ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 24
ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ್ ಕಾಟ್ವಾ ಅವರು, ಬಡ ಮಹಿಳೆಯರಿಗೆ ಹೆರಿಗೆ, ಬಾಣಂತಿಯರಿಗೆ ಸೂಕ್ತ ಸಲಹೆ ಹಾಗೂ ಮಹಿಳಾ ರೋಗಿಗಳಿಗೆ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡು ಜನಸ್ನೇಹಿ ವೈದ್ಯರಾಗಿ ಗುರುತಿಸಿಕೊಂಡಿದ್ದು, ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಅದೇ ಸ್ಥಾನದಲ್ಲಿ ಮುಂದುವರಿಸಬೇಕೆಂದು ವಿವಿಧ ಸಂಘಟನೆಗಳು, ಸರ್ಕಾರವನ್ನು ಆಗ್ರಹಿಸಿವೆ.
ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ತಾಲೂಕು ಆಸ್ಪತ್ರೆಯಲ್ಲಿ ವರದಿಯಾದ ನಂತರ ಮುಖ್ಯ ವೈದ್ಯಾಧಿಕಾರಿಯಾಗಿ ಕಾಟ್ವಾ ಅವರನ್ನು ನೇಮಿಸಲಾಗಿತ್ತು. ಆಗಿನಿಂದ ಆಸ್ಪತ್ರೆಯ ಪರಿಸ್ಥಿತಿ ಸುಧಾರಿಸಿದ್ದು, ಬಡ ಮಹಿಳೆಯರಿಗೆ ಇದ್ದುದರಲ್ಲಿಯೇ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಾನಾ ಕಾರಣ ನೆಪವೊಡ್ಡಿ ಇದ್ದಕ್ಕಿದ್ದಂತೆ ವೈದ್ಯರನ್ನು ವರ್ಗಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಿಂಧನೂರು ತಾಲೂಕಿನ ಮಹಿಳಾ ರೋಗಿಗಳಿಗೆ ಬಹಳಷ್ಟು ತೊಂದರೆಯಾಗಲಿದೆ ಅಸಮಾಧಾನ ವ್ಯಕ್ತಪಡಿಸಿವೆ.
‘ಜನಾದೇಶಕ್ಕೆ ಸರ್ಕಾರ ಮಣಿಯಲಿ’
ಸಿಂಧನೂರು ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯ-ವ್ಯಾಪಾರದ ತಾಲೂಕು ಕೇಂದ್ರವಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಿನವೂ ಹೊರ ಮತ್ತು ಒಳರೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಮಹಿಳಾ ರೋಗಿಗಳ ಪ್ರಮಾಣ ಜಾಸ್ತಿ ಇರುವುದರಿಂದ ತಜ್ಞ ವೈದ್ಯರ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲೇ ಇರುವ ನುರಿತ ವೈದ್ಯರನ್ನೇ ಸರ್ಕಾರ ಬೇರೆಕಡೆಗೆ ವರ್ಗಾವಣೆ ಮಾಡಿದರೆ ಹೇಗೆ ? ಸರ್ಕಾರಿ ಆಸ್ಪತ್ರೆಯನ್ನೆ ಅವಂಬಿಸಿರುವ ಬಡ ರೋಗಿಗಳ ಗತಿಯೇನು ? ಎಂದು ಸಂಘಟನೆಗಳು ಪ್ರಶ್ನಿಸಿವೆ. ಸರ್ಕಾರದ ಆದೇಶಕ್ಕಿಂತಲೂ ಜನಾದೇಶವೇ ಮುಖ್ಯ. ಜನಸ್ನೇಹಿಯಾಗಿರುವ ವೈದ್ಯ ನಾಗರಾಜ್ ಕಾಟ್ವಾ ಅವರ ವರ್ಗಾವಣೆಯನ್ನು ತಡೆಹಿಡಿಯಬೇಕು, ಜನಾದೇಶಕ್ಕೆ ಸರ್ಕಾರ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿವೆ.
ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿದ್ದ ವೈದ್ಯರೊಬ್ಬರನ್ನು ಸರ್ಕಾರ ಬೇರೆ ಕಡೆಗೆ ವರ್ಗಾಯಿಸಿದ ಸಂದರ್ಭದಲ್ಲಿ ಜನಸಾಮಾನ್ಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಹೋರಾಟಕ್ಕೆ ಮುಂದಾದ ಬೆನ್ನಲ್ಲೇ ಆ ಆದೇಶವನ್ನು ಕೈಬಿಟ್ಟು, ಪುನಃ ಅವರನ್ನು ಅಲ್ಲಿಯೇ ಮುಂದುವರಿಸಿತು. ಕೊನೆಗೆ ನಿವೃತ್ತಿಯಾಗುವವರೆಗೂ ಆ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಕೆಲಸ ನಿರ್ವಹಿಸಿದರು. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಾಯಿತು ಎಂದು ಸಂಘಟನೆ ಮುಖಂಡರೊಬ್ಬರು ಉದಾಹರಿಸುತ್ತಾರೆ.
‘ನುರಿತ ವೈದ್ಯ ಡಾ.ಕಾಟ್ವಾ’
ಬಡ ಕುಟುಂಬದ ಮೂಲದಿಂದ ಬಂದ ಡಾ.ನಾಗರಾಜ್ ಕಾಟ್ವಾ ಅವರು ರೋಗಿಗಳಿಗೆ ಸುಲಭವಾಗಿ ಸಿಗುತ್ತಾರೆ. ಗೈನಾಕಾಲಜಿಸ್ಟ್ ವಿಭಾಗದಲ್ಲಿ ನುರಿತ ತಜ್ಞ ವೈದ್ಯರಾಗಿದ್ದು ಇಲ್ಲಿಯವರೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ಮಹತ್ವದ ಶಸ್ತçಚಿಕಿತ್ಸೆಗಳನ್ನು ಕೈಗೊಂಡು ಜನಸ್ನೇಹಿಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಗೆ ಬಂದ ನಂತರ 24,456 ಹೆರಿಗೆ ಮಾಡಿಸಿದ್ದು, 11,193 ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ. ಅಲ್ಲದೇ ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಬಡ ಮಹಿಳೆಯರಿಗೆ ನೆರವಾಗಿರುವುದೇ ಸಾಕ್ಷಿಯಾಗಿದೆ. ವೃತ್ತಿಯಲ್ಲಿ ಅತ್ಯುತ್ತಮ ಟ್ರಾಕ್ ರೆಕಾರ್ಡ್ (ಸಾಧನೆ) ಹೊಂದಿರುವ ವೈದ್ಯರನ್ನು ಬೇರೆಡೆ ವರ್ಗಾಯಿಸುವುದರಿಂದ ಇಲ್ಲಿನ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂಬುದು ಟಿಯುಸಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಅವರ ಅಭಿಪ್ರಾಯವಾಗಿದೆ.
‘ಸಿಬ್ಬಂದಿಯೊಂದಿಗೆ ಉತ್ತಮ ಸಮನ್ವಯತೆ’
ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾ.ನಾಗರಾಜ್ ಕಾಟ್ವಾ ಅವರು ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಸಮನ್ವಯತೆ ಸಾಧಿಸಿರುವುದರಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಸಾಧ್ಯವಾಗಿದೆ. ಸಂದಿಗ್ದ ಪರಿಸ್ಥಿತಿಗಳಲ್ಲಿ ರೋಗಿಗಳ ಕಡೆಯವರಿಗೆ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೇ, ಸಿಬ್ಬಂದಿಗೂ ತಿಳಿವಳಿಕೆ ಹೇಳುವುದರಿಂದ ಆಸ್ಪತ್ರೆಯಲ್ಲಿ ವಿನಾಃಕಾರಣ ಕಿರಿಕಿರಿ ಉಂಟಾಗುವುದು ತಪ್ಪಿದೆ. ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುವುದರಿಂದ, ನಿಭಾಯಿಸುವುದು ಕಷ್ಟಸಾಧ್ಯವಾಗಿದೆ. ಕೊರತೆಯ ನಡುವೆಯೂ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ನುರಿತ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಇದ್ದರೆ ಕೆಳ ಹಂತದ ಸಿಬ್ಬಂದಿಗೂ ಧೈರ್ಯಬರುತ್ತದೆ” ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
‘ಶಾಸಕ ಹಂಪನಗೌಡರು, ಮಾಜಿ ಎಂಪಿ ವಿರೂಪಾಕ್ಷಪ್ಪನವರು ಸರ್ಕಾರಕ್ಕೆ ಪತ್ರ ಬರೆಯಲಿ’
‘ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ನಾಗರಾಜ್ ಕಾಟ್ವಾ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳಲು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಇನ್ನಿತರ ರಾಜಕೀಯ ಮುಖಂಡರು ರಾಜ್ಯ ಸರ್ಕಾರಕ್ಕೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದು ವರ್ಗಾವಣೆಯ ಆದೇಶವನ್ನು ರದ್ದುಗೊಳಿಸುವಂತೆ ಒತ್ತಡ ಹೇರಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.