(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 3
ಮಳೆನೀರು ನಿಂತು ರೈಲ್ವೆ ಸ್ಟೇಶನ್ ರಸ್ತೆ ರಾಡಿಮಯವಾಗಿದ್ದು, ಅಪ್ಪಿ-ತಪ್ಪಿ ಜಾರಿ ಬಿದ್ದರೆ ಮೈತುಂಬ ಕೆಸರು ಗ್ಯಾರಂಟಿ. ಅಧ್ವಾನ ರಸ್ತೆಯಲ್ಲಿ ಎದ್ದು-ಬಿದ್ದು ರೈಲ್ವೆ ಸ್ಟೇಶನ್ ತಲುಪಿ ರೈಲು ಹಿಡಿಯಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಭಾನುವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ರೈಲ್ವೆ ಸ್ಟೇಶನ್ ಸಂಪರ್ಕ ರಸ್ತೆಯ ತಗ್ಗು-ದಿನ್ನೆಗಳಲ್ಲಿ ಮಳೆ ನೀರು ಪಾದಚಾರಿಗಳು ನಡೆದಾಡಲು ಸಮಸ್ಯೆ ಎದುರಾಗಿದೆ.
ಈ ಮಾರ್ಗದಲ್ಲಿ ದ್ವಿಚಕ್ರವಾಹನ ಹಾಗೂ ಆಟೊ ಚಲಾಯಿಸಲು ಪ್ರಯಾಸಪಡಬೇಕಿದೆ ಮಳೆ ನೀರು ನಿಂತು ರಸ್ತೆ ರಾಡಿಮಯವಾದ ಕಾರಣ ಮೋಟರ್ ಸೈಕಲ್‌ಗಳು ಸ್ಕಿಡ್ ಆಗುತ್ತಿದ್ದು, ಆಟೋಗಳು ಪದೇ ಪದೆ ದುರಸ್ತಿಗೆ ಬರುತ್ತಿವೆ ಎಂದು ಸವಾರರು ದೂರುತ್ತಾರೆ.
ಎರಡೂವರೆ ತಿಂಗಳಾದರೂ ಒಳ್ಳೆ ರಸ್ತೆಯಿಲ್ಲ !
ಕಳೆದ ಮಾರ್ಚ್ 15 ರಂದು ತರಾತುರಿಯಲ್ಲಿ ರೈಲ್ವೆ ಸ್ಟೇಶನ್ ಉದ್ಘಾಟಿಸಲಾಗಿದೆ. 26 ವರ್ಷಗಳ ನಂತರ ಸಿಂಧನೂರು ನಗರಕ್ಕೆ ರೈಲ್ವೆ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಹರ್ಷದ ವಾತಾವರಣಕ್ಕೆ ಕಾರಣವಾಗಿತ್ತು. ಆದರೆ, ತಗ್ಗು-ದಿನ್ನೆಗಳಿಂದ ಕೂಡಿದ ಸಂಪರ್ಕ ರಸ್ತೆಯಲ್ಲಿ ದಿನವೂ ನಡೆದಾಡಿ ಪ್ರಯಾಣಿಕರು ಪ್ರಯಾಸಪಡುತ್ತಿದ್ದಾರೆ. ರೈಲು ಸಂಚಾರ ಸೌಲಭ್ಯಕ್ಕೆ ಇಪ್ಪತ್ತಾರು ವರ್ಷ ಬೇಕಾಯಿತು, ಈ ರಸ್ತೆ ನಿರ್ಮಾಣಕ್ಕೆ ಎಷ್ಟು ವರ್ಷ ಕಳೆಯಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
‘ಜಾರಿ ಬಿದ್ದು ಸ್ಟೇಶನ್ ಸೇರು’
ರೈಲ್ವೆ ಸ್ಟೇಶನ್ ಸಂಪರ್ಕ ರಸ್ತೆಯಲ್ಲಿ ಮಳೆ ನೀರು ನಿಂತು ಕೆಲವೆಡೆ ಹೊಂಡದ ರೂಪ ಪಡೆದರೆ, ಇನ್ನೂ ಕೆಲವೆಡೆ ರಾಡಿ ಹೆಚ್ಚಿ ನಡೆದಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಸುಕಿನ ಬೆಳಿಗ್ಗೆ ಸಮಯದಲ್ಲಿ 173304 ನಂಬರಿನ ರೈಲು ಸಿಂಧನೂರಿನಿಂದ ಹುಬ್ಬಳ್ಳಿಗೆ ಹೊರಡಲಿದ್ದು, 17303 ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ರಾತ್ರಿ 10.40 ಗಂಟೆಗೆ ತಲುಪಲಿದ್ದು, ರಾತ್ರಿ ಮತ್ತು ನಸುಕಿನ ಸಮಯದಲ್ಲಿ ಪ್ರಯಾಣಿಕರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ‘ಜಾರಿಬಿದ್ದು ರೈಲ್ವೆ ಸ್ಟೇಶನ್ ಸೇರು’ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಅಪಹಾಸ್ಯ ಮಾಡುತ್ತಿದ್ದಾರೆ.