ನಮ್ಮ ಸಿಂಧನೂರು, ಮಾರ್ಚ್ 30
ನಗರದಲ್ಲಿ ಶನಿವಾರ ಮಧ್ಯಾಹ್ನ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ತಾಪಮಾನ ದಾಖಲಾದ ಹಿನ್ನೆಲೆಯಲ್ಲಿ ಜನರು ತತ್ತರಿಸಿದರು. ಸದಾ ಜನ ಜಂಗುಳಿಯಿAದ ತುಂಬಿ ತುಳುಕುವ ತಹಸೀಲ್ ಕಾರ್ಯಾಲಯದ ಆವರಣ ಬಿಸಿಲಿನ ಕಾರಣಕ್ಕೆ ಬಿಕೋ ವಾತಾವರಣ ಕಂಡುಬಂತು. ಇನ್ನೂ ಮಧ್ಯಾಹ್ನ ಪ್ರಮುಖ ರಸ್ತೆಗಳಲ್ಲಿ ಸಾಧಾರಣ ವಾಹನ ದಟ್ಟಣೆ ಇತ್ತು. ಹೆಚ್ಚಿನ ಉಷ್ಣಾಂಶದ ಕಾರಣದಿಂದಾಗಿ ಬಹಳಷ್ಟು ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಗಂಗಾವತಿ ಮಾರ್ಗದ ರಸ್ತೆ, ರಾಯಚೂರು, ಕುಷ್ಟಗಿ ಮಾರ್ಗದ ರಸ್ತೆಯ ಗಿಡಗಳ ನೆರಳಿಗೆ ಜನರು ಆಶ್ರಯ ಪಡೆದಿದ್ದು ಕಂಡುಬಂತು. ದಿನದಿಂದ ದಿನಕ್ಕೆ ವಾತಾವರಣದಲ್ಲಿ ಬಿಸಿಲಿನ ಧಗೆ ಹೆಚ್ಚುತ್ತಿರುವುದಲ್ಲದೇ ಮಧ್ಯಾಹ್ನ 12 ಗಂಟೆ ಮೇಲ್ಪಟ್ಟು 4ಗಂಟೆ ಆಸುಪಾಸಿನವರೆಗೂ ಬಿಸಿಗಾಳಿ ಬೀಸುತ್ತಿರುವುದರಿಂದ ವೃದ್ಧರು, ಮಕ್ಕಳು ಸೇರಿದಂತೆ ಅನಾರೋಗ್ಯ ಪೀಡಿತರು ಸಮಸ್ಯೆ ಎದುರಿಸುತ್ತಿದ್ದಾರೆ.