ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 23
ನಗರದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರವರ ಕಾರ್ಯಾಲಯ, ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಕಚೇರಿ ದಾರಿಯಲ್ಲಿ ಮಳೆ ಹಾಗೂ ಚರಂಡಿ ನೀರು ನಿಂತು ಸಾರ್ವಜನಿಕರು ಹೋಗಿ ಬರಲು ಸಮಸ್ಯೆಯಾಗಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಗೊತ್ತೇ ಇಲ್ಲದಂತಿದ್ದಾರೆ !
“ಜೆಡ್‌ಪಿ ಆಫೀಸಿನ ಮುಂದೆ ಮಳೆ ನೀರು ನಿಂತು ವಾರ ಆದ್ರೂ, ಅಧಿಕಾರಿಗಳು ಇದೇ ಗೊಜ್ಜಲದಲ್ಲಿ ಹೋಗಿ ಬರುತ್ತಾರೆ. ಕೆಲಸ ಕಾರ್ಯಗಳ ನಿಮಿತ್ತ ಜನರು ರಾಡಿ ನೀರಿನಲ್ಲೇ ಹೋಗಿಬರಬೇಕಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಆಪೀಸಿನ ದಾರಿ ದುಃಸ್ಥಿತಿಗೆ ತಲುಪಿದರೂ ನೋಡಿಯೂ ನೋಡದಂತೆ ವರ್ತಿಸುತ್ತ, ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇವರು ಗ್ರಾಮೀಣ ಪ್ರದೇಶಗಳ ಕಾಮಗಾರಿಗಳ ಬಗ್ಗೆ ಎಷ್ಟು ಕಾಳಜಿ ವಹಿಸಬಹುದು” ಎಂದು ನಾಗರಿಕರೊಬ್ಬರು ಆರೋಪಿಸುತ್ತಾರೆ.
‘ಮಳೆ ಬಂದಾಗ ಇದೇ ಪರಿಸ್ಥಿತಿ’
ಪ್ರತಿ ಬಾರಿ ಮಳೆ ಬಂದಾಗ ಜೆಡ್‌ಪಿ ಆಫೀಸಿನ ದಾರಿಗೆ ನೀರು ನಿಲ್ಲುತ್ತವೆ. ಇದರಿಂದ ಹೊಂಡವಾಗಿ ಮಾರ್ಪಟ್ಟು ನಡೆದಾಡಲು ಸಮಸ್ಯೆಯಾಗುತ್ತದೆ. ವಿಕಲಚೇತನರು, ವೃದ್ಧರು ಕಚೇರಿಗೆ ಹೋಗಲು ಆಗುವುದಿಲ್ಲ. ಇನ್ನೂ ವಯಸ್ಸಾದ ಅಧಿಕಾರಿಗಳು ಸಮಸ್ಯೆ ಅನುಭವಿಸುತ್ತಾರೆ. ಆದರೂ ಮರಂ ಹಾಕಿ ದುರಸ್ತಿಗೊಳಿಸುವ ಕೆಲಸ ನಡೆದಿಲ್ಲ. ಪಕ್ಕದ ಸರ್ಕಾರಿ ಆಸ್ಪತ್ರೆಯ ಚರಂಡಿಯ ನೀರು ಸುಗಮವಾಗಿ ಹರಿದುಹೋಗಲು ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.