ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 11
ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ಬಾಣಂತಿಯೊಬ್ಬರು ರಿಮ್ಸ್‌ನಲ್ಲಿ ದಾಖಲಾದ 8 ದಿನಗಳ ನಂತರ ಮೃತಪಟ್ಟಿರುವ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದೊಂದಿಗೆ ಬಾಣಂತಿಯರ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಈ ಸರಣಿ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಹಲವು ಅನುಮಾನುಗಳನ್ನು ಹುಟ್ಟುಹಾಕಿವೆ.
ಈಗಾಗಲೇ ಮೂವರು ಬಾಣಂತಿಯರು ಮೃತಪಟ್ಟು ನವಜಾತ ಶಿಶುಗಳು ಅನಾಥವಾಗಿರುವ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ಘಟಿಸಿದ್ದು, ಒಟ್ಟು ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ದಿನದಿಂದ ದಿನಕ್ಕೆ ಅಪನಂಬಿಕೆ ಹೆಚ್ಚುತ್ತಿದೆ.
ರಾಗಲಪರ್ವಿಯ ಬಾಣಂತಿ ಚನ್ನಮ್ಮ ಸಾವು
ತಾಲೂಕಿನ ರಾಗಲಪರ್ವಿ ಗ್ರಾಮದ ಚನ್ನಮ್ಮ ಗಂಡ ಬಸವರಾಜ (24) ಇವರನ್ನು ದಿನಾಂಕ: 21-10-2024 ರಂದು ಹೆರಿಗೆಗಾಗಿ ಸಿಂಧನೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಮಧ್ಯಾಹ್ನ ಚನ್ನಮ್ಮ ಅವರಿಗೆ ಹೆರಿಯಾಗಿತ್ತು. ಹೆರಿಗೆಯ ನಂತರ ಆರೋಗ್ಯವಾಗಿದ್ದ ಬಾಣಂತಿಗೆ ರಾತ್ರಿ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದು ಅಸ್ವಸ್ಥಗೊಂಡಿದ್ದಾರೆ. ತದನಂತರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ, ದಿನಾಂಕ: 22-10-2024ರಂದು ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ರಾಯಚೂರಿನ ರಿಮ್ಸ್ ಗೆ ದಾಖಲಾಗುವಂತೆ ಸಂಬಂಧಿಕರಿಗೆ ತಿಳಿಸಿದ್ದಾರೆ. ಚನ್ನಮ್ಮ ಅವರನ್ನು ದಿನಾಂಕ: 22-10-2024 ರಂದು ಆಂಬುಲೆನ್ಸ್ನ ಮೂಲಕ ತೆರಳಿ ಮಧ್ಯಾಹ್ನವೇ ರಿಮ್ಸ್ಗೆ ದಾಖಲಿಸಲಾಗಿದೆ. ತೀವ್ರನಿಗಾ ಘಟಕದಲ್ಲಿ ಚನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, 30-10-2024ರಂದು ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಮೃತಪಟ್ಟಿದ್ದಾರೆ. ಮಗು ಮಾತ್ರ ಆರೋಗ್ಯವಾಗಿದೆ.
“ರಾಯಚೂರಿಗೆ ಹೋದಾಕಿ ಒಳ್ಳಿ ಮನಿಗೆ ಬರ‍್ಲಿಲ್ರಿ”
“ 9 ತಿಂಗಳತನಕ ಚಲೋತ್ನಾಗಿ ತೋರಿಸ್ಕೆಂಡು ಬಂದೀವ್ರಿ. ಡಾಕ್ಟ್ರು ಏನೂ ಸಮಸ್ಯೆ ಇಲ್ಲ ಅಂತ ಹೇಳಿದ್ರು. ರೊಕ್ಕ ಇಲ್ಲದದಕ ಸರ್ಕಾರಿ ದವಾಖಾನ್ಯಾಗ ಹೆರಿಗೆ ಮಾಡಸದಕ ತೀರ್ಮಾನ ಮಾಡಿದ್ವಿ. ಅಕ್ಟೋಬರ್ 21ನೇ ತಾರೀಖು ಹೆರಿಗೆ ಆತು. ಹೆಣ್ತಿ, ಮಗಳು ಚೆನ್ನಾಗೇ ಇದ್ರು. ಬರಬರತಾ ರಾತ್ರಿ ಸಮಸ್ಯೆ ಆಯ್ತು. ಮುಂಜಾಲೇ ಡಾಕ್ಟ್ರು ಬಂದು ಬಿಪಿ ಹೆಚ್ಚಾಗೇತಿ, ನೀವು ರಾಯಚೂರಿಗೆ ಅರ್ಜೆಂಟ್ ಹೋಗ್ಬೇಕು ಅಂತ ಹೇಳಿದ್ರು, ಅಂಬುಲೆನ್ಸ್‌ನ್ಯಾಗ ರಿಮ್ಸ್‌ಗೆ ಹೋದ್ವಿ ರ‍್ರೀ. ಅಂಬುಲೆನ್ಸ್‌ನ್ಯಾಗ ಚೇಲೋ ಮಾತಾಡಿದ್ಲು, ಅಲ್ಲಿಗೋದ ಮ್ಯಾಲೆ ಐಸಿಯುನ್ಯಾಗ ಇಟ್ಟಿದ್ರು. ಅಲ್ಲೀತನ ಅಲ್ಲೇ ಇದ್ವಿ, ಆಮ್ಯಾಲೇ 30ನೇ ತಾರೀಖು ಡಾಕ್ಟ್ರು ಬಂದು ನಾವು ಚಿಕಿತ್ಸೆ ಕೊಡೊಷ್ಟು ಕೊಟ್ವಿ ನಿಮ್ಮ ಹೆಣ್ತಿ ಉಳಿಲಿಲ್ಲ ಅಂದ್ರು” ಎಂದು ಮೃತ ಬಾಣಂತಿ ರಾಗಲಪರ್ವಿಯ ಚನ್ನಮ್ಮ ಅವರ ಪತಿ ಬಸವರಾಜ ನಾಯಕ ಅವರು ಕಣ್ಣೀರಾದರು.
‘ಬೆಂಗಳೂರಿಗೆ ಹೋಗಿ ದುಡಿದೇ ಬದಕಬೇಕ್ರಿ ನಾವು, ಅಲ್ಲಿಂದ ದುಡಕಂದು ಬಂದು ಊರಾಗ ಜೀವನ ನಡಸ್ತೀವಿ. ನಮ್ಮ ಹೆಣ್ಮಕ್ಕಳು ಹೆರಿಗೆ ಇದ್ದದಕ ಇಲ್ಲೇ ಬಿಟ್ಟಿದ್ಯ, ನಾನು ಈಗ ಬೆಂಗಳೂರಿನ್ಯಾಗ ಅದೀನಿ, ನನ್ನ ಮಗಳನ್ನ ಅವರ ಅಜ್ಜಿ ಮನ್ಯಾಗ ಬಿಟ್ಟ ಬಂದೀನಿ. ಹೆಣ್ತಿ ಅಂತ ಹೋದ್ಲು, ಮಕ್ಕಳಿಗೆ ದಿಕ್ಕು ಯಾರು ಅಂಬೋದು ನೆನಸಿಕೆಂಡ್ರ ಕಣ್ತುಂಬಿ ಬರ್ತೈತಿ . ಮೊದಲನೇ ಮಗಳು, ಎರಡನೇ ಮಗಳು ಇಬ್ರೂ ಅನಾಥ ಆಗ್ಯಾರ. ಮೊದಲನೇ ಹೆರಿಗೆ ಪ್ರೈವೇಟ್ ದವಾಖಾನ್ಯಾಗ ಮಾಡಿಸಿದ್ವಿ ಸರಿಗೆ ಆಗಿತ್ತು, ಎರಡನೇ ಹೆರಿಗೆ ಸರ್ಕಾರಿ ಆಸ್ಪತ್ರಗೆ ಬಂದಿದ್ದೆ ಫಲ್ಟ್ ಆತಿ ನೋಡ್ರಿ” ಎಂದು ಬಸವರಾಜ ನಾಯಕ ಅಳಲು ತೋಡಿಕೊಂಡರು.
ನಾಲ್ಕು ನವಜಾತ ಶಿಶುಗಳು ಅನಾಥ !
ನಾಲ್ವರು ಬಾಣಂತಿಯರು ಮೃತಪಟ್ಟಿದ್ದು, ನಾಲ್ಕು ನವಜಾತ ಶಿಶುಗಳು ಅನಾಥವಾಗಿವೆ. ಈ ಶಿಶುಗಳನ್ನು ಮೃತ ಬಾಣಂತಿಯರ ಸಂಬAಧಿಗಳು ಪೋಷಣೆ ಮಾಡುತ್ತಿದ್ದಾರೆ. ಆಗಾಗ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಲಾಗುತ್ತಿದೆ. “ಮೃತ ಬಾಣಂತಿಯ ಮನೆಯವರೊಬ್ಬರು ಅತ್ಯಂತ ಬಡ ಕುಟುಂಬದವರಾಗಿದ್ದು, ನವಜಾತ ಶಿಶುವಿನ ಆರೋಗ್ಯದಲ್ಲಿ ಏನಾದರು ಸಮಸ್ಯೆಯಾದರೆ ಚಿಕಿತ್ಸೆ ಕೊಡಿಸಲು ಅವರ ಬಳಿ ದುಡ್ಡಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಈತರಹದ ಘಟನೆಯಾಗಿದ್ದರಿಂದ ಅವರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಗುವನ್ನು ಕರೆದುಕೊಂಡು ಹೋಗಲು ಹೆದರುತ್ತಿದ್ದಾರೆ. ಕೂಡಲೇ ಸರ್ಕಾರ, ಜಿಲ್ಲಾಡಳಿತ ನವಜಾತ ಶಿಶುಗಳ ಆರೋಗ್ಯ ರಕ್ಷಣೆಯ ಹೊಣೆ ಹೊತ್ತುಕೊಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕು” ಎಂದು ನಮ್ಮ ಕರ್ನಾಟಕ ಸಂಘಟನೆಯ ಮಂಜುನಾಥ ಗಾಣಗೇರ ಆಗ್ರಹಿಸುತ್ತಾರೆ.
ನಾಲ್ವರು ಬಾಣಂತಿಯರು ಸಾವು
ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಮೌಸಂಬಿ ಮಂಡಲ್ ಮಹೇಶ್ವರ ಮಂಡಲ್, ಉದ್ಬಾಳ್.ಜೆ.ಗ್ರಾಮದ ಚಂದ್ರಕಲಾ, ರಾಗಲಪರ್ವಿಯ ಚನ್ನಮ್ಮ ಬಸವರಾಜ ಹಾಗೂ ಅಂಕುಶದೊಡ್ಡಿಯ ರೇಣುಕಮ್ಮ ಬಸವರಾಜ ಒಟ್ಟು ನಾಲ್ವರು ಬಾಣಂತಿಯರು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.
ಸಿಂಧನೂರು ತಾಲೂಕಿನಿಂದ 7 ಪ್ರಕರಣ ವರದಿ ?
ಸಿಂಧನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ 7 ಬಾಣಂತಿಯರು ಅಸ್ವಸ್ಥಗೊಂಡಿದ್ದಾರೆAದು ಹೇಳಲಾಗುತ್ತಿದ್ದು, ಅದರಲ್ಲಿ 4 ಬಾಣಂತಿಯರು ಮೃತಪಟ್ಟಿದ್ದಾರೆ. ಇನ್ನೂ ಮೂವರು ಚೇತರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ದಿನಾಂಕ: 21-10-2024ರಿಂದ ದಿನಾಂಕ: 02-11-2024ರ ಒಳಗೆ ಒಟ್ಟು ನಾಲ್ವರು ಬಾಣಂತಿಯರ ಸಾವಿನ ಪ್ರಕರಣಗಳು ನಡೆದಿವೆ. ಈ ಎಲ್ಲಾ ಪ್ರಕರಣಗಳನ್ನು ಕೂಲಂಕುಷವಾಗಿ ಗಮನಿಸಿದಾಗ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ಬಾಣಂತಿಯರು ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ಗೆ ದಾಖಲಾಗಿದ್ದಾರೆ. ರಿಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವಲ್ಲಿ ವಿಫಲ: ಆರೋಪ
“ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾಗುವ ಮುಂಚೆಯೇ ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಕ್ಟೋಬರ್ 21ರಿಂದ 02-11-2024ರ ಒಳಗಾಗಿ ನಾಲ್ವರು ಮಹಿಳೆಯರ ಸಾವಿನ ಪ್ರಕರಣಗಳ ಘಟಿಸಿದ್ದರೂ ಸರ್ಕಾರ, ಜಿಲ್ಲಾಡಳಿತವಾಗಲೀ, ಚುನಾಯಿತ ಜನಪ್ರತಿದಿಗಳಾಗಲೀ ಗಂಭೀರವಾಗಿ ಪರಿಗಣಿಸದೇ ಹೋದದ್ದೇ ರಾಜ್ಯಾದ್ಯಂತ ಇನ್ನಷ್ಟು ಅವಘಡಗಳು ಉಂಟಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ನಡುವೆ 21-10-2024ರಂದು ಮೊದಲ ಪ್ರಕರಣ ವರದಿಯಾಗುತ್ತದೆ. 02-11-2024ರೊಳಗೆ ಒಟ್ಟು 7 ಪ್ರಕರಣಗಳಲ್ಲಿ 4 ಬಾಣಂತಿಯರು ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಅವಘಡಗಳು ಸಂಭವಿಸಿದರೂ ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿಕಾರಿಗಳಾಗಲೀ, ಚುನಾಯಿತ ಜನಪ್ರತಿನಿಧಿಗಳಾಗಲೀ ಸಂತ್ರಸ್ರರ ಮನೆಗೆ ಭೇಟಿ ನೀಡಿಲ್ಲ” ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ದೂರುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಬಂದದ್ದು, ಪ್ರಕರಣ ವರದಿಯಾಗಿ 1 ತಿಂಗಳ ನಂತರ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಹೆರಿಯಾದ ನಂತರ ಅಸ್ವಸ್ಥಗೊಂಡ ಮಹಿಳೆಯರು ರಿಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟು 1 ತಿಂಗಳು 6 ದಿನದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಸಿಂಧನೂರು ತಾಲೂಕು ಆಸ್ಪತ್ರೆಗೆ ಅಂದರೆ ದಿನಾಂಕ: 08-12-2024ರಂದು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನರ ಬಗೆಗೆ ಇರುವ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಿಪಿಐ(ಎಂಎಲ್) ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಅವರು ಆರೋಪಿಸುತ್ತಾರೆ.