ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 23
ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಶಕ್ತಿ ಕೇಂದ್ರ, ಪ್ರಸಿದ್ಧ ಅಧ್ಯಾತ್ಮ ತಾಣ ತಾಲೂಕಿನ ಸೋಮಲಾಪುರ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. 02-01-2026ರಂದು ವಿಧ್ಯುಕ್ತವಾಗಿ ಆರಂಭಗೊಳ್ಳುವ ಜಾತ್ರಾ ಮಹೋತ್ಸವ ಜನವರಿ 06-01-2026ರವರೆಗೆ ವಿವಿಧ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.
ಜ.2ರಂದು ಜಾತ್ರೆಗೆ ಅದ್ಧೂರಿ ಚಾಲನೆ
ಜನವರಿ 2ರಂದು ಹರ-ಗುರು-ಚರಮೂರ್ತಿಗಳ ಸಮ್ಮುಖದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತರನ್ನು ಪರಿಗಣಿಸಿ ಮೂಲ ಸೌಕರ್ಯ ಸೇರಿದಂತೆ ಅಗತ್ಯ ಅನುಕೂಲಗಳನ್ನು ಕಲ್ಪಿಸಲು ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಕಾರ್ಯಪ್ರವೃತ್ತವಾಗಿವೆ.
ಜ.3ರಂದು ಮಹಾರಥೋತ್ಸವ
ಅಂಬಾದೇವಿ ರಥೋತ್ಸವಕ್ಕಾಗಿ ಮಹಾರಥಬೀದಿಯನ್ನು ನಿರ್ಮಿಸಲಾಗಿದೆ. ರಥೋತ್ಸವ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನರು ಆಗಮಿಸುವುದರಿಂದ ಜನದಟ್ಟಣೆಯಾಗದಿರಲಿ ಎಂದು ಬೃಹತ್ತಾದ ಮಹಾರಥಬೀದಿ ನಿರ್ಮಿಸಲಾಗಿದೆ. ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಅಂದ-ಚೆಂದ ಹೆಚ್ಚಿಸಲು ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆಡಳಿತದ ಮೂಲಗಳು ತಿಳಿಸಿವೆ.
ಚತುಷ್ಪಥ ರಸ್ತೆ, ಭಕ್ತರಿಗೆ ಮೂಲ ಸೌಕರ್ಯ
ವಾಹನ ಸುಗಮ ಸಂಚಾರಕ್ಕಾಗಿ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ.5 ಕಡೆ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, 600 ಹೊಸ ಅಂಗಡಿಗಳಿಗೆ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. 8 ಕಡೆ ಪಾರ್ಕಿಂಗ್, 100 ಕಡೆ ತಾತ್ಕಾಲಿಕ 125 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 8 ಕಡೆ ವಾಹನಗಳು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ, 100 ಕಡೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಮಹಿಳೆಯರಿಗೆ ವಿಶೇಷವಾಗಿ ಸ್ನಾನಾಗೃಹ ನಿರ್ಮಾಣ, 8 ಎಕರೆ ಪ್ರದೇಶದಲ್ಲಿ 600 ಅಂಗಡಿಗಳಿಗೆ ಅನುಕೂಲ, ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲಾಗಿದೆ.
ಸಚಿವ, ಶಾಸಕರ ದಂಡು
ಅಂಬಾದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಕ್ಕೆ ಈ ಬಾರಿ ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ ಖರ್ಗೆ, ಶಿವರಾಜ ಎಸ್.ತಂಗಡಗಿ, ಡಾ.ಶರಣಪ್ರಕಾಶ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಪ್ರಮುಖ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಜ.2ರಂದು ಜಾತ್ರಾ ಮಹೋತ್ಸವ ಆರಂಭ ದಿನದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ ಸರಿಗಮಪ ಖ್ಯಾತಿಯ ತಂಡದಿಂದ ಭಕ್ತಿಸ್ವರ ಕಾರ್ಯಕ್ರಮ ನಡೆಯಲಿದೆ. ಸಿರಿಗೆರೆ ತಂಡದಿಂದ ನಾಟಕ ನಡೆಯಲಿದೆ. ಜ.4ರಂದು ಕಡುಬಿನ ಕಾಳಗ ನಡೆಯಲಿದೆ. ಅಂದು ಸಂಜೆ ಹಾಸ್ಯಸಂಜೆ ಏರ್ಪಡಿಸಲಾಗಿದೆ. ಜ.5ರಂದು ಶಂಕರಣ್ಣ ಅವರ ತಂಡದಿಂದ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಜ.6ರಂದು ಸ್ಥಳೀಯ ಗಾಯಕರಿಂದ ಕರೋಕೆ ಗಾಯನ ಹಾಗೂ ನಾರಾಯಣಪ್ಪ ಮಾಡಸಿರವಾರ ತತ್ವಪದ ಗಾಯನ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಾಣಿ ಬಲಿ ನಿಷೇಧ
ಅಂಬಾದೇವಿ ದೇವಸ್ಥಾನ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಭಕ್ತರ ಸುರಕ್ಷತೆ, ಭದ್ರತೆ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ನಿಯೋಜನೆ ಸೇರಿದಂತೆ ಇನ್ನಿತರೆ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ.

