ಸಿಂಧನೂರು: ನಗರಸಭೆಗೆ 55 ದಿನಗಳಲ್ಲಿ ಕೆರೆ ತುಂಬಿಸಿಕೊಳ್ಳಬೇಕಾದ ಒತ್ತಡ

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 14

ಬೇಸಿಗೆಯಲ್ಲಿ ಸಿಂಧನೂರು ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಮುಂಜಾಗ್ರತೆ ವಹಿಸಬೇಕಾದರೆ, ನಗರಸಭೆ ಇನ್ನೇನು 55 ದಿನಗಳಲ್ಲಿ ಶತಪ್ರಯತ್ನ ಮಾಡಿ ತನ್ನೆಲ್ಲಾ ಕೆರೆಗಳನ್ನು ತುಂಬಿಸಿಕೊಳ್ಳಬೇಕಿದೆ.
ಕುಷ್ಟಗಿ ಮಾರ್ಗದ ಭಗೀರಥ ಉದ್ಯಾನದಲ್ಲಿರುವ ದೊಡ್ಡ ಕೆರೆ, ಅದರ ಪಕ್ಕದಲ್ಲಿರುವ ಸಣ್ಣ ಕೆರೆ ಹಾಗೂ ತುರ್ವಿಹಾಳ ಪಟ್ಟಣದ ಬಳಿಯಿರುವ ದೊಡ್ಡ ಕೆರೆಯಲ್ಲಿ ನಗರದ ಜನಸಂಖ್ಯೆಗೆ ಅನುಗುಣವಾಗಿ ನೀರು ಸಂಗ್ರಹಿಸಿಕೊಂಡರೆ, ಬರಲಿರುವ ಬೇಸಿಗೆಯಲ್ಲಿ ನೀರಿನ ಅಭಾವ ಕೊಂಚ ತಗ್ಗಲಿದೆ. ಇಲ್ಲದೇ ಹೋದರೆ ಕಳೆದ ಬಾರಿಯಂತೆ ಸಮಸ್ಯೆ ಜಠಿಲಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಳೆದ ವರ್ಷ ನೀರಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ 16-05-2024ರಂದು ನಗರಸಭೆ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ ನಗರ ನಿವಾಸಿಗಳಲ್ಲಿ ಮನವಿ ಮಾಡಿತ್ತು. ಬರಗಾಲದ ಕಾರಣದಿಂದಾಗಿ ತುಂಗಭದ್ರಾ ಡ್ಯಾಂನಲ್ಲಿ ಹೋದ ವರ್ಷ ನೀರು ಸಂಗ್ರಹ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ, ಎಡದಂಡೆ ಮುಖ್ಯ ನಾಲೆಗೆ ಕೇವಲ ಒಂದೇ ಹಂಗಾಮಿಗೆ ನೀರು ಹರಿಸಿದ್ದರಿಂದ, ಸಿಂಧನೂರಿನ ಕೆರೆಗಳಲ್ಲಿ ನೀರಿನ ಪ್ರಮಾಣ ಪಾತಾಳಕ್ಕಿಳಿದು, ತೀವ್ರ ಅಭಾವ ಉಂಟಾಗಿತ್ತು. ನಗರಸಭೆ ಪ್ರಕಟಣೆ ಹೊರಡಿಸಿದಂತೆ ಕೆಲವೊಂದು ವಾರ್ಡ್ಗಳಲ್ಲಿ 10 ದಿನಕ್ಕೊಮ್ಮೆಯೂ ನೀರು ಬರದೇ ಇದ್ದಾಗ ವಿವಿಧ ವಾರ್ಡ್ಗಳ ಜನರು ನಗರಾಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಜೂನ್ 6, 2024ರಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.

Namma Sindhanuru Click For Breaking & Local News
ಸಿಂಧನೂರಿನ ಸಣ್ಣ ಕೆರೆಯ ನೋಟ.
Namma Sindhanuru Click For Breaking & Local News

3 ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ
ತುರ್ವಿಹಾಳ ಪಟ್ಟಣದ ಬಳಿಯ ಕೆರೆ 2100 ಎಂಎಲ್‌ಡಿ, ಸಿಂಧನೂರಿನ ದೊಡ್ಡ ಕೆರೆ 340 ಎಂಎಲ್‌ಡಿ ಹಾಗೂ ಸಣ್ಣ ಕೆರೆ 77.18 ಎಂಎಲ್‌ಡಿ ಒಟ್ಟು 2517.68 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಈ ಮೂರು ಕೆರೆಗಳೇ ಸಿಂಧನೂರು ನಗರದ 31 ವಾರ್ಡ್ಗಳ ನಿವಾಸಿಗಳಿಗೆ ಆಧಾರವಾಗಿದ್ದು, ಬೇಸಿಗೆ ಮುನ್ನವೇ ಈ ಕೆರೆಗಳನ್ನು ತುಂಬಿಸಿಕೊಳ್ಳಬೇಕಾದ ಹೊಣೆಗಾರಿಕೆ ನಗರಸಭೆ ಮೇಲಿದೆ. (1 ಎಂಎಲ್‌ಡಿ =10 ಲಕ್ಷ ಲೀಟರ್)
ಎಡದಂಡೆ ಕಾಲುವೆಯಲ್ಲಿ ನೀರಿನ ಹರಿವು ಎಲ್ಲಿಯವರೆಗೆ ?
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನವರಿ 1 ರಿಂದ ಮಾರ್ಚ್ 31ರವರೆಗೆ 3800 ಕ್ಯುಸೆಕ್‌ನಂತೆ ನೀರು ಹರಿಯಲಿದೆ. ಕುಡಿಯುವ ನೀರಿಗಾಗಿ ಏ.1ರಿಂದ 10ನೇ ತಾರೀಖಿನ ವರೆಗೆ ನಿತ್ಯ 1650 ಕ್ಯೂಸೆಕ್ ನೀರು ಹರಿಸಲಾಗುವುದೆಂದು ನವೆಂಬರ್ 21, 2024ರಲ್ಲಿ ಬೆಂಗಳೂರಿನಲ್ಲಿ ನಡೆದ 122ನೇ ನೀರು ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ಚರ್ಚಿಸಿ ನಿರ್ಧರಿಸಲಾಗಿದೆ. ಹಾಗಾಗಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಮಾರ್ಚ್ 31, 2025ರವರೆಗೆ ಭತ್ತದ ಬೆಳೆಗಾಗಿ ನೀರು ಹರಿಸಿದರೆ, ಆನಂತರ ವಿಶೇಷವಾಗಿ 10 ದಿನಗಳ ಕಾಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಸಲಾಗುತ್ತದೆ.
‘ಕಳೆದ ಬಾರಿ ನೀರಿಲ್ಲದೇ ನಿರ್ಲಕ್ಷ್ಯ , ಈ ಬಾರಿ ನಿರಿದ್ದೂ ನಿರ್ಲಕ್ಷ್ಯ’
ಕಳೆದ ಬಾರಿ ಬರಗಾಲದಿಂದಾಗಿ ಡ್ಯಾಂನಲ್ಲಿ ನೀರಿನ ಪ್ರಮಾಣ ಕುಸಿದು, ಎಡದಂಡೆ ಮುಖ್ಯ ನಾಲೆಗೆ ಬೇಸಿಗೆಯಲ್ಲಿ ನೀರು ಹರಿಸದ ಕಾರಣ ನೀರಿನ ಅಭಾವ ಉಂಟಾಗಿದೆ ಎಂದು ಹೇಳಿ ತಮ್ಮ ನಿರ್ಲಕ್ಷ್ಯವನ್ನು ಮರೆಮಾಚಿ ನಗರಸಭೆಯವರು ನುಣುಚಿಕೊಂಡಿದ್ದರು. ಆದರೆ ಈ ಬಾರಿ ಡ್ಯಾಂನಲ್ಲಿ ನೀರಿದೆ ಎಂದು ನಿರ್ಲಕ್ಷ್ಯ ವಹಿಸಿದ್ದಾರೆ. 55 ದಿನಗಳಲ್ಲಿ ತುರ್ವಿಹಾಳ ಕೆರೆ, ಸಿಂಧನೂರಿನ ದೊಡ್ಡ ಕೆರೆ ಹಾಗೂ ಸಣ್ಣ ಕೆರೆ ತುಂಬಿಸುತ್ತಾರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ನಗರದ ವಾರ್ಡ್ನ ನಾಗರಿಕರೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ.
‘ಕುಡಿಯುವ ನೀರಿನ ಸಭೆ ಇನ್ನೂ ನಡೆದಿಲ್ಲ’
ಫೆಬ್ರವರಿಯಲ್ಲೇ ಬಿಸಿಲು ವಿಪರೀತವಾಗಿದ್ದು ಇನ್ನೂ ಮಾರ್ಚ್‌ನಲ್ಲಿ ಪರಿಸ್ಥಿತಿ ಹೇಗಿದೆಯೋ ಎಂಬ ಬಗ್ಗೆ ಸಾರ್ವಜನಿಕರು ಆತಂಕಿತರಾಗಿದ್ದಾರೆ. ಆದರೆ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮದ ಭಾಗವಾಗಿ ನಗರಸಭೆಯಲ್ಲಿ ಇಲ್ಲಿಯವರೆಗೂ ಸಭೆ ನಡೆದಿಲ್ಲ, ಈಗಾದರೆ ಬೇಸಿಗೆಯಲ್ಲಿ ನೀರಿನ ನಿರ್ವಹಣೆಗೆ ಹೇಗೆಂಬ ಆತಂಕ ಆತಂಕ ಕಾಡುತ್ತಿದೆ. ಆದಷ್ಟು ಬೇಗ ಕುಡಿಯುವ ನೀರಿನ ಕುರಿತಾದ ಸಾಮಾನ್ಯ ಸಭೆ ನಡೆದು ಬೇಸಿಗೆಯಲ್ಲಿ ನೀರಿನ ನಿರ್ವಹಣೆಗೆ ಈಗಿನಿಂದಲೇ ನಗರಸಭೆ ಕಾರ್ಯಯೋಜನೆ ಹಾಕಿಕೊಳ್ಳಬೇಕು. ಪರಿಸ್ಥಿತಿ ಕೈಮೀರಿದ ಮೇಲೆ ಎಚ್ಚೆತ್ತುಕೊಂಡರೆ ಉಪಯೋಗವಿಲ್ಲ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
‘ದೊಡ್ಡ ಕೆರೆಯಲ್ಲಿ 4 ಮೀಟರ್ ನೀರು ಸಂಗ್ರಹ’
ಭಗೀರಥ ಉದ್ಯಾನದಲ್ಲಿರುವ ಕುಡಿಯುವ ನೀರಿನ ದೊಡ್ಡ ಕೆರೆಯಲ್ಲಿ ಈಗಾಗಲೇ ಅಂದಾಜು 4 ಮೀಟರ್ ನೀರು ಸಂಗ್ರಹಿಸಲಾಗಿದೆ. ಬಲಭಾಗದಲ್ಲಿ ಬಿರುಕು ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲಾಗಿಲ್ಲ. ರಿಪೇರಿಗಾಗಿ ಬೆಂಗಳೂರಿನ ಕಂಪನಿಯೊಂದಕ್ಕೆ ಟೆಂಡರ್ ಆಗಿದೆ ಎಂದು ಹೇಳಲಾಗಿತ್ತು, ರಿಪೇರಿ ಉದ್ದೇಶಕ್ಕಾಗಿ ಕೆಲ ದಿನಗಳ ಹಿಂದೆ ಕೆರೆಯ ನೀರನ್ನು ಖಾಲಿ ಮಾಡಲಾಗಿತ್ತು, ಆದರೆ ಟೆಂಡರ್‌ದಾರರು ರಿಪೇರಿ ಕೆಲಸ ಆರಂಭಕ್ಕೆ ವಿಳಂಬಮಾಡಿದ್ದರಿಂದ ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಿರಲಿ ಎಂದು ಪುನಃ ನೀರು ಸಂಗ್ರಹಿಸಲಾಗುತ್ತಿದೆ. ಇನ್ನೂ ಸಣ್ಣ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದು, ಆ ಎಲ್ಲ ನೀರನ್ನು ಖಾಲಿ ಮಾಡಿ ಗಟ್ಟಿ ಸುಣ್ಣವನ್ನು ತಳದಲ್ಲಿ ಹಾಕಿ ಆದಷ್ಟು ಬೇಗ ಹೊಸ ನೀರನ್ನು ಸಂಗ್ರಹಿಸಲಾಗುವುದು ಎಂಬ ಮಾಹಿತಿ ತಿಳಿದುಬಂತು.
ಇನ್ನೂ ತುರ್ವಿಹಾಳ ಪಟ್ಟಣದ ಸಮೀಪದಲ್ಲಿರುವ ದೊಡ್ಡ ಕೆರೆಯಲ್ಲಿ ಬಹಳಷ್ಟು ಪ್ರಮಾಣದ ನೀರು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕೆರೆಯು ಸಮತಟ್ಟಾಗಿರದ ಕಾರಣ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತಿಲ್ಲ, ಅರೆಬರೆ ಸಂಗ್ರಹದಿಂದ ಕೆರೆ ಬೇಗನೆ ಖಾಲಿಯಾಗುತ್ತಿದ್ದು, ಹುದುಲು ಜಾಸ್ತಿಯಾಗಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟು 259 ಕೆರೆ ಸಮಗ್ರವಾಗಿ ನಿರ್ಮಿಸುವ ದೃಷ್ಟಿಯಿಂದ 40 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನನೆಗುದಿ ಬಿದ್ದಿರುವುದು ತೊಡಕಾಗಿ ಪರಿಣಮಿಸಿದೆ.
259 ಎಕರೆ ಕೆರೆ ಕಾಮಗಾರಿ ಎಲ್ಲಿಗೆ ಬಂತು ?
ತುರ್ವಿಹಾಳ ಪಟ್ಟಣದ ಸಮೀಪದಲ್ಲಿ 259 ಎಕರೆ ಜಮೀನಿನಲ್ಲಿ ಈಗಾಗಲೇ 50 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದಲ್ಲಿ 110 ಎಕರೆಯಲ್ಲಿ ಕೆರೆ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಕೆರೆ ನಿರ್ಮಿಸಲು 40 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಹೇಳಲಾಗುತ್ತಿದ್ದು, ಆದರೆ ಕಾಮಗಾರಿ ಆರಂಭದ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ನಡುವೆ ಸಿಂಧನೂರಿನ 31 ವಾರ್ಡ್ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸಗಳು ನಡೆಯುತ್ತಿಲ್ಲ. ಕೇವಲ ಕಾಲಹರಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
1 ಕೋಟಿ ರೂಪಾಯಿ ಕೆಲಸ ?
ಕಳೆದ ವರ್ಷ ಮೇ ತಿಂಗಳಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಸಾರ್ವಜನಿಕರೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ತುರ್ವಿಹಾಳ ಕೆರೆಯಲ್ಲಿ ನೀರು ಸಂಗ್ರಹಿಸಲು ಹಾಗೂ ಕೆಲವೊಂದು ತಾತ್ಕಾಲಿಕ ಕೆಲಸ ಕಾರ್ಯಗಳಿಗೆ 1 ಕೋಟಿ ರೂಪಾಯಿ ವ್ಯಯಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಭರವಸೆ ನೀಡಿದ್ದರು. ಆ ನಂತರ ತುರ್ವಿಹಾಳ ಕೆರೆಯಲ್ಲಿ ನೀರು ಸಂಗ್ರಹಕ್ಕೆ ಏನೇನು ಕೆಲಸಗಳಾಗಿವೆಯೇ ತಿಳಿದಿಲ್ಲ. ಈ ನಡುವೆ ಮತ್ತೊಮ್ಮೆ ಬೇಸಿಗೆ ಬಂದಿದೆ ಈ ಸಲ ಏನು ಹೇಳುತ್ತಾರೋ ನೋಡಬೇಕು ಎಂದು ವಾರ್ಡ್ ನಿವಾಸಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಶುದ್ಧ ನೀರು ಪೂರೈಕೆ ಆದ್ಯತೆಯಾಗಲಿ’
ಬೇಸಿಗೆಯಲ್ಲಿ ನಗರಸಭೆಯವರು ಶುದ್ಧ ಕುಡಿವ ನೀರಿನ ಪೂರೈಕೆ ಬಗ್ಗೆ ಗಮನ ಕೇಂದ್ರೀಕರಿಸಬೇಕು. ನಿಗದಿತ ಸಮಯಕ್ಕೆ ರಾಸಾಯನಿಕಗಳ ಮಿಶ್ರಣ, ಆಯಾ ದಿನಗಳಲ್ಲಿ ನೀರಿನ ಪರೀಕ್ಷೆ, ನೀರು ಸಂಗ್ರಹಣಾಗಾರಗಳ ಸ್ವಚ್ಛತೆ, ತಾಂತ್ರಿಕ ವಸ್ತುಗಳ ಸ್ವಚ್ಛತೆ-ರಿಪೇರಿ, ಅಲ್ಲಲ್ಲಿ ಒಡೆದು ನೀರು ಪೋಲಾಗುವ ಪೈಪ್‌ಲೈನ್‌ಗಳನ್ನು ಈಗಲೇ ಗುರುತಿಸಿ ಆದಷ್ಟು ಬೇಗ ದುರಸ್ತಿಗೊಳಿಸುವುದು, ಸಿಬ್ಬಂದಿಗೆ ತರಬೇತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ಮತ್ತು ಜನಾರೋಗ್ಯದ ದೃಷ್ಟಿಯಿಂದ ನೀರು ಪೂರೈಕೆ ಮಾಡುವುದು ನಗರಸಭೆ ಆದ್ಯತೆಯಾಗಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *