಿ ಕೈಗೊಂಡು ಪೂರ್ಣಗೊಳಿಸಿದ್ದರೆ ಪ್ರಸಕ್ತ ಮಳೆಗಾಲದಲ್ಲಿ ಪ್ರಯಾಣಿಕರು ರೈಲ್ವೆ ನಿಲ್ದಾಣವನ್ನು ತಲುಪಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮತ್ತೆ ಕೆಸರು ರಸ್ತೆಯಲ್ಲಿ ಸಾಗಬೇಕಾಗುತ್ತದೆ” ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಅಂದಾಜು ಪತ್ರಿಕೆಯಂತೆ ಕೆಲಸ ನಡೆಯಲಿ’
“ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಈಗಾಗಲೇ ಒಂದು ಗಿಡಗಳಿದ್ದು, ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು. ಅಲ್ಲದೇ ರಸ್ತೆ ಬದಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆಯೊಂದಿಗೆ ಫುಟ್‌ಪಾತ್ ನಿರ್ಮಿಸಿದರೆ ಜಾಗ ಅತಿಕ್ರಮ ತಪ್ಪುತ್ತದೆ. ಬರುವ ದಿನಗಳ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳು ತಲೆಎತ್ತಿ ಸಾರ್ವಜನಿಕರು ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಂಭವ ಇದ್ದು, ಅಂದಾಜು ಪತ್ರಿಕೆಯಂತೆ ಕಾಮಗಾರಿ ನಿರ್ವಹಿಸಬೇಕು” ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.