ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 14
ಇಲ್ಲಿನ ಗಂಗಾನಗರ ವ್ಯಾಪ್ತಿಯ ವಿದ್ಯಾನಗರದಲ್ಲಿ ಪೈಪ್‌ಲೈನ್ ಲೀಕೇಜ್‌ನಿಂದ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ಪೂರೈಕೆಯಾಗುತ್ತಿದ್ದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಜನರು ಬಳಕೆ ನೀರನ್ನು ಬೇರೆ ಕಡೆಯಿಂದ ತರುವಂತಾಗಿದೆ.
ದುರಸ್ತಿ ವಿಳಂಬ, ಸಾರ್ವಜನಿಕರಿಗೆ ಸಮಸ್ಯೆ
ಕಳೆದ ಮರ‍್ನಾಲ್ಕು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಪೈಪ್‌ಲೈನ್ ಎಲ್ಲಿ ಒಡೆದಿದೆ ಎಂಬುದು ಪತ್ತೆಯಾಗದೇ ಇರುವುದರಿಂದ ದುರಸ್ತಿ ಕೆಲಸ ವಿಳಂಬವಾಗಿದೆ. ಸಂಪಿನಲ್ಲಿ ಶೇಖರಣೆಯಾಗಿರುವ ನೀರು ದುರ್ನಾತ ಬೀರುವುದನ್ನು ಗಮನಿಸಿದಾಗ ಚರಂಡಿ ನೀರು ಕುಡಿಯುವ ನೀರಿನಲ್ಲಿ ಬೆರೆತಿರುವುದು ಗೊತ್ತಾಗಿದೆ. ಸಂಪಿನಲ್ಲಿ ಚರಂಡಿ ನೀರು ಮಿಶ್ರಿತ ನೀರು ಸಂಗ್ರಹವಾಗಿರುವುದರಿAದ ಇಡೀ ಸಂಪನ್ನೇ ಸ್ವಚ್ಛಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ಭಾಗದ ನೂರಾರು ಮನೆಗಳಿಗೆ ಚರಂಡಿ ನೀರು ಮಿಶ್ರಿತ ನೀರು ಪೂರೈಕೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಡಿಯುವ ನೀರಿನ ಪೈಪ್‌ಲೈನ್ ಅವೈಜ್ಞಾನಿಕ ಅಳವಡಿಕೆ
ಕೆಲವೆಡೆ ಅವೈಜ್ಞಾನಿಕವಾಗಿ ಚರಂಡಿ ನೀರು ಹರಿಯುವಲ್ಲಿ ಪೈಪ್‌ಲೈನ್ ಅಳವಡಿಸಿದ್ದು, ಯಾವುದೇ ರೀತಿಯ ಮುಂಜಾಗತ್ರೆಗೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಪೈಪ್‌ಲೈನ್‌ನಲ್ಲಿ ಲೀಕೇಜ್ ಆದರೆ ಸಾಕು ಚರಂಡಿ ನೀರು ಪೈಪ್‌ನೊಳಗೆ ನುಗ್ಗಿ ಸರಬರಾಜಾಗುತ್ತದೆ. ಇಂತಹ ನೀರನ್ನು ಮಕ್ಕಳು, ವೃದ್ಧರು ಕುಡಿದರೆ ಅವರ ಆರೋಗ್ಯದ ಗತಿ ಏನು ಎಂದು ವಾರ್ಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
