ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಏಪ್ರಿಲ್ 01
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಹೊರ ರೋಗಿಗಳು ಚೀಟಿಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರದಾಟ ನಡೆಸಿದರು. ಬಿಸಿಲಿನ ತಾಪದ ನಡುವೆ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ಕೌಂಟರ್‌ನಲ್ಲಿ ಚೀಟಿ ಪಡೆಯಲು ಮುಗಿಬಿದ್ದಿದ್ದು ಕಂಡುಬAತು. ನೂರಾರು ಜನರು ಕೌಂಟರ್ ಮುಂದೆ ಜಮಾಯಿಸಿದ್ದರಿಂದ ಕೆಲವೊತ್ತು ಗೊಂದಲದ ವಾತಾವರಣ ಉಂಟಾಯಿತು. ಕಾವಲುವಾರ ಸಿಬ್ಬಂದಿ ಪರಿಸ್ಥಿತಿ ತಹಬಂದಿಗೆ ತರಲು ಹೆಣಗಾಡಿದರು.
ಒಂದೇ ಕೌಂಟರ್ ಸಮಸ್ಯೆಗೆ ಕಾರಣ !
ನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆ ಅರಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ಆದರೆ ಚೀಟಿ ವಿತರಿಸಲು ಒಂದೇ ಕೌಂಟರ್ ಇರುವುದರಿಂದ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಕೌಂಟರ್ ಹೆಚ್ಚಿಸದೇ ಇರುವುದರಿಂದ ಇರುವ ಒಂದೇ ಕೌಂಟರ್‌ನ ಮುಂದೆ ರೋಗಿಗಳು ಮುಗಿಬೀಳುವುದು ಸಾಮಾನ್ಯವಾಗಿದೆ. ಒಬ್ಬ ಮಾತ್ರ ಸಿಬ್ಬಂದಿ ಮಾತ್ರ ಚೀಟಿ ಮಾಡುತ್ತಿದ್ದು, ಇದರಿಂದ ಸಮಯ ತೆಗೆದುಕೊಳ್ಳುತ್ತಿದೆ. ಇದು ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಪಡೆಯಲು ಸಮಸ್ಯೆಯಾಗಿದೆ.
‘ಚೀಟಿ ಲೇಟಾಗಿ ಮಾಡ್ತಾರೆ’
“ಸಮಯಕ್ಕೆ ಸರಿಯಾಗಿ ಚೀಟಿ ಮಾಡುವುದಿಲ್ಲ. ದೂರದ ಊರಿಂದ ತ್ರಾಸ್‌ಪಟ್ಟು ಆಸ್ಪತ್ರೆಗೆ ಬಂದರ‍್ತೇವೆ. ಆದ್ರೆ ಸಮಯಕ್ಕೆ ಸರಿಯಾಗಿ ಚೀಟಿ ಮಾಡೋರೇ ಇರೋಲ್ಲ. ಇದ್ದವರನ್ನು ಕೇಳಿದ್ರೆ ತಡೀರಿ, ಆಮೇಲೆ ಮಾಡ್ತೇವೆ, ಇನ್ನೂ ಡಾಕ್ಟುç ಬಂದಿಲ್ಲ. ಎಂದು ಹೇಳ್ತಾರೆ. ಭಾಳ ಜನ ಬಂದ್ ಮ್ಯಾಲೆ ಚೀಟಿ ಮಾಡಾಕ ಶುರು ಮಾಡ್ತಾರೆ. ಅವಾಗ ರಶ್ ಆಗುತ್ತೆ” ಎಂದು ಸರದಿ ಸಾಲಿನಲ್ಲಿ ನಿಂತಿದ್ದ ಹೊರ ರೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಇನ್ನೊಂದು ಕೌಂಟರ್ ತೆರೆಯಿರಿ’
“100 ಬೆಡ್ ಆಸ್ಪತ್ರೆಯಲ್ಲಿ ಒಬ್ಬರೇ ಚೀಟಿ ಮಾಡಿದರೆ ಹೇಗೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದಾಗ ಸಮಸ್ಯೆಯಾಗುತ್ತದೆ. ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಿದ್ದು, ಮಕ್ಕಳಿಂದಿಡಿದು ವಯೋವೃದ್ಧರಾದಿಯಾಗಿ ಹಲವರಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಆಗಾಗ ಕೂಡಲೇ ತಾಲೂಕು ಆಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತೆ ವಹಿಸಿ ಇನ್ನೊಂದು ಕೌಂಟರ್ ತೆರೆಯಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.