ನಮ್ಮ ಸಿಂಧನೂರು, ಜುಲೈ 8
ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ವಾಪಸ್ ಪಡೆಯುವಂತೆ ಟ್ರೇಡ್ ಇಂಡಿಯನ್ ಸೆಂಟರ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಸಿಎಂ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ರದ್ದುಮಾಡುವ ನಿರ್ಧಾರ ಕಂಡುಬಂದಿದೆ. ಇದು ದಲಿತ ಸಮುದಾಯವೇ ಕಳವಳಪಡುವಂತಹ ಕೆಟ್ಟ ನಿರ್ಧಾರವಾಗಿದೆ. ಏಕೆಂದರೆ, ಎಸ್ಸಿ ಹಾಗೂ ಎಸ್ಟಿ ಸಮುದಾಯಗಳೆಂದೂ ತಮ್ಮಿಂದ ಇಂತಹ ತಾರತಮ್ಯದ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಸರ್ಕಾರದ ನಿರ್ಧಾರಕ್ಕೆ ಪ್ರಕಟಣೆ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನುಡಿದಂತೆ ನಡೆದಿದ್ದೇವೆಂದು ಮಾತು ತಪ್ಪಿದಿರಿ ಯಾಕೆ ?
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆಂದು ವಿಶೇಷ ಸಾಮಾಜಿಕ ಅನುದಾನವನ್ನು (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ) ಬಹುಕಾಲದಿಂದ ಕೊಡುತ್ತ ಬರಲಾಗಿದೆ. ಇದು ಈ ಸಮುದಾಯಗಳ ಸಂವಿಧಾನಾತ್ಮಕ ಹಕ್ಕು ಕೂಡ ಆಗಿದೆ. ಆದರೆ ಈ ಸಾಲಿನಲ್ಲಿ ಈ ಯೋಜನೆಗೆಂದು ತಮ್ಮ ಸರಕಾರವೇ 39,121 ಕೋಟಿ ಹಣವನ್ನು ತೆಗೆದಿರಿಸಿದೆ. ಆದರೆ, ಇತರರಂತೆ ನಿಮ್ಮ ಸರಕಾರದ 5 ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಈ ಸಮುದಾಯಗಳು ಮಾತ್ರ ತಮ್ಮ ವಿಶೇಷ ಅನುದಾನದಲ್ಲಿ 14,282 ಕೋಟಿ ರೂಪಾಯಿ ಕಳೆದುಕೊಳ್ಳದೇ ಬೇರೆ ದಾರಿ ಇಲ್ಲಾ ಎಂದು ನೀವೇ ನಿರೂಪಿಸಿ ತೋರಿಸಿದಂತಾಗಿದೆ. ಇದು ನ್ಯಾಯವೇ? ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯಿಂದ ಕತ್ತರಿಸಿದ ಹಣದಲ್ಲಿ ಇವರು ಗ್ಯಾರಂಟಿ ಗಿರಾಕಿಗಳಾಗಲಿಲ್ಲವೇ ? ಅಷ್ಟಕ್ಕೂ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗಳು ಈ ಸಮುದಾಯಗಳಿಗೆ ಕಾಯ್ದಿರಿಸಿದ ವಿಶೇಷ ಯೋಜನಾನುದಾನಗಳು ಎಂಬುವುದನ್ನು ಮರೆತು ಬಿಟ್ಟಿರಾ ಎಂದು ಅವರು ಪ್ರಶ್ನಿಸಿದ್ದಾರೆ.
ದಲಿತರ ಹಣದಿಂದ ದಲಿತರಿಗೆ ಗ್ಯಾರಂಟಿ ಯೋಜನೆಗಳ ಮಾರಾಟ ?
ಅಂದರೆ ದಲಿತರಿಗೆ ಗ್ಯಾರಂಟಿಗಳು ಉಚಿತ ಯೋಜನೆಗಳಲ್ಲ ಎಂದಾಯಿತು. ಅವರ ಅನುದಾನದಿಂದ ಹಣ ತೆಗೆದುಕೊಂಡು ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಮಾರಾಟ ಮಾಡಿದಂತಾಯಿತು ! ಹಾಗಾಗಿ, ತಮ್ಮ ಸರಕಾರದ ಈ ನಿರ್ಧಾರವು ಸಾಮಾಜಿಕ ಮೀಸಲಾತಿಯಿಂದ ದೂರ ಹಾಗೂ ಆರ್ಥಿಕ ಮೀಸಲಾತಿಗೆ ಹತ್ತಿರವಾಗಿದೆ. ಆರ್‌ಎಸ್‌ಎಸ್‌ಗೂ ಅತ್ಯಂತ ಆಪ್ತವಾಗಿದೆ. ನುಡಿಗೆ ನೂರು ಬಾರಿ ನೀವೇ ಹೇಳಿದ್ದೀರಿ ನುಡಿದಂತೆ ನಡೆದ ಸರಕಾರ ನಿಮ್ಮದೆಂದು ! ಇದನ್ನು ನೀವು ಮರೆಯಬಹುದೇ ? ಎಸ್ಸಿ ಎಸ್ಟಿ ಗಳಿಗೆ ಅನುದಾನದ ಹಣದಲ್ಲಿ ಗ್ಯಾರಂಟಿ ; ಇತರರಿಗೆ ಉಚಿತ ಅಂದರೆ ಹೇಗೆ ? ಹಾಗಾಗಿ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾವು ತಮ್ಮ ಸರಕಾರದ ಈ ನಿರ್ಧಾರವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಮತ್ತು ಕೂಡಲೇ ಸಂಪುಟದ ನಿರ್ಧಾರವನ್ನು ಕೈಬಿಟ್ಟು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಉದ್ದೇಶಿತ ಯೋಜನೆಗಳಿಗೆ ಮಾತ್ರ ಬಳಸಬೇಕೆಂದು ಮಾನಸಯ್ಯ ಅವರು ಒತ್ತಾಯಿಸಿದ್ದಾರೆ.